ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನದಲ್ಲಿ ಪಟಾಕಿ ವ್ಯಾಪಾರ ಕುಸಿತ

ಕೋವಿಡ್‌ ಪ್ರಕರಣ ಹೆಚ್ಚಳ: ಹಸಿರು ಪಟಾಕಿ ಅವಕಾಶದ ಗೊಂದಲ
Last Updated 15 ನವೆಂಬರ್ 2020, 13:38 IST
ಅಕ್ಷರ ಗಾತ್ರ

ಹಾಸನ: ಕೋವಿಡ್‌ ಪ್ರಕರಣ ಹೆಚ್ಚುತ್ತಿರುವುದು ಹಾಗೂ ಹಸಿರು ಪಟಾಕಿ ಕುರಿತ ಗೊಂದಲದಿಂದಾಗಿ ಜಿಲ್ಲೆಯಲ್ಲಿ ಈ ಬಾರಿ ಪಟಾಕಿ ವ್ಯಾಪಾರ ಕುಸಿತ ಕಂಡಿದೆ. ವ್ಯಾಪಾರಿಗಳ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 30ರಷ್ಟು ಕಡಿಮೆ ಆಗಿದೆ.

ಜಿಲ್ಲಾ ಕ್ರೀಡಾಂಗಣದಲ್ಲಿ 36 ಪಟಾಕಿ ಮಳಿಗೆ ತೆರೆಯಲಾಗಿದ್ದು, ಹೊರ ರಾಜ್ಯಗಳಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಪಟಾಕಿ ತರಿಸಲಾಗಿದೆ. ಕೆಲ ಅಂಗಡಿಗಳು ಖಾಲಿ ಖಾಲಿಯಾಗಿವೆ. ಬೆರಳಣಿಕೆ ಮಂದಿಯಷ್ಟೇ ಖರೀದಿ ಮಾಡುತ್ತಿದ್ದಾರೆ.

ನರಕ ಚತುರ್ದಶಿ ದಿನವಾದ ಶನಿವಾರ ಸ್ವಲ್ಪ ಪ್ರಮಾಣದಲ್ಲಿ ಪಟಾಕಿ ಖರೀದಿಸಿದ್ದರು. ಭಾನುವಾರ ಸಂಜೆ ವೇಳೆಗೆ ವ್ಯಾಪಾರದಲ್ಲಿ ಅಲ್ಪ ಚೇತರಿಕೆ ಕಂಡಿತ್ತು. ಮಕ್ಕಳು, ಯುವಕರು ಚಿಲ್ಲರೆ ಅಂಗಡಿಗಳ ಮಾಲೀಕರು ಪಟಾಕಿಗಳನ್ನು ಖರೀದಿಸಿದರು.

ಹಬ್ಬಕ್ಕೆ ಕೆಲವೇ ದಿನ ಇರುವಾಗ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ನೀಡಿರುವುದು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ತಂದ ಪಟಾಕಿ ಏನು ಮಾಡಬೇಕು ಎಂಬುದು ವ್ಯಾಪಾರಿಗಳ ಪ್ರಶ್ನೆಯಾಗಿದೆ.

ಒಂದು ಬಾಕ್ಸ್‌ ಪಟಾಕಿಗೆ ₹100 ದಿಂದ 3,000 ವರೆಗೂ ಬೆಲೆ ಇದ್ದು, ಸುರ್‌ಸುರ್‌ ಬತ್ತಿ, ಹೂವಿನ ಕುಂಡ, ನೆಲೆ ಚಕ್ರ
ಸೇರಿದಂತೆ ಬಣ್ಣ ಬಣ್ಣದ ಬೆಳಕು ಸೂಸುವ ಪಾಟಕಿಗಳು ಮಾರಾಟವಾದವು.

‘ಕೋವಿಡ್‌-19 ಹಿನ್ನೆಲೆಯಲ್ಲಿ ಪಟಾಕಿ ಮಾರಾಟಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಆದೇಶದಿಂದ ಗೊಂದಲ ಉಂಟಾಗಿದೆ. ಮೊದಲು ಪಟಾಕಿ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿತು. ನಂತರ ಹಸಿರು ಪಟಾಕಿ ಬಳಸಲು ಅನುಮತಿ ನೀಡಿತು. ಗ್ರಾಹಕರು ಹಸಿರು ಪಟಾಕಿ ಕೇಳುತ್ತಿದ್ದಾರೆ. ಹಸಿರು ಪಟಾಕಿ ಎಂದರೇನು ಎಂಬ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ. ಈ ಬಾರಿ ಪಟಾಕಿ ಮಾರಾಟ ಶೇಕಡಾ 30 ರಷ್ಟು ಕುಸಿತವಾಗಿದೆ’ಎಂದು ವ್ಯಾಪಾರಿ ರಮೇಶ್‌ ಬಾಬು ಬೇಸರ ವ್ಯಕ್ತಪಡಿಸಿದರು.

‘ಪ್ರತಿ ವರ್ಷ ಪಟಾಕಿ ವ್ಯಾಪಾರ ಜೋರಾಗಿ ನಡೆಯುತ್ತಿತ್ತು. ಈ ಬಾರಿ ವ್ಯಾಪಾರವೇ ಇಲ್ಲ. ಅನೇಕರು ಮನೆಯ ಆಭರಣಗಳನ್ನು ಅಡವಿಟ್ಟು, ಬಡ್ಡಿ ಸಾಲ ಮಾಡಿ ಪಟಾಕಿಗೆ ಬಂಡವಾಳ ಹಾಕಿದ್ದಾರೆ. ಇದರಿಂದ ತುಂಬಾ ನಷ್ಟ ಉಂಟಾಗಿದೆ. ಹಬ್ಬಕ್ಕೆ ಮೊದಲೇ ನಿಷೇಧದ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡಿದ್ದರೆ ಬಂಡವಾಳ ಹಾಕುತ್ತಲೇ ಇರಲಿಲ್ಲ. ಕೇವಲ ಹಸಿರು ಪಟಾಕಿನ್ನಷ್ಟೇ ತರಿಸುತ್ತಿದ್ದೆವು. ’ಎನ್ನುತ್ತಾರೆ ವ್ಯಾಪಾರಿ ಬಾಲಕೃಷ್ಣ ಅಳಲು ತೋಡಿಕೊಂಡರು.

‘ಶಿವಕಾಶಿಯಿಂದ ಮೂರು ತಿಂಗಳು ಮೊದಲೇ ಪಟಾಕಿ ತರಿಸಲಾಗಿದೆ. ಈ ಬಾರಿ ವ್ಯಾಪಾರವಿಲ್ಲದೆ ನಷ್ಟ ಅನುಭವಿಸಬೇಕಾಗಿದೆ. ಇನ್ನು ಎರಡು ದಿನ ಮಾರಾಟಕ್ಕೆ ಅವಕಾಶ ಇರುವುದರಿಂದ ವ್ಯಾಪಾರದಲ್ಲಿ ಚೇತರಿಕೆ ಕಾಣಬಹುದು. ಕೆಲ ವರ್ಷಗಳಿಂದ ಹೆಚ್ಚು ಮಾಲಿನ್ಯಕಾರಕ ಪಟಾಕಿಗಳ ಉತ್ಪಾದನೆ ಕಡಿಮೆಯಾಗಿದೆ. ಹಸಿರು ಪಟಾಕಿಗಳ ತಯಾರಿಕೆಗೆ ಗಮನ ನೀಡಲಾಗುತ್ತಿದೆ’ ಎಂದು ಪಟಾಕಿ ವ್ಯಾಪಾರಿ ರಘು ತಿಳಿಸಿದರು.

‘ಹಸಿರು ಪಟಾಕಿ ಎಂದರೆ ಏನು ಎಂಬುದು ವ್ಯಾಪಾರಿಗಳಿಗೆ ಗೊತ್ತಿಲ್ಲ. ಮಕ್ಕಳು ಪಟಾಕಿ ಬೇಕೆಂದು ಹಟ ಹಿಡಿದರು. ಒಂದು ಸಾವಿರ ರೂಪಾಯಿ ಕೊಟ್ಟು ಪಟಾಕಿ ಬಾಕ್ಸ್‌ ಖರೀದಿಸಿದ್ದೇನೆ’ ಎಂದು ಗ್ರಾಹಕ ಉಲ್ಲಾಸ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT