ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೈತರ ಕೈ ಹಿಡಿದ ಸಿಹಿ ಕುಂಬಳ

ದೊಡ್ಡಬ್ಯಾಡಗೆರೆ ಭಾಗದ ಬಿತ್ತನೆ ಬೀಜಕ್ಕೆ ಹೆಚ್ಚುತ್ತಿರುವ ಬೇಡಿಕೆ
ಎಚ್.ಎಸ್. ಅನಿಲ್ ಕುಮಾರ್
Published 22 ಜೂನ್ 2024, 6:45 IST
Last Updated 22 ಜೂನ್ 2024, 6:45 IST
ಅಕ್ಷರ ಗಾತ್ರ

ಹಳೇಬೀಡು: 4 ವರ್ಷಗಳಿಂದ ಸಿಹಿ ಕುಂಬಳ ಹಳೇಬೀಡು ಭಾಗದ ಸಾಕಷ್ಟು ರೈತರನ್ನು ಕೈಹಿಡಿದಿದೆ. ಈ ವರ್ಷ ಮಳೆ ಸಮೃದ್ದವಾಗಿ ಸುರಿದಿರುವುದರಿಂದ ಸಿಹಿ ಕುಂಬಳ ಹುಲುಸಾಗಿ ಬೆಳೆಯುತ್ತಿದ್ದು, ಬೆಳೆಗಾರರಲ್ಲಿ ಹರ್ಷ ವ್ಯಕ್ತವಾಗಿದೆ.

ನೀರಾವರಿ ಹಾಗೂ ಮಳೆ ಆಶ್ರಿತ ಎರಡರಲ್ಲಿಯೂ ಬೆಳೆಯಬಹುದಾದ ಸಿಹಿ ಕುಂಬಳ ಅಪರೂಪದ ಬೆಳೆ. ಕಡಿಮೆ ಶ್ರಮದ ಕೃಷಿಯಾಗಿದೆ. ಹಳೇಬೀಡು ಭಾಗದ ಮಣ್ಣು ಹಾಗೂ ಹವಾಮಾನ ಬೆಳೆಗೆ ಹೊಂದಿಕೊಂಡಿದ್ದು, ರೈತರು ಸಿಹಿ ಕುಂಬಳದತ್ತ ಆಸಕ್ತಿ ವಹಿಸಿದ್ದಾರೆ. ಹಳೇಬೀಡು, ಮಾದಿಹಳ್ಳಿ ಹಾಗೂ ಕಸಬಾ ಹೋಬಳಿಯಲ್ಲಿ ಸಾಕಷ್ಟು ರೈತರು ಸಿಹಿ ಕುಂಬಳ ಬೆಳೆದಿದ್ದಾರೆ. ಬೇಲೂರು ತಾಲ್ಲೂಕಿನಲ್ಲಿ ಅಂದಾಜು 150 ಎಕರೆಯಲ್ಲಿ ಸಿಹಿ ಕುಂಬಳ ಬೆಳೆಯಲಾಗಿದೆ.

ಕಳೆದ ವರ್ಷ ಸಿಹಿ ಕುಂಬಳ ಬೆಳೆಗಾರರಿಗೆ ನಷ್ಟ ಆಗಲಿಲ್ಲ. ಹಾಕಿದ ಬಂಡವಾಳ ಕಳೆದು ರೈತರ ಕೈಯಲ್ಲಿಯೂ ಹಣ ಉಳಿಯಿತು. ಬರಗಾಲದ ನಡುವೆ ಆಗೊಮ್ಮೆ, ಈಗೊಮ್ಮೆ ಬಿದ್ದ ಮಳೆಯಲ್ಲಿಯೂ ಬೆಳೆ ಬೆಳೆಯಿತು. ಕಡಿಮೆ ಮಳೆ ಹಾಗೂ ಅಧಿಕ ಮಳೆ ಎರಡರಲ್ಲಿಯೂ ಬೆಳೆಯಬಹುದಾದ ಸುಧಾರಿತ ತಳಿ ರೈತರಿಗೆ ಅನುಕೂಲವಾಗಿದೆ. ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಪೂರೈಕೆಯಾಗುತ್ತಿದೆ. ಹೀಗಾಗಿ ಉತ್ತಮ ಫಸಲು ಖಚಿತ ಎಂಬ ಆತ್ಮವಿಶ್ವಾಸ ರೈತರಲ್ಲಿ ಹೆಚ್ಚಾಗಿದೆ.

ಹಳೇಬೀಡು, ಕೆ.ಮಲ್ಲಾಪುರ, ಅಡಗೂರು, ಘಟ್ಟದಹಳ್ಳಿ, ದೊಡ್ಡಬ್ಯಾಡಗೆರೆ ಭಾಗದಲ್ಲಿ ಸಾಕಷ್ಟು ರೈತರು ಸಿಹಿ ಕುಂಬಳ ಬೆಳೆದಿದ್ದಾರೆ. ದೊಡ್ಡಬ್ಯಾಡಗೆರೆ, ಘಟ್ಟದಹಳ್ಳಿಯಲ್ಲಿ ಬೀಜೋತ್ಪಾದನೆಯ ಕುಂಬಳ ಬೆಳೆಯುತ್ತಿದ್ದಾರೆ. ಕಸಬಾ ಹೋಬಳಿ ದೊಡ್ಡಬ್ಯಾಡಗೆರೆ ರೈತರು 10 ವರ್ಷದಿಂದಲೂ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಬೀಜೋತ್ಪಾದನೆಯ ಕುಂಬಳ ಕೃಷಿ ನಡೆಸುತ್ತಿದ್ದಾರೆ. ದೊಡ್ಡಬ್ಯಾಡಗೆರೆಯಲ್ಲಿ ಫಸಲು ಉತ್ತಮವಾಗಿ ಬರುತ್ತಿದ್ದು, ಬೀಜ ದೃಢವಾಗಿರುವುದರಿಂದ ಕಂಪನಿಯವರು ದೊಡ್ಡಬ್ಯಾಡಗೆರೆ ಭಾಗದ ಜಮೀನಿನಲ್ಲಿ ಸಿಹಿ ಕುಂಬಳ ಕೃಷಿ ಮಾಡಿಸುತ್ತಿದ್ದಾರೆ.

ಉಳಿದಂತೆ ಹಳೇಬೀಡು ಭಾಗದ ಬಹುತೇಕ ಫಸಲು ಆಹಾರದ ಬಳಕೆಗೆ ಪೂರೈಕೆಯಾಗುತ್ತಿದೆ. ಸ್ಥಳೀಯ ಮಾರುಕಟ್ಟೆಗಿಂತ ಕೊಲ್ಕತ್ತ, ನವದೆಹಲಿ ಮೊದಲಾದ ಹೊರರಾಜ್ಯಗಳಿಗೆ ಕುಂಬಳ ಸರಬರಾಜಾಗುತ್ತಿದೆ. ಗುಣಮಟ್ಟದ ಫಸಲು ಬರುತ್ತಿರುವುದರಿಂದ ಹೊರ ರಾಜ್ಯದವರು ಹಳೇಬೀಡು ಭಾಗದ ಸಿಹಿ ಕುಂಬಳ ಖರೀದಿಗೆ ಮುಗಿಬೀಳುತ್ತಾರೆ ಎಂಬ ಮಾತು ರೈತರಿಂದ ಕೇಳಿ ಬರುತ್ತಿದೆ.

ಬೆಳೆಗೆ ರೋಗ ಬಾಧೆ ಕಡಿಮೆ:

ಕುಂಬಳದ ಬಳ್ಳಿಯಲ್ಲಿ ಹೂವು, ಕಾಯಿ ಕಟ್ಟುವಾಗ ಮಿಡತೆ ಕುಕ್ಕುತ್ತದೆ. ಈ ವೇಳೆಯಲ್ಲಿ ರೈತರು ಎಚ್ಚರ ವಹಿಸಬೇಕು. ಬೆಳೆಗೆ ಮಿಡತೆ ಲಗ್ಗೆ ಹಾಕಿದ ತಕ್ಷಣ ಕೀಟನಾಶಕ ಸಿಂಪಡಣೆ ಮಾಡಿದರೆ ಬಳ್ಳಿಯಲ್ಲಿ ಕಾಯಿ ನಿಂತು ಬಲಿಯುತ್ತದೆ. ಮಿಡತೆ ಕಾಟ ಹೊರತು ಪಡಿಸಿದರೆ, ಬೆಳೆಗೆ ರೋಗ ತಗುಲುವುದು ತೀರಾ ಕಡಿಮೆ ಎನ್ನುತ್ತಾರೆ ಬೆಳೆಗಾರ ಎಂ.ಕೆ.ಹುಲೀಗೌಡ.

ಕಡಿಮೆ ವೆಚ್ಚದ 4 ತಿಂಗಳ ಬೆಳೆ ಸಿಹಿ ಕುಂಬಳ ಮಳೆ ಆಶ್ರಿತ, ನೀರಾವರಿ ಎರಡರಲ್ಲಿಯೂ ಕೃಷಿ ಸಾಧ್ಯ ಕಡಿಮೆ ಬಂಡವಾಳದಲ್ಲಿ ಅಧಿಕ ಆದಾಯ

ಸಿಹಿ ಕುಂಬಳ ಹಳೇಬೀಡು ಭಾಗದ ಪ್ರಮುಖ ಬೆಳೆ ಅಲ್ಲ. ಬೆಳೆ ಆರೋಗ್ಯಕರವಾಗಿ ಇರುವುದಲ್ಲದೇ ಫಸಲು ಉತ್ತಮವಾಗಿ ಇರುವುದರಿಂದ ರೈತರು ಸಿಹಿ ಕುಂಬಳ ಬೆಳೆಯಬಹುದು.

-ಸದಾನಂದ ಕುಂಬಾರ ಸಹಾಯಕ ತೋಟಗಾರಿಕಾ ಅಧಿಕಾರಿ

ಸಿಹಿ ಕುಂಬಳದ ಕೃಷಿ ರೈತರಿಗೆ ವರದಾನವಾಗಿದೆ. ಕುಂಬಳದಿಂದ ಕೆಡದಂತಹ ಆಹಾರ ಪದಾರ್ಥ ಉತ್ಪಾದಿಸುವ ಘಟಕ ಆರಂಭಿಸಿದರೆ ರೈತರಿಗೆ ಅನುಕೂಲ ಆಗುತ್ತದೆ.

-ಸಂತೋಷ್ ರೈತ ಘಟ್ಟದಹಳ್ಳಿ‌

ಕಡಿಮೆ ವೆಚ್ಚದ ಬೆಳೆ ಸಿಹಿ ಕುಂಬಳ ಕೃಷಿಗೆ ಪರಿಪೂರ್ಣವಾಗಲು 4 ತಿಂಗಳು ಬೇಕು. ಮನೆ ಮಂದಿ ಕೆಲಸ ಮಾಡಿದರೆ ಕೂಲಿಗಾಗಿ ಹೆಚ್ಚಿನ ಹಣ ವೆಚ್ಚವಾಗುವುದಿಲ್ಲ. ಬಿತ್ತನೆ ಕುಂಟೆ ಹೊಡೆಯುವುದು ಔಷಧ ಸಿಂಪಡಣೆ ಹಾಗೂ ಗೊಬ್ಬರ ಹಾಕುವುದಕ್ಕೆ ಕಾರ್ಮಿಕರನ್ನು ಅವಲಂಬಿಸಿದರೆ ಬಂಡವಾಳ ಕೊಂಚ ಹೆಚ್ಚಾಗುತ್ತದೆ. ಒಟ್ಟಾರೆ ಕನಿಷ್ಠ ಎಂದರೂ ಒಂದು ಎಕರೆಗೆ ₹10 ಸಾವಿರದಿಂದ ₹ 15 ಸಾವಿರದವರೆಗೆ ಖರ್ಚು ಬರುತ್ತದೆ. ಕೆ.ಜಿ.ಗೆ ₹ 10 ರಂತೆ ಬೆಲೆ ದೊರಕಿದರೂ ಎಕರೆಗೆ ₹ 80ಸಾವಿರ ಸಂಪಾದಿಸಬಹುದು. ಜಮೀನಿನ ಒಳಗೆ ಲಾರಿ ನಿಲ್ಲಿಸಿ ಕುಂಬಳ ತುಂಬಿಸುವಂತಿದ್ದರೆ ಲೋಡಿಂಗ್ ವೆಚ್ಚ ಕಡಿಮೆಯಾಗುತ್ತದೆ’ ಎನ್ನುತ್ತಾರೆ ರೈತ ಎಂ.ಕೆ. ಹುಲೀಗೌಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT