ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸ್ಥರ ಸಮಸ್ಯೆ ಆಲಿಕೆ: ಪರಿಹಾರದ ಭರವಸೆ

ಶೀತಪೀಡಿತ 8 ಗ್ರಾಮಗಳಿಗೆ ಉನ್ನತ ಮಟ್ಟದ ಸಮಿತಿ ಭೇಟಿ
Last Updated 3 ಫೆಬ್ರುವರಿ 2021, 2:04 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ತಾಲ್ಲೂಕಿನ 8 ಗ್ರಾಮಗಳಿಗೆ ಉನ್ನತ ಮಟ್ಟದ ಸಮಿತಿಯ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಸ್ಥಳ ತನಿಖೆ ಮಾಡಿದರು.

ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಾ.ಜಿ.ಎಸ್. ಪ್ರಕಾಶ್, ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್, ಸಹಾಯಕ ಪ್ರಾದೇಶಿಕ ಆಯುಕ್ತ ಯೋಗೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ. ಭಾರತಿ ಸೇರಿ ಅಧಿಕಾರಿಗಳು ಆನೆಕೆರೆ ಗ್ರಾಮಕ್ಕೆ ಭೇಟಿ ನೀಡಿದರು.

‘ಮಳೆಗಾಲ ಮತ್ತು ಹೇಮಾವತಿ ನಾಲೆಯಲ್ಲಿ ನೀರು ಹರಿಸಿದಾಗ ಮನೆಗಳ ಗೋಡೆಯಲ್ಲಿ ನೀರು ಜಿನುಗುತ್ತದೆ. ಮನೆಯಲ್ಲಿ ಶೀತದ ವಾತಾವರಣ ಹೆಚ್ಚಾಗಿ ಜನತೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಊರಿನ ಬಾವಿಯಲ್ಲಿ ಮೇಲ್ಭಾಗದಲ್ಲಿ ನೀರು ಇರುತ್ತದೆ’ ಎಂದು ಜನತೆ ಅಧಿಕಾರಿಗಳ ಗಮನಕ್ಕೆ ತಂದರು.

ಬಿಜೆಪಿ ಮುಖಂಡ ದೇವರಾಜೇಗೌಡ ಮಾತನಾಡಿ, ‘ಗ್ರಾಮವನ್ನು ಶೀತಪೀಡಿತ ಪ್ರದೇಶ ಎಂದು ಘೋಷಿಸಿ ಬೇರೆಡೆಗೆ ಸ್ಥಳಾಂತರಿಸುವುದು ಸೂಕ್ತ’ ಎಂದರು.

ಗ್ರಾಮದಲ್ಲಿ 737 ಮನೆಗಳ ಪೈಕಿ 480 ಕಚ್ಚಾ ಮನೆಗಳಿವೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣನಾಯಕ್ ಮೇಲಧಿಕಾರಿಗಳಿಗೆ ಗಮನಕ್ಕೆ ತಂದರು.

ಕಲ್ಲೇನಹಳ್ಳಿ ಗ್ರಾಮ ಈಗಾಗಲೇ ಶೀತ ಪೀಡಿತ ಪ್ರದೇಶಕ್ಕೆ ಸೇರಿದ್ದು, ಉಳಿದ 12 ಮನೆಗಳಿಗೆ ಪರಿಹಾರ ನೀಡಬೇಕಿದೆ. ಅದೇ ರೀತಿ ನಾಡನಹಳ್ಳಿ ಗ್ರಾಮದಲ್ಲಿಯೂ 15 ಮನೆಗಳಿಗೆ ಪರಿಹಾರ ನೀಡಬೇಕಿದೆ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದರು.

ನಂತರ ಅಧಿಕಾರಿಗಳ ತಂಡ ನೊರನಕ್ಕಿ, ಹಂಪನಹಳ್ಳಿ, ಸಾಸಲುಪುರಕೊಪ್ಪಲು, ಸಾಸಲು ಹಾಗೂ ಗದ್ದೆಬಿಂಡೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿತು.

ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್, ವಿಶೇಷ ಭೂಸ್ವಾಧೀನಾಧಿಕಾರಿ ಮಂಜುನಾಥ್, ಗೊರೂರು ಹೇಮಾವತಿ ಜಲಾಶಯ ಯೋಜನೆಯ ಮುಖ್ಯ ಎಂಜಿನಿಯರ್ ಸಿ. ಮಂಜಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ. ಸತೀಶ್ ಕುಮಾರ್, ತಹಶೀಲ್ದಾರ್ ಜೆ.ಬಿ. ಮಾರುತಿ ಇದ್ದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಲಾಯಿತು. ಸಭೆ ಬಳಿಕ ಪ್ರಾದೇಶಿಕ ಆಯುಕ್ತ ಡಾ.ಜಿ.ಎಸ್. ಪ್ರಕಾಶ್ ಮಾತನಾಡಿ, ‘ತಾಲ್ಲೂಕಿನ 8 ಗ್ರಾಮಗಳಿಗೆ ಭೇಟಿ ನೀಡಲಾಗಿದೆ. ಶೀತ ಪೀಡಿತ ಪ್ರದೇಶಕ್ಕೆ ಒಳಗಾದ ಗ್ರಾಮದ ಕೆಲವರು ಪರಿಹಾರ ಸಿಕ್ಕಿಲ್ಲವಾದ್ದರಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಹಾಗಾಗಿ ಭೇಟಿ ನೀಡಿ ಸ್ಥಳ ಪರಿಶೀಲಿಸಲಾಗಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಪರಿಹಾರ ಸಿಗದಿದ್ದರೆ ಪರಿಶೀಲನೆ ಮಾಡಿ ಪರಿಹಾರ ನೀಡಲಾಗುವುದು’ ಎಂದರು.

‘ಆನೆಕೆರೆ ಗ್ರಾಮದಲ್ಲಿ ಮನೆಗಳು ಶೀತ ಪೀಡಿತಕ್ಕೆ ಒಳಗಾಗುತ್ತಿರುವುದನ್ನು ಜನತೆ ಗಮನಕ್ಕೆ ತಂದಿದ್ದಾರೆ. ಅಂಥವರಿಗೆ ವಸತಿ ಯೋಜನೆಯಡಿ ಮನೆಗಳನ್ನು ನೀಡಲಾಗುವುದು. ಶೀತ ಪೀಡಿತ ಪ್ರದೇಶದಲ್ಲಿ ಜನತೆ ಮತ್ತು ರಾಸುಗಳಿಗೆ ಕಾಯಿಲೆ ಕಂಡು ಬಂದಲ್ಲಿ ಅಗತ್ಯ ಚಿಕಿತ್ಸೆ ನೀಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT