ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಗ್ರಾಮ ತಾಲ್ಲೂಕು ಘೋಷಣೆಗಷ್ಟೇ ಸೀಮಿತ

ಸರ್ಕಾರದಿಂದ ಬಾರದ ಆಡಳಿತಾತ್ಮಕ ಆದೇಶ, ನೇಮಕವಾಗದ ವಿಶೇಷ ತಹಶೀಲ್ದಾರ್‌
Last Updated 21 ನವೆಂಬರ್ 2019, 4:32 IST
ಅಕ್ಷರ ಗಾತ್ರ

ಹಾಸನ: ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಶಾಂತಿಗ್ರಾಮವನ್ನು ಹೊಸ ತಾಲ್ಲೂಕಾಗಿ ಘೋಷಿಸಿದ್ದರು. ಆದರೆ, ಈವರೆಗೆ ತಾಲ್ಲೂಕು ರಚನೆ ಸಂಬಂಧ ಸರ್ಕಾರದಿಂದ ಯಾವುದೇ ಆಡಳಿತಾತ್ಮಕ ಆದೇಶ ಬಂದಿಲ್ಲ.

ಜಿಲ್ಲೆಯ 8 ತಾಲ್ಲೂಕುಗಳ ಜತೆಗೆ ಶಾಂತಿಗ್ರಾಮವೂ ಸೇರಿ 9 ತಾಲ್ಲೂಕುಗಳಾಗುತ್ತವೆ ಎಂಬ ನಿರೀಕ್ಷೆ ಹುಸಿಯಾಗಿದೆ. ಶಾಂತಿಗ್ರಾಮವು ಶಾಸಕ ಎಚ್.ಡಿ.ರೇವಣ್ಣ ಪ್ರತಿನಿಧಿಸುವ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರುವುದರಿಂದ ಹೊಸ ತಾಲ್ಲೂಕು ಘೋಷಣೆಯಾಗಿತ್ತು. ಶಾಂತಿಗ್ರಾಮ ತಾಲ್ಲೂಕು ಆಗಬೇಕೆಂಬ ಬೇಡಿಕೆಯನ್ನು ಯಾರೂ ಮಂಡಿಸಿರಲಿಲ್ಲ.

ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ–75ರಲ್ಲಿರುವ ಶಾಂತಿಗ್ರಾಮ ಹೋಬಳಿ ಕೇಂದ್ರ. ಹಾಸನ ನಗರದಿಂದ 13 ಕಿ.ಮೀ. ಅಂತರದಲ್ಲಿದೆ. ಗ್ರಾಮದಲ್ಲಿ 898 ಕುಟುಂಬಗಳು, ಒಟ್ಟು 3499 ಜನಸಂಖ್ಯೆಯಿದೆ. ಹೋಬಳಿ ಕೇಂದ್ರವಾದ್ದರಿಂದ ಕಂದಾಯ ಇಲಾಖೆಯ ನಾಡ ಕಚೇರಿ ಇದೆ.

ಗ್ರಾಮದಲ್ಲಿ ಪೊಲೀಸ್‌ ಠಾಣೆ, ಸಮುದಾಯ ಆರೋಗ್ಯ ಕೇಂದ್ರ, ಸರ್ಕಾರಿ ಪದವಿಪೂರ್ವ ಕಾಲೇಜು, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಇದೆ. ಜಿಲ್ಲಾ ಕಾರಾಗೃಹ ನಿರ್ಮಾಣಕ್ಕೆ 40 ಎಕರೆ ಭೂಮಿಯೂ ಶಾಂತಿಗ್ರಾಮದ ಬಳಿ ಮಂಜೂರಾಗಿದೆ.

ತಾಲ್ಲೂಕು ಘೋಷಣೆಯಾದ ನಂತರ ವಿಶೇಷ ತಹಶೀಲ್ದಾರ್‌ ನೇಮಕ ಸೇರಿದಂತೆ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಗೆಜೆಟ್‌ ನೋಟಿಫಿಕೆಏಶನ್‌ ಹೊರ ಬೀಳಲಿಲ್ಲ. ಹಾಗಾಗಿ ತಾಲ್ಲೂಕು ರಚನೆಗೆ ಬೇಕಾದ ಕಟ್ಟಡ, ಕಚೇರಿಗಳ ನಿರ್ಮಾಣಕ್ಕೆ ಜಾಗ ಗುರುತಿಸುವ ಕೆಲಸ ಹಾಗೂ ಗ್ರಾಮಗಳ ಸೇರ್ಪಡೆ ಮಾಡುವ ಕಾರ್ಯವೂ ಆರಂಭವಾಗಿಲ್ಲ.

ಶಾಂತಿಗ್ರಾಮಕ್ಕೆ ಹಾಸನ ತಾಲ್ಲೂಕಿನ ದುದ್ದ ಚನ್ನರಾಯಪಟ್ಟಣ ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿ ಸೇರಿಸುವುದರೊಂದಿಗೆ ಹಾಸನ ತಾಲ್ಲೂಕಿನ ಪ್ರಮುಖ ಗ್ರಾಮ ಮೊಸಳೆ ಹೊಸಹಳ್ಳಿಗೆ ಹೋಬಳಿ ಸ್ಥಾನಮಾನ ನೀಡಿ ಶಾಂತಿಗ್ರಾಮ ತಾಲ್ಲೂಕಿಗೆ ಸೇರಿಸಿ ನಾಲ್ಕು ಹೋಬಳಿಗಳುಳ್ಳ ತಾಲ್ಲೂಕು ಸೇರ್ಪಡೆ ಮಾಡುವುದು ರೇವಣ್ಣ ಅವರ ಉದ್ದೇಶವಾಗಿತ್ತು.

‘ಶಾಂತಿಗ್ರಾಮ ತಾಲ್ಲೂಕು ರಚನೆಯಾಗುವುದು ಖಚಿತ. ಕೆಲ ಕಾರಣಗಳಿಂದ ಸ್ವಲ್ಪ ವಿಳಂಬವಾಗಬಹುದು. ಹಾಸನ ನಗರ ವೇಗವಾಗಿ ಬೆಳವಣಿಗೆಯಾಗುತ್ತಿರುವ ಕಾರಣ ದೂರದೃಷ್ಟಿ ಇಟ್ಟುಕೊಂಡು ತಾಲ್ಲೂಕು ರಚನೆ ನಿರ್ಧಾರ ಮಾಡಲಾಗಿತ್ತು’ ಎಂದು ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ.ರೇವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

***

ಶಾಂತಿಗ್ರಾಮ ಹೊಸ ತಾಲ್ಲೂಕಿನ ಪಟ್ಟಿಯಲ್ಲಿದ್ದರೂ ಈವರೆಗೆ ತಾಲ್ಲೂಕು ರಚನೆಗೆ ಸಂಬಂಧ ಸರ್ಕಾರದಿಂದ ಆಡಳಿತಾತ್ಮಕ ಆದೇಶ ಬಂದಿಲ್ಲ.
ಆರ್‌.ಗಿರೀಶ್‌, ಜಿಲ್ಲಾಧಿಕಾರಿ

***

ತಾತ್ಕಾಲಿಕವಾಗಿ ಹಿನ್ನಡೆಯಾಗಿರಬಹುದು ಅಷ್ಟೇ. ಶಾಂತಿಗ್ರಾಮ ತಾಲ್ಲೂಕು ರಚನೆ ಮಾಡಿಯೇ ಸಿದ್ಧ. ಹಿಡಿದ ಕೆಲಸ ಕೈ ಬಿಡುವುದಿಲ್ಲ.
ಎಚ್‌.ಡಿ.ರೇವಣ್ಣ, ಹೊಳೆನರಸೀಪುರ ಕ್ಷೇತ್ರದ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT