ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂರು | ಪದವಿ ಪಡೆದರೂ ಚಿಂದಿ ಆಯುವುದೇ ಉದ್ಯೋಗ

ಹಾಸನ ಜಿಲ್ಲೆ ಶಿಕಾರಿ‍ಪುರದ ನಿವಾಸಿಗಳಿಗೆ ನೆರವಾಗಲು ಸರ್ಕಾರಕ್ಕೆ ಒತ್ತಾಯ
Last Updated 24 ಜುಲೈ 2020, 3:21 IST
ಅಕ್ಷರ ಗಾತ್ರ

ಆಲೂರು (ಹಾಸನ ಜಿಲ್ಲೆ): ಪದವಿ ಪಡೆದಿದ್ದರೂ ಚಿಂದಿ ಆಯ್ದುಕೊಂಡು ಜೀವನ ಸಾಗಿಸ ಬೇಕಾದ ಸ್ಥಿತಿ. ‘ಅತಂತ್ರ ಬದುಕನ್ನು ಸರಿಪಡಿಸಿ ಸ್ವತಂತ್ರವಾಗಿ ಬದುಕಲು ಅವಕಾಶ ಮಾಡಿಕೊಡಿ’ ಎಂಬ ಮನವಿಗೆ ಸಿಗದ ಸ್ಪಂದನೆ. ಪರಿಣಾ ಮವಾಗಿ ವಿದ್ಯಾವಂತರಾದರೂ ನಿರುದ್ಯೋ ಗಿಗಳಾಗಿ ಇರಬೇಕಾದ ದುಸ್ಥಿತಿ...

ಪಟ್ಟಣದಿಂದ ಕೂಗಳತೆ ದೂರದಲ್ಲಿ ಶಿಕಾರಿಪುರ ಎಂಬ ಪ್ರದೇಶವಿದೆ. ಪರಿಶಿಷ್ಟ ಪಂಗಡಕ್ಕೆ ಸೇರಿದ, ಸುಮಾರು 40 ವರ್ಷಗಳ ಹಿಂದೆ ಅಲೆಮಾರಿಗಳಾಗಿ ಇಲ್ಲಿಗೆ ಬಂದ ಹಲವರು ಗುಡಿಸಲು ಹಾಕಿಕೊಂಡು ನೆಲೆಯಾದರು. ಈಗ ಅಲ್ಲಿ 45 ಕುಟುಂಬಗಳು, 200ಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ಸುಮಾರು 100ರಷ್ಟು ಮತದಾರರಿರುವ ಈ ಗ್ರಾಮದ ಮಹಿಳೆಯೊಬ್ಬರು ಹುಣಸವಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿಯೂ ಆಯ್ಕೆಯಾಗಿದ್ದರು.

ಸ್ನಾತಕೋತ್ತರ ಪದವಿಯೂ ಸೇರಿ ವಿವಿಧ ಬಗೆಯ ಶಿಕ್ಷಣವನ್ನು ಪಡೆದಿರುವ ಸುಮಾರು 75 ಯುವಕ, ಯುವತಿಯರೂ ಇಲ್ಲಿನ ನಿವಾಸಿಗಳಾಗಿದ್ದಾರೆ. ಪಡೆದ ಶಿಕ್ಷಣಕ್ಕೆ ಪೂರಕವಾಗಿ ಸರ್ಕಾರಿ ಕೆಲಸ, ಸ್ವ ಉದ್ಯೋಗಕ್ಕೂ ಅರ್ಜಿ ಹಾಕಿದ ಹಲವಾರು ಮಂದಿಗೆ ಇದುವರೆಗೂ ಸಂದರ್ಶನ ಪತ್ರ ಬಂದಿಲ್ಲ.

‘ನಮ್ಮಲ್ಲಿರುವ ಪದವೀಧರರಿಗೆ ಸರ್ಕಾರ ಸಹಾಯ ಮಾಡಿ ಸ್ಪಂದಿಸಬೇಕು. ಇಲ್ಲಿನ ಬಾಡಿಗೆ ಮನೆಯೊಂದರಲ್ಲಿ ಅಂಗನವಾಡಿ ನಡೆಯುತ್ತಿದೆ. ಸಮುದಾಯಭವನಕ್ಕಾಗಿ ಜಾಗವಿದ್ದರೂ ನಿರ್ಮಾಣವಾಗಿಲ್ಲ. ಚುನಾವಣೆ ಬಂದಾಗ ಜನಪ್ರತಿನಿಧಿಗಳಿಗೆ ನಮ್ಮ ನೆನಪಾಗುತ್ತದೆ. 45 ಕುಟುಂಬ ಗಳಿದ್ದರೂ ಕೇವಲ 10 ಕುಟುಂಬಗಳಿಗೆ ನಿವೇಶನ ದೊರಕಿದೆ. ಮನೆ ನಿರ್ಮಾಣ ಅಪೂರ್ಣವಾಗಿದೆ. ಹಣ ಕೊಡುತ್ತಿಲ್ಲ. ಒಂದೊಂದು ನಿವೇಶನದಲ್ಲಿ 5-6 ಕುಟುಂಬಗಳಿವೆ. ಪ್ಲಾಸ್ಟಿಕ್, ತಗಡು, ಕಬ್ಬಿಣ, ಚಪ್ಪಲಿ, ಕಾಗದ ಆಯ್ದು ಮಾರಿ ಜೀವನ ಸಾಗಿಸಬೇಕಾಗಿದೆ. ನಮ್ಮ ನೆರವಿಗೆ ಸರ್ಕಾರ ಬರಬೇಕು’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಶೀಲಾ ಒತ್ತಾಯಿಸಿದರು.

‘ಬೆಳಗಾದರೆ ಮಹಿಳೆಯರು ಚಿಂದಿ ಆಯಲು, ಪುರುಷರು ಕೂಲಿ ಕೆಲಸಕ್ಕೆ ಹೋಗುತ್ತಾರೆ. ಇಲ್ಲದಿದ್ದರೆ ಜೀವನೋಪಾಯಕ್ಕೆ ತೊಂದರೆ ಯಾಗು ತ್ತದೆ. ಸ್ವ ಉದ್ಯೋಗ ಮಾಡಲು ಸರ್ಕಾರ ಸಹಕಾರ ನೀಡಬೇಕು. ನಮ್ಮೂರಿಗೆ ಶಿಕಾರಿಪುರ ಎಂಬ ನಾಮಫಲಕ ಅಳವಡಿಸಬೇಕು ಎನ್ನುತ್ತಾರೆ’ ಪದವೀಧ ರರಾದ ಸುರೇಶ್, ಸಾಗರ್, ಭವ್ಯಾ.

‘ಇಲ್ಲಿನ ನಿವಾಸಿಗಳು ‘ಡುಂಗ್ರಿ ಗರಾಸಿಯ’ ಪಂಗಡಕ್ಕೆ ಸೇರಿದ್ದು, ಸಮಾಜ ಕಲ್ಯಾಣ ಇಲಾಖೆ ನೆರವಿಗೆ ಬರಲಿದೆ. ಇವರಿಗೆ ನಿವೇಶನ ದೊರಕಿಸಿಲು ಅಕ್ಕಪಕ್ಕದಲ್ಲಿ ಜಾಗ ದೊರಕುತ್ತಿಲ್ಲ. ಬೇರೆಡೆ ತೆರಳಲು ಆಸಕ್ತಿ ತೋರುತ್ತಿಲ್ಲ. ಈಗ 15ನೇ ಹಣಕಾಸು ಯೋಜನೆಯಡಿಯಲ್ಲಿ ಕೆಲವು ಕಾಮಗಾರಿಗಳನ್ನು ಸೇರಿಸಲಾಗಿದೆ’ ಎನ್ನುತ್ತಾರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಹನಾ.

‘ಪರಿಶಿಷ್ಟ ಪಂಗಡಗಳಿಗಾಗಿ ವಾಲ್ಮೀಕಿ ನಿಗಮದಲ್ಲಿ ಭೌತಿಕ, ಆರ್ಥಿಕ ಅನುದಾನದ ಕೊರತೆ ಇದೆ. ಅನುದಾನದ ಮೊತ್ತ ಹೆಚ್ಚಿಸುವಂತೆ ಹೋರಾಟ ಮಾಡುತ್ತಿದ್ದೇನೆ. ನಿಗಮದಲ್ಲಿ ಅನಾವಶ್ಯಕವಾಗಿ ಹಣ ಖರ್ಚು ಮಾಡುವ ಬದಲು ಸ್ವ ಉದ್ಯೋಗಕ್ಕೆ ಅವಕಾಶ ಕಲ್ಪಿಸಬೇಕು. ನಿರುದ್ಯೋಗಿಗಳ ಸಮೀಕ್ಷೆ ಮಾಡಿ ಸ್ವಉದ್ಯೋಗಕ್ಕೆ ಅವಕಾಶ ಕಲ್ಪಿಸಲು ಸರ್ಕಾರದ ಸಹಕಾರ ಕೋರಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ’ ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT