ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತರಿಕೆಯತ್ತ ಹೋಟೆಲ್ ಉದ್ಯಮ

ಲಾಕ್‌ಡೌನ್‌ ಸಡಿಲಗೊಂಡ ಬಳಿಕ ಸಹಜ ಸ್ಥಿತಿಗೆ ಮರಳುತ್ತಿರುವ ವಹಿವಾಟು
Last Updated 7 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಹಾಸನ: ಆರ್ಥಿಕ ಸಂಕಷ್ಟದಲ್ಲಿದ್ದ ಹೋಟೆಲ್‌ ಉದ್ಯಮ ಚೇತರಿಕೆ ಹಾದಿಯತ್ತ ಸಾಗಿದ್ದು, ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಳವಾಗುತ್ತಿದೆ.

ಲಾಕ್‌ಡೌನ್‌ ಸಡಿಲಗೊಂಡ ನಂತರ ಜಿಲ್ಲೆಯಾದಾದ್ಯಂತ ಹೋಟೆಲ್‌ಗಳು ಆರಂಭಗೊಂಡಿದ್ದು, ಗ್ರಾಹಕರ ಆರೋಗ್ಯ
ದೃಷ್ಟಿಯಿಂದ ಹೋಟೆಲ್‍, ರೆಸ್ಟೋರೆಂಟ್‌, ಡಾಬಾಗಳಲ್ಲಿ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಲಾಕ್‌ಡೌನ್‌ ತೆರವುಗೊಂಡರೂ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದ ಕಾರಣ ಹೋಟೆಲ್‌ಗಳಿಗೆ ಗ್ರಾಹಕರು ಬರಲು ಹಿಂದೇಟು ಹಾಕುತ್ತಿದ್ದರು. ಹೆಚ್ಚಾಗಿ ಪಾರ್ಸೆಲ್ ಕೊಂಡೊಯ್ಯುತ್ತಿದ್ದರು.

ಆದರೆ, ಈಗ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಬಸ್‌ ಸಂಚಾರ ಆರಂಭಗೊಂಡಿದೆ. ಹಾಗಾಗಿ ದಿನದಿಂದ ದಿನಕ್ಕೆ ಹೋಟೆಲ್‌, ರೆಸ್ಟೋರೆಂಟ್‌ ಭೇಟಿ ನೀಡುವ ಗ್ರಾಹಕರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ನಗರದ ಬಿ.ಎಂ. ರಸ್ತೆಯಲ್ಲಿ ಸಸ್ಯಾಹಾರ, ಮಾಂಸಾಹಾರ ಹೋಟೆಲ್‌ಗಳು, ಟೀ ಶಾಪ್‌ಗಳಲ್ಲೂ ಉತ್ತಮ
ವ್ಯಾಪಾರವಾಗುತ್ತಿದೆ. ನಗರ ಬಸ್‌ ನಿಲ್ದಾಣ ಹಾಗೂ ಹೊಸ ಬಸ್‌ ನಿಲ್ದಾಣಗಳ ಸುತ್ತಮುತ್ತ ಇರುವ ಹತ್ತಾರು ಹೋಟೆಲ್‌,
ವಸತಿಗೃಹಗಳಲ್ಲೂ ವಹಿವಾಟು ಚೇತರಿಕೆ ಕಾಣುತ್ತಿದೆ.

ನಗರದ ಕೆಲ ಹೋಟೆಲ್‌ಗಳಿಗೆ ಭೇಟಿ ನೀಡಿದ ವೇಳೆ, ಗ್ರಾಹಕರ ನಡುವೆ ಅಂತರ ಪಾಲನೆ ಮಾಡುತ್ತಿರಲಿಲ್ಲ, ಕ್ಯಾಂಟೀನ್‌‌, ಮಾಂಸಾಹಾರದ ಹೋಟೆಲ್‌ಗಳಲ್ಲಿ ಅಕ್ಕಪಕ್ಕದಲ್ಲೇ ಕೂರಿಸಿ ತಿನಿಸು ನೀಡುತ್ತಿರುವ ದೃಶ್ಯ ಕಂಡು ಬಂತು. ಹೋಟೆಲ್‌ ಪ್ರವೇಶಕ್ಕೂ ಮೊದಲು ಸ್ಯಾನಿಟೈಸರ್‌ ಸಹ ನೀಡುತ್ತಿಲ್ಲ.

ಲಾಕ್‌ಡೌನ್‌ಗೂ ಮೊದಲು ಹಾಸನ ಮೂಲಕ ಹಾದು ಹೋಗುವ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ
ಅಪಾರ ಪ್ರಮಾಣದ ವಹಿವಾಟು ನಡೆಯುತ್ತಿತ್ತು. ಎರಡೂ ನಗರಗಳ ನಡುವೆ ಸಂಚಾರ ಮಾಡುವ ಜನರು ಹಾಸನದಲ್ಲಿ
ವಾಹನ ನಿಲ್ಲಿಸಿ ಊಟ, ತಿಂಡಿ ಮಾಡುತ್ತಿದ್ದರು. ಲಾಕ್‌ಡೌನ್‌ ಜಾರಿಯಾಗುತ್ತಿದ್ದಂತೆ ಹೋಟೆಲ್ ಗಳಲ್ಲಿ ತಿಂಡಿ, ತಿನಿಸು ಗಳ ಸಂಖ್ಯೆ ಕಡಿಮೆ ಮಾಡಲಾಗಿತ್ತು. ಸಿಬ್ಬಂದಿ ಕೆಲಸ ಕಳೆದುಕೊಂಡರು. ಕೆಲವು ಹೋಟೆಲ್‌ಗಳು ಬಾಗಿಲು ಮುಚ್ಚಿದವು.

‘ಕಾರ್ಮಿಕರು ಕೆಲಸ ಕಳೆದುಕೊಳ್ಳಬಾರದು ಎಂಬ ಕಾರಣಕ್ಕೆ ಎರಡು ತಿಂಗಳು ನಷ್ಟದಲ್ಲಿಯೇ ಹೋಟೆಲ್‌ ನಡೆಸಿದೆವು. ಈಗ ಕೆಎಸ್ಆರ್‌ಟಿಸಿ ಬಸ್‌ ಸಂಚಾರ ಆರಂಭಗೊಂಡಿದ್ದು, ಹೋಟೆಲ್‌ನಲ್ಲೇ ಆಹಾರ ಸೇವಿಸುವವರ ಸಂಖ್ಯೆ ಹೆಚ್ಚಾಗಿದೆ. ಜನರು ಕುಟುಂಬ ಸಮೇತರಾಗಿ ಹೋಟೆಲ್‌ಗೆ ಬಂದು ಊಟ, ತಿಂಡಿ ಮಾಡುತ್ತಿದ್ದಾರೆ. ಮೊದಲಿಗೆ ಹೋಲಿಸಿದರೆ ಶೇಕಡಾ 70 ರಷ್ಟು ವ್ಯಾಪಾರ ನಡೆಯುತ್ತಿದೆ ’ಎಂದು ಶ್ರೀ ಕೃಷ್ಣ ಭವನ ಹೋಟೆಲ್ ಮಾಲೀಕ ಸುರೇಶ್‌ ಹೇಳಿದರು.

‘ಹೋಟೆಲ್‌ ಉದ್ಯಮ ಚೇತರಿಸಿಕೊಳ್ಳುತ್ತಿದೆ. ಮೊದಲಿನಂತೆ ಉತ್ತರ ಭಾರತ ಮತ್ತು ದಕ್ಷಿಣ ಭಾರತ ಶೈಲಿಯ
ಆಹಾರಗಳನ್ನೇ ಹೆಚ್ಚಾಗಿ ತಯಾರಿಸುತ್ತಿದ್ದೇವೆ. ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಶನಿವಾರ, ಭಾನುವಾರ ದಿನಕ್ಕೆ ₹ 80 ಸಾವಿರವರೆಗೆ ವಹಿವಾಟು ನಡೆಯುತ್ತಿತ್ತು. ಈಗ ₹40–45ಸಾವಿರ ವಹಿವಾಟು ನಡೆಯುತ್ತಿದೆ. ಹೋಟೆಲ್‍ಗೆ ಬರುತ್ತಿರುವವರಲ್ಲಿ ಕಾಯಂ ಗ್ರಾಹಕರ ಜತೆಗೆ ಹೊಸ ಗ್ರಾಹಕರು ಇದ್ದಾರೆ’ಎಂದು ಪತಾಂಜಲಿ ರೆಸ್ಟೋರೆಂಟ್‌ ಮಾಲೀಕ ಪ್ರದೀಪ್‌ ವಿವರಿಸಿದರು.

‘ಹಳ್ಳಿಗಳಿಂದ ನಗರಕ್ಕೆ ಮತ್ತು ಪಟ್ಟಣಕ್ಕೆ ಹೆಚ್ಚು ಬಸ್‌ಗಳು ಬರುತ್ತಿವೆ. ವ್ಯಾಪಾರ ಚೇತರಿಕೆ ಕಾಣುತ್ತಿದೆ. ಲಾಕ್‌ಡೌನ್‌
ಮೊದಲು ₹50 ಸಾವಿರ ವಹಿವಾಟು ನಡೆಯುತ್ತಿತ್ತು. ಈಗ ₹30 ಸಾವಿರ ವರೆಗೆ ನಡೆಯುತ್ತಿದೆ. ಶಾಲಾ, ಕಾಲೇಜು
ಆರಂಭಗೊಂಡರೆ ಹೋಟೆಲ್‌ ಉದ್ಯಮ ಮೊದಲಿನ ಸ್ಥಿತಿಗೆ ಬರಲಿದೆ’ ಎನ್ನುತ್ತಾರೆ ಪಲ್ಗುಣಿ ಹೋಟೆಲ್‌ ಮಾಲೀಕ
ರತ್ನಾಕರ.

'ಮಧ್ಯಾಹ್ನದ ಊಟಕ್ಕೆ ಗ್ರಾಹಕರು ಬರಲು ಆರಂಭಿಸಿದ್ದಾರೆ. ನಿಧಾನವಾಗಿ ಚೇತರಿಕೆ ಆಗುತ್ತಿದೆ ' ಎನ್ನುತ್ತಾರೆ ಹೋಟೆಲ್‌ ಮಾಲೀಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT