ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ರೈಲ್ವೆ ಮೇಲ್ಸೇತುವೆಗೆ ಆಮೆ ವೇಗ

ಗಮನ ಹರಿಸದ ಸ್ಥಳೀಯ ಜನಪ್ರತಿನಿಧಿಗಳು, ಸಾರ್ವಜನಿಕರ ಸಂಚಾರಕ್ಕೆ ತೊಂದರೆ
Last Updated 31 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಹಾಸನ: ಎರಡು ವರ್ಷ ಸಮೀಪಿಸುತ್ತಿದ್ದರೂ ನಗರದ ಹೊಸ ಬಸ್‌ ನಿಲ್ದಾಣ ಮುಂಭಾಗದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಆಮೆ ವೇಗದಲ್ಲಿ ನಡೆಯುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ.

ಕಾಮಗಾರಿ ನಡೆಯುತ್ತಿರುವ ಕಾರಣ ಬಸ್‌ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗಗಳು ಬಂದ್‌ ಆಗಿರುವುದರಿಂದ ವಾಹನ ಸಂಚಾರಕ್ಕೆ ತೊಡಕಾಗಿದೆ. ಸದ್ಯ ಕಂಬಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. ಕಾನೂನು ತೊಡಕು ಹಾಗೂ ತಾಂತ್ರಿಕ ಕಾರಣಗಳಿಂದ ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ₹ 42 ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದೆ. ಉತ್ತರ ಭಾರತ
ಮೂಲದ ತ್ರಿಷಿ ಬಿಇಜೆವಿ ಕಂಪನಿ ರೈಲ್ವೆ ಮೇಲ್ಸೇತುವೆ ಕೆಲಸ ವಹಿಸಿಕೊಂಡಿದ್ದು, ರೈಲ್ವೆ ಇಲಾಖೆ ವತಿಯಿಂದಲೇ ನಡೆಯುತ್ತಿರುವ ಕಾಮಗಾರಿಯನ್ನು ರಮೇಶ್‌ ನಾಯ್ಡು ಎಂಬುವರು ಗುತ್ತಿಗೆ ಪಡೆದಿದ್ದಾರೆ.

ರೈಲ್ವೆ ಮೇಲ್ಸೇತುವೆಗಾಗಿ ಹಲವು ಸಂಘಟನೆಗಳು, ನಾಗರಿಕರು ದಶಕಗಳಿಂದ ಹೋರಾಟ ಮಾಡಿದ್ದರು. ಜೆಡಿಎಸ್‌, ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್‌.ಡಿ.ರೇವಣ್ಣ ಅವರ ಪ್ರಯತ್ನದ ಫಲವಾಗಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರ ಪಾಲಿನ ಅನುದಾನ ಬಿಡುಗಡೆ ಮಾಡಿದ್ದರು. ಸಮ್ಮಿಶ್ರ ಸರ್ಕಾರ ಪತನವಾಗುತ್ತಿದ್ದಂತೆ ತ್ವರಿತಗತಿಯಲ್ಲಿ ಸಾಗುತ್ತಿದ್ದ ಕಾಮಗಾರಿ ಮಂದಗತಿಯಲ್ಲಿ ಸಾಗಿತು. ಅನುದಾನ ಕೊರತೆಯಿಂದ ಕೆಲ ತಿಂಗಳು ಕೆಲಸವೂ ಸ್ಥಗಿತಗೊಂಡಿತ್ತು.

ಈ ನಡುವೆ ಕಳೆದ ಮಾರ್ಚ್‌ 12ರಂದು ಮೇಲ್ಸೇತುವೆಯ ಏಳು ಸ್ಲ್ಯಾಬ್‌ಗಳ ಪೈಕಿ ಎರಡು ಬೃಹತ್‌ ಸ್ಲ್ಯಾಬ್‌ಗಳು ನೆಲಕ್ಕುರುಳಿ ಬಿದ್ದು ತುಂಡಾಗಿದ್ದವು. ಸೇತುವೆ ಕೆಳಗೆ ವೆಲ್ಡಿಂಗ್‌ ಮತ್ತಿತರರ ಕಾರ್ಯದಲ್ಲಿ ನಿರತರಾಗಿದ್ದ ಹದಿನೈದಕ್ಕೂ ಹೆಚ್ಚು ಕಾರ್ಮಿಕರು ಓಡಿ ಹೋಗಿ ಅಪಾಯದಿಂದ ಪಾರಾಗಿದ್ದರು.

ಜ.20ರಿಂದ ಒಂದು ವರ್ಷ ರಸ್ತೆ ಬಂದ್‌ ಮಾಡಿ ಜಿಲ್ಲಾಡಳಿತ ಆದೇಶಿಸಿದೆ. ಕಾಮಗಾರಿ ನಡೆಯುತ್ತಿರುವುದರಿಂದ ಹೊಸ ನಿಲ್ದಾಣ ತಲುಪಲು ಮೂರು ಕಿ.ಮೀ. ಸುತ್ತಬೇಕಾಗಿದೆ. ಆದರೆ, ಕೆಲವರು ಮೂರು ಕಿ.ಮೀ. ಸುತ್ತು ಹೊಡೆಯುವುದನ್ನು ತಪ್ಪಿಸಿಕೊಳ್ಳಲು ಬೈಕ್‌ ಹಾಗೂ ಆಟೊ ಚಾಲಕರು ಮಣ್ಣು ರಾಶಿಯ ಮೇಲೆ ವಾಹನ ಚಾಲನೆಯ ಸಾಹಸಕ್ಕೆ ಮುಂದಾಗಿರುವುದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಪಾದಚಾರಿಗಳು ಹಲವು ಬಾರಿ ಬಿದ್ದು ಗಾಯಗೊಂಡಿರುವ ಉದಾಹರಣೆಯೂ ಇದೆ.

ಸದ್ಯ ಕೆಲಸದ ಸ್ಥಳದಲ್ಲಿ ಬೆರಳಣಿಕೆ ಕಾರ್ಮಿಕರು, ಯಂತ್ರೋಪಕರಣಗಳು ಬಿಟ್ಟರೆ ಬೇರೇನೂ ಇಲ್ಲದಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ನಿಗದಿಗಿಂತ ಅವಧಿಯಲ್ಲಿ ಕೆಲಸ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಮತ್ತಷ್ಟು ದಿನಗಳು ಬೇಕಾಗಿರುವುದರಿಂದ ಸುತ್ತಲಿನ ನಿವಾಸಿಗಳು ಹಾಗೂ ವ್ಯಾಪಾರಿಗಳಿಗೂ ಹೊಡೆತ ಬಿದ್ದಿದೆ.

ಕಾಮಗಾರಿಯಿಂದಾಗಿ ಹೊಸ ಬಸ್‌ ನಿಲ್ದಾಣ, ಕೈಗಾರಿಕಾ ಪ್ರದೇಶ, ಹೊಳೆನರಸೀಪುರ, ಮೈಸೂರಿಗೆ ಹೋಗುವ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಚನ್ನಪಟ್ಟಣ ಹೌಸಿಂಗ್ ಬೋರ್ಡ್‌ ನಿವಾಸಿಗಳು ನಗರಕ್ಕೆ ಬರಲು ಕದಂಬ, ಸುವರ್ಣ ರೆಸಿಡೆನ್ಸಿ ಮಾರ್ಗದಲ್ಲಿ ಬಂದು ಎನ್‌.ಆರ್‌.ವೃತ್ತ ತಲುಪಬೇಕು.

‘ಹೊಸ ಬಸ್‌ ನಿಲ್ದಾಣ ಸಮೀಪ ರೈಲ್ವೇ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ನಗರ ಸಾರಿಗೆ ಬಸ್‌ಗಳು ರಿಂಗ್ ರಸ್ತೆ ಮೂಲಕ ಸಂತೆ ಪೇಟೆ ಸುತ್ತಿ ಬರಬೇಕಾಗಿದ್ದು, ಸಮಯ ಹಾಗೂ ವೆಚ್ಚ ಹೆಚ್ಚುತ್ತದೆ. ಆದ ಕಾರಣ ತಾಲ್ಲೂಕು ಕಚೇರಿ ಬಳಿಯಿಂದ ಕೆಲ ಬಸ್ ಗಳ ಓಡಾಟ ಪ್ರಾರಂಭಕ್ಕೆ ಅನುಮತಿ ನೀಡಿದರೆ ಕನಿಷ್ಟ 20 ಹೊಸ ಬಸ್ ಗಳ ಸಂಚಾರ ಆರಂಭಿಸಲಾಗುವುದು’ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜಶೆಟ್ಟಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು.

‘ಎನ್‌.ಆರ್‌.ವೃತ್ತದಿಂದ ಬಸ್‌ ನಿಲ್ದಾಣ ತಲುಪಲು ಮೂರು ಕಿ.ಮೀ. ಸುತ್ತು ಹಾಕಿಕೊಂಡು ಹೋಗಬೇಕು. ಕೆಲಸ ವಿಳಂಬವಾದರೆ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಈಗಲೇ ಮಣ್ಣು ರಾಶಿಯ ಮೇಲೆ ವಾಹನಗಳನ್ನು ಚಾಲನೆ ಮಾಡಿಕೊಂಡು ಹೋಗಲಾಗುತ್ತಿದೆ. ಇದರಿಂದ ಅಪಾಯ ತಪ್ಪಿದಲ್ಲ’ಎಂದು ಸ್ಥಳೀಯರಾದ ಮಹೇಶ್‌, ರಮೇಶ್‌ ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT