ಬುಧವಾರ, ಸೆಪ್ಟೆಂಬರ್ 22, 2021
24 °C
ಸುರಕ್ಷಾ ಸೆಕ್ಯೂರಿಟಿ ಏಜೆನ್ಸಿ ವಿರುದ್ಧ ಪ್ರತಿಭಟನೆ

ವೇತನಕ್ಕಾಗಿ ಅಡುಗೆ ಸಹಾಯಕರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಹಾಸ್ಟೆಲ್‌ಗಳ ಅಡುಗೆ ಸಹಾಯಕರಿಗೆ ವೇತನ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ನೇತೃತ್ವದಲ್ಲಿ ಗುರುವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅರಸು ಭವನ ಎದುರು ಪ್ರತಿಭಟನೆ ನಡೆಸಲಾಯಿತು.

ಹಾಸ್ಟೆಲ್‌ಗಳ ನಿರ್ವಹಣೆ ಹೊರಗುತ್ತಿಗೆ ಪಡೆದ ಸುರಕ್ಷಾ ಸೆಕ್ಯೂರಿಟಿ ಏಜೆನ್ಸಿ 70 ಜನ ಅಡುಗೆ ಸಹಾಯಕರಿಗೆ 13 ತಿಂಗಳಿನಿಂದ ವೇತನ ನೀಡಿಲ್ಲ. ಕೋವಿಡ್ ಸಂದರ್ಭದಲ್ಲಿ ಜೀವನ ನಡೆಸಲು ತೊಂದರೆ ಆಗಿದೆ. ಕೂಡಲೇ ವೇತನ ಕೊಡಿಸಲು ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಗೌಡ ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸುರಕ್ಷಾ ಸೆಕ್ಯೂರಿಟಿ ಏಜೆನ್ಸಿ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ಅಡುಗೆ ಸಹಾಯಕರನ್ನು ನೇಮಿಸಿಕೊಂಡಿದೆ. 13 ತಿಂಗಳಿನಿಂದ ಯಾವುದೇ ವೇತನ ನೀಡಿಲ್ಲ. ಕೋವಿಡ್‌ ನಿಂದಾಗಿ ಜನರು ಹೈರಾಣಾಗಿ ಹೋಗಿದ್ದಾರೆ. ವೇತನವನ್ನೇ ನೀಡದಿದ್ದರೆ ಕುಟುಂಬ ನಿರ್ವಹಣೆ ಹೇಗೆ ಎಂದು ಪ್ರಶ್ನಿಸಿದರು.

ಅಡುಗೆ ಕೆಲಸಗಾರರು ಕಡುಬಡವ ಕುಟುಂಬದವರಾಗಿದ್ದು, ವೇತನ ನಂಬಿಕೊಂಡೇ ಸಾಲ ಮಾಡಿ ಜೀವನ ನಡೆಸುತ್ತಿದ್ದಾರೆ. ಆದರೆ ಮಾಲೀಕರು ಕೆಲಸದಿಂದ ವಜಾಗೊಳಿಸುವ ಬೆದರಿಕೆ ಹಾಕುತ್ತಿದ್ದಾರೆ. ತಕ್ಷಣವೇ ಕೆಲಸಗಾರರಿಗೆ ಬಾಕಿ ಉಳಿಸಿಕೊಂಡಿರುವ ಸಂಬಳ ಪಾವತಿಸಬೇಕು. ಅಡುಗೆ ಸಹಾಯಕರಿಗೆ ಕಡಿಮೆ ವೇತನ ನೀಡುತ್ತಿರುವ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗೂ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಎಂದು ಒತ್ತಾಯಿಸಿದರು.

‘ಹದಿಮೂರು ತಿಂಗಳ ಸಂಬಳವನ್ನು ಆರ್‌ಟಿಜಿಎಸ್‌ ಮೂಲಕ ಪಾವತಿಸಲಾಗಿದೆ. ಆದರೆ ಕೋವಿಡ್‌ ಲಾಕ್‌ಡೌನ್ ಸಂದರ್ಭದಲ್ಲಿ ಅಡುಗೆ ಕೆಲಸಗಾರರಿಗೆ ಕೆಲಸ ಇರಲಿಲ್ಲ. ಹಾಗಾಗಿ ಅವರಿಗೆ ವೇತನ ನೀಡಲು ಆಗುವುದಿಲ್ಲ’ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಹರ್ಷ ತಿಳಿಸಿದರು.

ಪ್ರತಿಭಟನೆಯಲ್ಲಿ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಭಾನುಮತಿ,  ಕಾರ್ಯದರ್ಶಿ ರಘು, ಮೋಹನ್‌, ಸುನಿಲ್‌, ರವಿ, ಗೋವಿಂದೇಗೌಡ, ಹರೀಶ್, ಪ್ರಧಾನ ಕಾರ್ಯದರ್ಶಿ ರಘು ಶಂಖ, ನಗರ ಉಪಾಧ್ಯಕ್ಷ ರೋಹಿತ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.