ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಅನಿವಾರ್ಯ

'ದ.ಸಂ.ಸ. ಹುಟ್ಟು-ಬೆಳವಣಿಗೆ ಮತ್ತು ಸವಾಲು’ ಕುರಿತ ವಿಚಾರ ಸಂಕಿರಣ
Last Updated 26 ನವೆಂಬರ್ 2020, 4:05 IST
ಅಕ್ಷರ ಗಾತ್ರ

ಹಾಸನ: ಸ್ವಸ್ಥ ಸಮಾಜಕ್ಕೆ ಧಕ್ಕೆ ತರುತ್ತಿರುವ ಕೋಮುವಾದಿ ಶಕ್ತಿಗಳ ವಿರುದ್ಧ ಪ್ರಬಲ ಹೋರಾಟ ಅನಿವಾರ್ಯವಾಗಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಹೇಳಿದರು.

ನಗರದ ಸ್ವಾಭಿಮಾನ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಬುಧವಾರ ಏರ್ಪಡಿಸಿದ್ದ 'ಕದಸಂಸ ಹುಟ್ಟು- ಬೆಳವಣಿಗೆ ಮತ್ತು ಸವಾಲುಗಳು’ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಕಳೆದ ಆರು ವರ್ಷದಿಂದ ದೇಶದಲ್ಲಿ ಅಸಮಾನತೆ ಹೆಚ್ಚಿದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ ವಿರುದ್ಧ ಕೆಂಡಕಾರುತ್ತಿದೆ’ ಎಂದು ಆರೋಪಿಸಿದರು.

‘ಕರ್ನಾಟಕ ದಲಿತ ಸಂಘರ್ಷ ಸಮಿತಿ ನಾಡಿನ ಶೋಷಿತರ, ಬಡವರ, ದುರ್ಬಲ ವರ್ಗಗಳ ವಿಮೋಚನೆಗಾಗಿ ಸಾಕಷ್ಟು ಕೆಲಸ ಮಾಡಿದೆ. 1974ರಲ್ಲಿ ಪ್ರೊ.ಬಿ.ಕೃಷ್ಣಪ್ಪ ಅವರಿಂದ ಸ್ಥಾಪಿಸಲ್ಪಟ್ಟ ಸಮಿತಿ ರಾಜ್ಯದಾದ್ಯಂತ ಮನೆ- ಮನಗಳಲ್ಲಿ ನೆಲೆಯೂರಿದೆ. ಅಸ್ಪೃಶ್ಯತೆ, ಅಸಮಾನತೆ, ಲಿಂಗ ತಾರತಮ್ಯ, ದೌರ್ಜನ್ಯ, ಮೂಢನಂಬಿಕೆ ಹಾಗೂ ಇನ್ನಿತರ ಅನಿಷ್ಟ ಪದ್ಧತಿಗಳ ವಿರುದ್ಧ ಜಾಗೃತಿ, ಪ್ರತಿಭಟನೆ ಮಾಡುತ್ತಾ ಬಂದಿದೆ’ ಎಂದು ಹೇಳಿದರು.

‘ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಮಹಿಳೆ ಮತ್ತು ಬಾಲಕಿಯರ ಮೇಲೆ ಅತ್ಯಾಚಾರ, ಪ್ರಾಣ ಹಾನಿ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಪರಿಶಿಷ್ಟ ಜಾತಿಯ ಹೆಣ್ಣು ಮಗಳ ಮೇಲೆ ಅತ್ಯಾಚಾರಗೈದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಹಿಂದೆ ಉತ್ತರ ಪ್ರದೇಶದ ಶಾಸಕ ಕುಲ್‍ದೀಪ್‍ಸಂಗರ್ ‘ಉನ್ನಾವ್’ನಲ್ಲಿ ಪರಿಶಿಷ್ಟ ಜಾತಿಯ ಹೆಣ್ಣು ಮಗಳ ಮೇಲೆ ಅತ್ಯಾಚಾರವೆಸಗಿ, ಸಂತ್ರಸ್ತೆಯ ತಂದೆಯನ್ನು ಸಹ ಅಮಾನುಷವಾಗಿ ಹತ್ಯೆ ಮಾಡಿ ಈಗ ಜೈಲಿನಲ್ಲಿದ್ದಾನೆ. ಈ ಘಟನೆಗಳನ್ನು ಮುಚ್ಚಿ ಹಾಕಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ತೆರೆಮರೆ ಕಸರತ್ತು ನಡೆಸುತ್ತಿದೆ’ ಎಂದು ಕಿಡಿಕಾರಿದರು.

‘ದೇಶದ ಆರ್ಥಿಕ ಸೂಚ್ಯಂಕ ಹಿಮ್ಮುಖವಾಗಿ ಸಾಗುತ್ತಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದುರಾಡಳಿತದಿಂದಾಗಿ ಬಡವರು, ದುರ್ಬಲ ವರ್ಗದವರು ತಮ್ಮ ಜೀವನವನ್ನು ಕಟ್ಟಿಕೊಳ್ಳಲಾಗದೆ ಕಂಗಾಲಾಗಿದ್ದಾರೆ ಎಂದ ಅವರು, ಒಟ್ಟಾರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶವನ್ನು ಅರಾಜಕತೆ ಅಂಚಿಗೆ ತಂದು ನಿಲ್ಲಿಸಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಬಂಧುಗಳು, ಪ್ರಜ್ಞಾವಂತ ನಾಗರಿಕರು ಈ ಕೋಮುವಾದಿ, ಜನವಿರೋಧಿ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಮೈಕೊಡವಿ ಧ್ವನಿ ಎತ್ತಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕ.ದ.ಸಂ.ಸ.ವನ್ನು ಕ್ರಿಯಾಶೀಲಗೊಳಿಸಿ ಮತ್ತಷ್ಟು ಸದೃಢಗೊಳಿಸಲು ಕಾರ್ಯಕರ್ತರು ಮುಂದಾಗಬೇಕು’ ಎಂದು ಕರೆ ಕೊಟ್ಟರು.

ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕೃಷ್ಣದಾಸ್, ನಿವೃತ್ತ ಪ್ರಾಂಶುಪಾಲ ಶಿವಬಸಪ್ಪ, ನಿವೃತ್ತ ಅಧಿಕಾರಿಗಳ ಸಂಘದ ಸೀತಾರಾಮಯ್ಯ, ಮಡಿಕೇರಿ ಪ್ರಾಧ್ಯಾಪಕ ಅತ್ನಿ ಮಹಾದೇವ್, ಜಿಲ್ಲಾ ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಓ. ಮಹಾಂತಪ್ಪ, ಪ್ರಾಧ್ಯಾಪಕ ಬಿ.ಎಲ್. ರಾಜು, ಜವರಪ್ಪ, ಬಾಬು ಜಗಜೀವನ್ ರಾಂ ಮಾದಿಗ ದಂಡೋರ ಮಹಾಸಭಾ ವೇದಿಕೆ ಅಧ್ಯಕ್ಷ ಎಚ್.ಪಿ. ಶಂಕರರಾಜು, ಅತ್ನಿ ಕೃಷ್ಣ, ಸ್ವೀವನ್ ಪ್ರಕಾಶ್ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT