ಆಲೂರು: ತಾಲ್ಲೂಕಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಬಿತ್ತನೆ ಮಾಡಿದ್ದ ಮುಸುಕಿನ ಜೋಳದ ಬೀಜಗಳು ಕೊಳೆತು ಹೋಗುತ್ತಿದ್ದು, ರೈತರು ನಷ್ಟ ಅನುಭವಿಸುವಂತಾಗಿದೆ.

ವಾರದ ಹಿಂದೆ ಹದ ಮಳೆಯಾದ ಕಾರಣ ಬಹುತೇಕ ರೈತರು ಮುಸುಕಿನ ಜೋಳ ಬಿತ್ತನೆ ಮಾಡಿದ್ದರು. ಬಿತ್ತನೆ ಮಾಡಿದ ಮರುದಿನದಿಂದ ನಾಲ್ಕು ದಿನ ಬಿಡುವಿಲ್ಲದೇ ಮಳೆ ಸುರಿದಿದ್ದು, ಬಿತ್ತನೆ ಮಾಡಿದ್ದ ಬೀಜಗಳು ಅಲ್ಪಸ್ವಲ್ಪ ಮೊಳಕೆ ಒಡೆದಿವೆ. ಶೇ 90ರಷ್ಟು ಬೀಜ ಕೊಳೆತು ಹೋಗಿದೆ. ಬಿತ್ತನೆ ಸಮಯದಲ್ಲಿಯೇ ನಷ್ಟ ಉಂಟಾಗಿದ್ದು, ತಕ್ಷಣ ಸರ್ಕಾರ ನೆರವಿಗೆ ಧಾವಿಸಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.

‘ಕಳೆದ ವಾರ ಬಿತ್ತನೆ ಮಾಡಿದ್ದ ಜೋಳ ಜಡಿ ಮಳೆಗೆ ಸಿಲುಕಿ ಕೊಳೆತು ಸಂಪೂರ್ಣ ನಾಶವಾಗಿದೆ. ಈಗ ಎರಡು ದಿನಗಳಿಂದ ಬಿತ್ತಿರುವ ಜೋಳ ಹುಲುಸಾಗಿ ಹುಟ್ಟಬೇಕಾದರೆ ಕನಿಷ್ಠ ಒಂದು ವಾರ ಬಿಸಿಲು ವಾತಾವರಣ ಬೇಕು. ಪುನಃ ಮಳೆ ಎದುರಾದರೆ ಜೋಳ ಬಿತ್ತನೆ ಕಾರ್ಯ ಸಂಪೂರ್ಣ ನೆಲ ಕಚ್ಚುತ್ತದೆ. ಬದುಕಿಗೆ ಬರಸಿಡಿಲು ಬಡಿಯುತ್ತದೆ’ ಎಂದು ರೈತರು ಹೇಳುತ್ತಿದ್ದಾರೆ.

ಸದ್ಯ ಮಳೆ ಕಡಿಮೆಯಾಗಿ ಎರಡು ದಿನಗಳ ಹಿಂದೆ ಬಿಸಿಲು ಬಿದ್ದಿದ್ದರಿಂದ ಭಾನುವಾರ ಕೆಲ ರೈತರು ಜೋಳ ಬಿತ್ತನೆ ಆರಂಭಿಸಿದ್ದರು. ಬಿಸಿಲು ವಾತಾವರಣ ಮುಂದುವರಿಯುತ್ತದೆ ಎಂಬ ಕಲ್ಪನೆಯಿಂದ ರೈತರ ಆಸೆ ಹುಸಿಯಾಗಿದ್ದು, ಸೋಮವಾರ ಮತ್ತೆ ತುಂತುರು ಮಳೆ ಪ್ರಾರಂಭವಾಯಿತು. ಅಷ್ಟರಲ್ಲಿ ಕೆಲವರು ಬಿತ್ತನೆ ಮಾಡಿ, ಜೋಳವನ್ನು ಮುಚ್ಚಿದ್ದಾರೆ. ಬಹಳಷ್ಟು ರೈತರಿಗೆ ಬೀಜಗಳನ್ನು ಮುಚ್ಚಲು ಸಾಧ್ಯವಾಗದೇ ಅರ್ಧಕ್ಕೆ ಕೆಲಸ ನಿಲ್ಲಿಸಿ ಮನೆಗೆ ಬಂದರು. ಮಧ್ಯಾಹ್ನದ ನಂತರ ಕೆಲ ಸಮಯ ಬಿಸಿಲು ವಾತಾವರಣವಿದ್ದರೂ ಬಹುತೇಕ ಮೋಡ ಕವಿದ ವಾತಾವರಣ ಇತ್ತು.

‘ಬೆಳೆ ಭೂಮಿಯಿಂದ ಮೇಲೆದ್ದ ನಂತರ ಕನಿಷ್ಠ ಶೇ 30 ರಷ್ಟು ಮತ್ತು ಅದಕ್ಕಿಂತ ಹೆಚ್ಚು ನಷ್ಟಕ್ಕೊಳಗಾದರೆ ಮಾತ್ರ ಸರ್ಕಾರದಿಂದ ಪರಿಹಾರ ಸಿಗುತ್ತದೆ. ಮೊಳಕೆ ಒಡೆಯದೇ ಬಿತ್ತನೆ ಮಾಡಿದ್ದ ಬೀಜ ಕೊಳೆಯುತ್ತಿದ್ದು, ಬಿತ್ತನೆ ಪೂರ್ವ ತಯಾರಿಕೆಗೆ ಮಾಡಿದ ವೆಚ್ಚ, ಬಿತ್ತನೆ ಬೀಜದ ಮೊತ್ತವನ್ನು ಪರಿಹಾರ ರೂಪದಲ್ಲಿ ಭರಿಸಲು ವಿಮೆಯಲ್ಲಿ ಅವಕಾಶವಿಲ್ಲ’ ಎಂದು ಅಧಿಕಾರಿಗಳು ಹೇಳುತ್ತಿರುವುದಾಗಿ ರೈತರು ಅಲವತ್ತಿಕೊಳ್ಳುತ್ತಿದ್ದಾರೆ.

ತಾಲ್ಲೂಕಿನ 650 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಲಾಗಿದ್ದು ಭೂಮಿಯಲ್ಲಿ ತೇವಾಂಶ ಹೆಚ್ಚಾದಾಗ ಬೀಜ ಕೊಳೆಯುತ್ತದೆ. ಬಿಸಿಲು ವಾತಾವರಣ ಇದ್ದರೆ ಮಾತ್ರ ಚೆನ್ನಾಗಿ ಹುಟ್ಟುತ್ತದೆ. ನಾಲ್ಕಾರು ದಿನ ಬಿಸಿಲು ಅವಶ್ಯಕ. ರಮೇಶ್ ಕೃಷಿ ಇಲಾಖೆ ಸಹಾಯಕ ನಿರ್ದೇಶಕ

ಮಳೆಗಿಂತ ಮೊದಲು ಬಿತ್ತನೆ ಮಾಡಿದ್ದ ಜೋಳ ಸಂಪೂರ್ಣ ಕೊಳೆತಿದೆ. ಶನಿವಾರ ಭಾನುವಾರ ಬಿಸಿಲು ಮತ್ತೆ ಅದೇ ಭೂಮಿಯಲ್ಲಿ ಬಿತ್ತನೆ ಮಾಡಿದ್ದೇವೆ. ಜೋಳ ಮುಂದೆ ಬೆಳೆಯದಿದ್ದರೆ ಸರ್ಕಾರ ರೈತರ ನೆರವಿಗೆ ಬರಬೇಕು. ಯೋಗಣ್ಣ ಮರಸು ಕೊಪ್ಪಲು ಗ್ರಾಮದ ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.