ಸಕಲೇಶಪುರ (ಹಾಸನ ಜಿಲ್ಲೆ): ಇಲ್ಲಿನ ಸಕಲೇಶಪುರ–ಮಾರನಹಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದ ವೇಳೆ ಪರ್ಯಾಯ ಮಾರ್ಗವಾಗಿ ಬಳಸಲಾಗುತ್ತಿದ್ದ, ಹಾರ್ಲೆ–ನಡಹಳ್ಳಿ ನಡುವಿನ ಮುಖ್ಯ ರಸ್ತೆಯೂ ಸೇರಿದಂತೆ ಗುಡ್ಡದ ಭಾಗ ಕುಸಿದು 30 ಗ್ರಾಮಗಳ ಸಂಪರ್ಕ ಕಡಿತವಾಗಿದೆ.
ಕುಂಬರಡಿ, ನಡಹಳ್ಳಿ, ದೇಖಲ, ಮಲ್ಲಾಗದ್ದೆ, ಕಾಡಮನೆ ಸೇರಿದಂತೆ 30 ಗ್ರಾಮಗಳು, 40ಕ್ಕೂ ಹೆಚ್ಚು ಹ್ಯಾಮ್ಲೆಟ್ ಗ್ರಾಮಗಳಿಂದ ಹಾರ್ಲೆ ಎಸ್ಟೇಟ್, ಹಾರ್ಲೆ ಕೂಡಿಗೆ ಮಾರ್ಗವಾಗಿ ಸಕಲೇಶಪುರ, ಮೂಡಿಗೆರೆಗೆ ಇದ್ದ ಏಕೈಕ ಸಂಪರ್ಕ ರಸ್ತೆ ಇದು.
ಎತ್ತಿನಹೊಳೆ ಅವೈಜ್ಞಾನಿಕ ಕಾಮಗಾರಿಯಿಂದ ಸುಮಾರು 200 ಅಡಿ ಉದ್ದ ರಸ್ತೆ ಹಾಗೂ ಒಂದೂವರೆ ಎಕರೆ ಕಾಫಿ ತೋಟ, 300 ಅಡಿಗೂ ಹೆಚ್ಚು ದೂರದ ತೆಗ್ಗು ಪ್ರದೇಶಕ್ಕೆ ಕೊಚ್ಚಿ ಹೋಗಿದೆ. ಪುನರ್ ನಿರ್ಮಾಣ ಅಸಾಧ್ಯವೆನ್ನಿಸುವ ರೀತಿಯಲ್ಲಿ ರಸ್ತೆಯು ಆಳಕ್ಕೆ ಕುಸಿದಿದೆ.
‘ಈ ಪ್ರದೇಶದಲ್ಲಿ ವಾರ್ಷಿಕ 600 ಸೆ.ಮೀ.ಗೂ ಹೆಚ್ಚು ಮಳೆ ಸುರಿಯುತ್ತಿತ್ತು. ಆದರೂ ಭೂಕುಸಿತವಾಗಿರಲಿಲ್ಲ. ಹಾರ್ಲೆಯಲ್ಲಿ ರಸ್ತೆ ಹಾಗೂ ಕಾಫಿ ತೋಟ ಕುಸಿಯಲು ಅವೈಜ್ಞಾನಿಕ ಕಾಮಗಾರಿಯೇ ಕಾರಣ’ ಎಂದು ಕೆಲವು ದಿನಗಳ ಹಿಂದೆ ಸ್ಥಳ ಪರಿಶೀಲಿಸಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಷಾದಿಸಿದ್ದರು.
‘ಎತ್ತಿನಹಳ್ಳದ ಸೇತುವೆ ಪಕ್ಕದಲ್ಲಿ ಅಳವಡಿಸಿರುವ ಪೈಪ್‌ಲೈನ್ ಉದ್ದಕ್ಕೂ ರಸ್ತೆಯ ಕೆಳಭಾಗದ ಮಣ್ಣು ಕೊಚ್ಚಿ ಹೋಗಿದೆ. ಈ ರಸ್ತೆಯೂ ಶೀಘ್ರ ಕುಸಿದು, ವಾಹನ ಸಂಚಾರ ಬಂದ್ ಆಗಲಿದೆ’ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.
‘ಪೈಪ್ ಆಳಕ್ಕೆ ಅಳವಡಿಸಿಲ್ಲ. ಗಟ್ಟಿಯಾಗಿ ಮಣ್ಣು ಹಾಕಿಲ್ಲ. ಪ್ರಾಯೋಗಿಕವಾಗಿ ಹರಿಸಿದ ನೀರಿನ ರಭಸಕ್ಕೆ ಭೂಮಿ ಸಡಿಲಗೊಂಡಿತ್ತು. ಈ ಹಿಂದೆ ರಸ್ತೆಯುದ್ದಕ್ಕೂ ನಿರ್ಮಿಸಿದ್ದ ಚರಂಡಿ ಹಾಗೂ ಮೋರಿಗಳು ಈಗ ಇಲ್ಲ. ಮಳೆ ನೀರಿನ ರಭಸಕ್ಕೆ ಸಡಿಲು ಮಣ್ಣು ಕುಸಿಯುತ್ತಿದೆ’ ಎನ್ನುತ್ತಾರೆ.
‘ರಸ್ತೆ ಕುಸಿದಿದ್ದರಿಂದ ಸಕಲೇಶಪುರ, ಹಾನುಬಾಳಿನ ಶಾಲೆಗಳಿಗೆ ಹೋಗಿ ಬರಲು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಈ ರಸ್ತೆಯನ್ನು ಮತ್ತೆ ನಿರ್ಮಿಸುತ್ತಾರೆಂಬ ಭರವಸೆಯೂ ಇಲ್ಲ’ ಎಂಬುದು ಅವರ ಆತಂಕ.
‘ನಡುಗುವ ಭೂಮಿ’
‘ಈ ರಸ್ತೆಯ ಪಕ್ಕದ ಲ್ಲಿಯೇ, 10 ಅಡಿ ಸುತ್ತಳತೆಯ ಭಾರಿ ಗಾತ್ರದ ಕಬ್ಬಿಣದ ಪೈಪ್‌ಗಳನ್ನು, 20 ಅಡಿ ಆಳ, 15 ಅಡಿ ಅಗಲಕ್ಕೆ ಭೂಮಿಯನ್ನು ಸೀಳಿಕೊಂಡು ಅಳವಡಿಸಲಾಗಿದೆ. ಅದರಿಂದ ರಸ್ತೆಯ ಪಕ್ಕದಲ್ಲಿ ಭೂಮಿ ಸಂಪೂರ್ಣ ಸಡಿಲಗೊಂಡಿದೆ. ಆ ಪೈಪ್ ಮೂಲಕ ಇತ್ತೀಚೆಗೆ 2 ಸಾವಿರ ಎಚ್‌ಪಿ ಪಂಪ್‌ನಿಂದ ಪ‍್ರಾಯೋಗಿಕವಾಗಿ ನೀರು ಹರಿಸಿದ್ದು, ಪೈಪ್‌ಲೈನ್ ಹಾದು ಹೋಗಿರುವ ಅಕ್ಕ ಪಕ್ಕ ಭೂಮಿ ನಡುಗುತ್ತಿದ್ದ ಅನುಭವ ನಮಗೆಲ್ಲ ಆಗಿದೆ’ ಎಂದು ಹೆಬ್ಬಸಾಲೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಬಿ. ಲಕ್ಷ್ಮಣ್ ‘ಪ್ರಜಾವಾಣಿ’ ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.