ಅರಸೀಕೆರೆ: ನಗರದಿಂದ 6 ಕಿ.ಮೀ ದೂರದಲ್ಲಿರುವ ಜಾಜೂರು, ನಾಗತಿಹಳ್ಳಿ ಗ್ರಾಮಗಳ ಸಮೀಪದ ಐತಿಹಾಸಿಕ ತಿಮ್ಮಪ್ಪನಾಯಕನ ಕೆರೆ ಪುನಶ್ಚೇತನದ ನಿರೀಕ್ಷೆಯಲ್ಲಿದೆ.
800 ವರ್ಷಗಳ ಇತಿಹಾಸ ಹೊಂದಿರುವ ಈ ಕೆರೆಯನ್ನು ಚಿತ್ರದುರ್ಗದ ಪಾಳೇಗಾರ 3ನೇ ತಿಮ್ಮಪ್ಪ ನಾಯಕನ ಮಡದಿ ನಿರ್ಮಿಸಿದ್ದು ಎಂದು ಹೇಳಲಾಗುತ್ತದೆ. ಹಾಗಾಗಿ ತಿಮ್ಮಪ್ಪ ನಾಯಕನ ಕೆರೆ ಎಂದೇ ಪ್ರಸಿದ್ಧಿ ಪಡೆದಿದೆ.
ಸುಮಾರು 455 ಎಕರೆ ವಿಸ್ತೀರ್ಣ ಹೊಂದಿದ್ದು, 107 ಎಕರೆ ಅಚ್ಚುಕಟ್ಟು ಪ್ರದೇಶ ಒಳಗೊಂಡಿದೆ. ಅಂದಾಜಿನ ಪ್ರಕಾರ 43 ಎಕರೆ ಒತ್ತುವರಿ ಆಗಿದ್ದು, ತೆರವು ಕಾರ್ಯ ಪ್ರಗತಿಯಲ್ಲಿದೆ.
ಕೆರೆ ಭರ್ತಿಯಾದರೆ ಹರತನ ಹಳ್ಳಿ, ಬೆಂಡೇಕೆರೆ, ಬಸವರಾಜ ಪುರ, ಜಾಜೂರು, ನಾಗತಿಹಳ್ಳಿ, ಹೆಂಜಗೊಂಡನ ಹಳ್ಳಿ, ವೆಂಕಟಾಪುರ, ಪುರ್ಲೇಹಳ್ಳಿಯಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗಿ 15 ಗ್ರಾಮಗಳ ಕೃಷಿಗೆ ಅನುಕೂಲವಾಗುತ್ತದೆ. ಸುಮಾರು 2,500 ಎಕರೆ ಪ್ರದೇಶದಲ್ಲಿರುವ ತೆಂಗು ಬೆಳೆ ಈ ಕೆರೆಯ ಅಂತರ್ಜಲವನ್ನೇ ಆಶ್ರಯಿಸಿದೆ.
2014ರಲ್ಲಿ ಕೆರೆಯ ಸುತ್ತಮುತ್ತ ಸುಮಾರು 34 ಕೊಳವೆಬಾವಿ ಕೊರೆದು ಅರಸೀಕೆರೆ ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಮಳೆ ಕೊರತೆಯಿಂದ ಅಂತರ್ಜಲ ಕುಸಿದು ಕೊಳವೆಬಾವಿ ಮತ್ತು ಕೆರೆ ನೀರು ಬತ್ತಿಹೋಗಿದೆ.
ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಕೆರೆಗೆ ನಗರದ ಕೊಳಚೆ ನೀರು ಹರಿದು ಬರುತ್ತಿದ್ದು, ಕೆರೆ ತುಂಬಾ ಜಾಲಿ ಗಿಡಗಳು ಬೆಳೆದು ಅನೈತಿಕ ಚಟುವಟಿಕೆಗಳ ತಾಣವಾಗಿದೆ.
ಒಂದು ಕಾಲದಲ್ಲಿ ಜಾನುವಾರು ಗಳಿಗೆ ಮೇವಿನ ತಾಣವಾಗಿದ್ದ ತಿಮ್ಮಪ್ಪನಾಯಕನ ಕೆರೆಯಲ್ಲಿ ಇಂದು ಮೇವಿಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಜಾನುವಾರುಗಳು ಮೇವಿಗಾಗಿ ಪಕ್ಕದ ಹಿರೇಕಲ್ಲು ಗುಡ್ಡವನ್ನು ಅವಲಂಬಿಸಿವೆ.
ಕೆರೆ ಒಡಲಿಗೆ ಚರಂಡಿ ನೀರು ಸೇರುತ್ತಿದೆ. ಅಲ್ಲದೇ ಸಾರ್ವಜನಿಕರು ತ್ಯಾಜ್ಯ ತಂದು ಸುರಿಯುತ್ತಿದ್ದಾರೆ. ಕೆರೆಯಲ್ಲಿ ಮೀನುಗಾರಿಕೆ ಮೂಲಕ ಬದುಕು ಕಟ್ಟಿಕೊಂಡಿದ್ದ 80 ಕುಟುಂಬಗಳು ಈಗ ಸಂಕಷ್ಟದಲ್ಲಿವೆ. ಕೆರೆಯಲ್ಲಿ ಶೇ 30ರಷ್ಟು ಮಾತ್ರ ನೀರಿದ್ದು, ಕಲುಷಿತ ನೀರು ಸೇರಿ ಜಲಚರಗಳು ನಾಶವಾಗುತ್ತಿವೆ.
ಕೆರೆ ಏರಿ ಶಿಥಿಲವಾಗಿದೆ. ಕೆರೆಯ ಸುತ್ತಮುತ್ತಲಿನ ಜಮೀನುಗಳ ನೂರಾರು ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗಿದ್ದು, ತೆಂಗು ಬೆಳೆಗೆ ಹೆಚ್ಚಿನ ಹಾನಿಯಾಗಿರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
ಹಿಂದೆ ಈ ಕೆರೆಯ ಹಿಂಭಾಗದ ಕೃಷಿ ಜಮೀನಿನಲ್ಲಿ ಜೀವನಕ್ಕಾಗುವಷ್ಟು ಭತ್ತ ಬೆಳೆಯಲಾಗುತ್ತಿತ್ತು. ಕೆರೆಯಲ್ಲಿ ನೀರು ಬತ್ತಿ ಹೋದ ದಿನದಿಂದ ಭತ್ತದ ನಾಟಿ ಕಾರ್ಯ ಸ್ಥಗಿತವಾಗಿದೆ.
ಬಿಡುಗಡೆ ಆಗದ ಅನುದಾನ
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 34 ದೊಡ್ಡ ಕೆರೆಗಳು, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 126, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 166 ಸೇರಿ ಒಟ್ಟು 346 ಕೆರೆಗಳಿವೆ. ಎತ್ತಿನಹೊಳೆ ನೀರಾವರಿ ಯೋಜನೆ ಕಾಮಗಾರಿ ಶುರುವಾದಾಗಿನಿಂದ ತಾಲ್ಲೂಕಿನ ಸಣ್ಣ ನೀರಾವರಿ ಇಲಾಖೆಯ 34 ದೊಡ್ಡ ಕೆರೆಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಆಗದ ಕಾರಣ ಕೆರೆಗಳ ಪುನಶ್ಚೇತನ ಕಾರ್ಯ ಸ್ಥಗಿತಗೊಂಡಿದೆ. ತಾಲ್ಲೂಕಿನ ಗಂಡಸಿ ಹೋಬಳಿ ಕಾವೇರಿ ಕೊಳ್ಳಕ್ಕೆ ಸೇರಿದರೆ ಉಳಿದ ಪ್ರದೇಶ ಕೃಷ್ಣಾ ನದಿ ಕೊಳ್ಳಕ್ಕೆ ಒಳಪಡುತ್ತದೆ.
₹439 ಕೋಟಿ ಡಿಪಿಆರ್ ಸಲ್ಲಿಕೆ
ಇಲಾಖಾ ವ್ಯಾಪ್ತಿಯ 34 ದೊಡ್ಡ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ₹439 ಕೋಟಿ ಡಿಪಿಆರ್ (ಅಂದಾಜು ಪಟ್ಟಿ) ಅನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕೊಳವೆಬಾವಿಗಳು ಅಗತ್ಯಕ್ಕಿಂತ ಹೆಚ್ಚು ಇರುವುದರಿಂದ ಅಂತರ್ಜಲ ಕುಸಿಯುತ್ತಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಾಲಕೃಷ್ಣ ಹೇಳಿದರು.
ನರೇಗಾ ಯೋಜನೆಯಡಿ ಅಭಿವೃದ್ಧಿ
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 166 ಕೆರೆ ಮತ್ತು ಗೋಕಟ್ಟೆಗಳು ಬರುತ್ತವೆ. 60ಕ್ಕಿಂತ ಹೆಚ್ಚು ಸಣ್ಣ ಕೆರೆಗಳು ಮತ್ತು ಗೋಕಟ್ಟೆಗಳಲ್ಲಿ ಹೂಳೆತ್ತುವ ಕಾಮಗಾರಿ ಸೇರಿದಂತೆ ವಿವಿಧ ಕೆಲಸಗಳು ನರೇಗಾ ಯೋಜನೆಯಡಿ ನಡೆದಿವೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಟರಾಜ್ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.