ಹೂವು ಬೆಳೆದವರ ಬದುಕಿನಲ್ಲಿ ಮತ್ತೆ ಸಂಕಷ್ಟ

ಹಾಸನ: ಹೂವು ಬೆಳೆಯನ್ನೇ ಮುಖ್ಯ ವೃತ್ತಿಯನ್ನಾಗಿಸಿಕೊಂಡಿದ್ದ ಕುಟುಂಬಗಳಿಗೆ ಕೋವಿಡ್ ಎರಡನೇ ಅಲೆಯ ನಿಯಂತ್ರಣಕ್ಕೆ ಹೇರಿರುವ ಲಾಕ್‌ಡೌನ್‌ನಿಂದಾಗಿ ಭಾರಿ ಹೊಡೆತ ನೀಡಿದೆ.
ಜಾತ್ರೆ, ಉತ್ಸವ, ಅದ್ಧೂರಿ ಮದುವೆ ಮುಂತಾದ ಸಮಾರಂಭಗಳಿಗೆ ಕಡಿವಾಣ ಹಾಕಿರುವುದು ಹಾಗೂ ದೇವಾಲಯಗಳಲ್ಲಿ ಭಕ್ತರಿಗೆ ಬಾಗಿಲು ಮುಚ್ಚಿರುವುದರಿಂದ ಹೂವು ಬೆಳೆಗಾರರು ಆರ್ಥಿಕ ಸಂಕಷ್ಟದಲ್ಲಿದ್ದಾರೆ.
ಜಿಲ್ಲೆಯ ಕೊಣನೂರು, ಸಾಲಗಾಮೆ, ಚನ್ನರಾಯಪಟ್ಟಣ, ಹೊಳೆನರಸೀಪುರ, ಬೇಲೂರು ಹಾಗೂ ಇನ್ನಿತರೆ ಕಡೆಗಳಲ್ಲಿ ಹೂವು ಬೆಳೆಯಲಾಗುತ್ತದೆ. ಸೇವಂತಿಗೆ, ಕಾಕಡ, ಗುಲಾಬಿ, ಕನಕಾಂಬರ, ಬಟನ್ಸ್, ಸುಗಂಧರಾಜ, ಚೆಂಡು ಹೂವು, ಊಟಿ ರೋಸ್, ಮುಂತಾದ ಹೂವುಗಳನ್ನು ಬೆಳೆದು ಹಾಸನ ಮಾತ್ರವಲ್ಲದೆ, ಮಡಿಕೇರಿ, ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಇತರೆ ಜಿಲ್ಲೆಗೆ ರಫ್ತು ಮಾಡಲಾಗುತ್ತದೆ.
ಲಾಕ್‌ಡೌನ್ ಕಾರಣದಿಂದ ಹೂವು ಕೇಳುವವರೇ ಇಲ್ಲದೆ ಬೆಳೆಗಾರರ ವ್ಯವಹಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.
ಕೊಣನೂರು ಹೋಬಳಿಯ ವೆಂಕಟೇಗೌಡನ ಕೊಪ್ಪಲಿನ ನೂರಾರು ಕುಟುಂಬಗಳು ಆರ್ಥಿಕ ಸಂಕಷ್ಟದಲ್ಲಿವೆ. ಜಮೀನಿನಲ್ಲಿ ಹೂ ಬೆಳೆದು ನಿಂತು ಕಟಾವಿಗೆ ಬಂದಿದ್ದರೂ ಬೆಳೆಗಾರರು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಬೆಳಿಗ್ಗೆಯಿಂದಲೇ ಹಳ್ಳಿ, ಪಟ್ಟಣ, ನಗರ ಪ್ರದೇಶಗಳಿಗೆ ಬುಟ್ಟಿಯಲ್ಲಿ ಹೂವು ತುಂಬಿಕೊಂಡು ಹೊತ್ತು ಮಾರುವ ಕೆಲಸವನ್ನೇ ನಂಬಿದ್ದ ಕುಟುಂಬಗಳು ಲಾಕ್‌ಡೌನ್ ಮುಗಿಯುವುದನ್ನೇ ಕಾಯುತ್ತಿವೆ.
ಜಿಲ್ಲೆಯಲ್ಲಿ ಬೆಳೆದ ಹೂವುಗಳಿಗೆ ಉತ್ತಮ ಬೆಲೆ ಬೇಕು ಎಂದರೆ ಅಕ್ಕಪಕ್ಕದ ಜಿಲ್ಲೆಗಳಿಗೆ ಕೊಂಡೊಯ್ಯಬೇಕು. ಲಾಕ್‌ಡೌನ್ ನಿರ್ಬಂಧ ಹಾಗೂ ಪೆಟ್ರೋಲ್, ಡೀಸೆಲ್ ದರ ಹೆಚ್ಚಿರುವ ಕಾರಣ ವಾಹನಗಳ ಬಾಡಿಗೆಯೂ ಹೆಚ್ಚಿದೆ. ಅಲ್ಲದೇ ಬೇರೆ ಜಿಲ್ಲೆಗಳ ಮಾರುಕಟ್ಟೆಗೆ ಭೇಟಿ ನೀಡಿದ ವೇಳೆ ಸೋಂಕು ತಗಲುವ ಭೀತಿ ಇರುವುದರಿಂದ ಅನೇಕರು ಹೊರ ಜಿಲ್ಲೆಗಳ ಪ್ರಯಾಣವನ್ನು ತಾತ್ಕಾಲಿಕ ಸ್ಥಗಿತಗೊಳಿಸಿದ್ದಾರೆ.
ವಿವಿಧ ಬಗೆಯ ಹೂವುಗಳನ್ನು ಬೆಳೆದು ಮಾರಾಟ ಮಾಡುವ ಮೂಲಕ ಬದುಕು ಕಟ್ಟಿಕೊಂಡಿದ್ದ ನೂರಾರು ಕುಟುಂಬಗಳಿಗೆ ಸಂಕಷ್ಟ ಎದುರಾಗಿದೆ. ಕೋವಿಡ್ ಮೊದಲ ಅಲೆಯ ನಿಯಂತ್ರಣಕ್ಕೆ ವಿಧಿಸಿದ್ದ ಲಾಕ್‌ಡೌನ್‌ನಿಂದ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ಸಂಕಷ್ಟ ಎದುರಾಗಿದೆ.
ಜಮೀನಿನಲ್ಲಿ ಹೂವು ಬೆಳೆದು ನಿಂತು ಕಟಾವಿಗೆ ಬಂದಿದ್ದರೂ ಗಿಡ ಉಳಿಸಿಕೊಳ್ಳಲು ಹೂವು ಕಟಾವು ಮಾಡಿ ಮರದ ಬುಡಕ್ಕೆ ಹಾಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೂವು ಮಾರಾಟ ಮಾಡುವವರೂ ಕೂಡ ವ್ಯಾಪಾರ ಇಲ್ಲದೇ ಕೈಕಟ್ಟಿ ಕುಳಿತಿದ್ದಾರೆ.
‘ಪಾಲಿ ಹೌಸ್ ಹಾಗೂ ಹೊಲ ಸೇರಿದಂತೆ ಒಟ್ಟು 3 ಎಕರೆ 5 ಗುಂಟೆ ಪ್ರದೇಶದಲ್ಲಿ ಡಚ್, ನಾಲ್ಕು ವಿಧದ ಸೇವಂತಿಗೆ, ಹಳದಿ ಚೆಂಡು ಹೂವು, ಗುಲಾಬಿ ಹಾಗೂ ಸುಗಂಧ ರಾಜ ಬೆಳೆದಿದ್ದೇನೆ. ಕೋವಿಡ್ ಕಾರಣದಿಂದ ಹೂವು ಕೇಳುವವರೇ ಇಲ್ಲ. ಲಕ್ಷಾಂತರ ರೂಪಾಯಿ ನಷ್ಟ ಆಗಿದೆ. ಗಿಡಗಳನ್ನು ಉಳಿಸಿಕೊಳ್ಳಲು ಕೂಲಿ ಕಾರ್ಮಿಕರಿಗೆ ತಲಾ ₹300 ಕೂಲಿ ನೀಡಿ ಹೂವು ಕಿತ್ತು ಎಸೆಯುವ ಸ್ಥಿತಿ ಬಂದಿದೆ’ ಎಂದು ಸಾಲಗಾಮೆ ಹೋಬಳಿಯ ಹೂವು ಬೆಳೆಗಾರ ದಾಮೋದರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ಹಿಂದೆ ಹಾಸನ, ಚಿಕ್ಕಮಗಳೂರು, ಬಾಣಾವರ ಹಾಗೂ ಜಾವಗಲ್ ಮಾರುಕಟ್ಟೆಗೆ ಕೊಂಡೊಯ್ದು ಹೂವು ಮಾರಾಟ ಮಾಡಲಾಗುತ್ತಿತ್ತು. ಆದರೆ, ಈಗ ಹೂವು ವ್ಯಾಪಾರವೇ ಇಲ್ಲ. ಜೀವನ ಸಾಗಿಸುವುದು ಕಷ್ಟವಾಗಿದೆ’ ಎಂದು ಅಳಲು ತೋಡಿಕೊಂಡರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.