ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬಕಾರಿ ಸುಂಕ ಹೆಚ್ಚಳಕ್ಕೆ ವಿರೋಧ: ಹೋರಾಟದ ಎಚ್ಚರಿಕೆ

ಸರ್ಕಾರದಿಂದ ಮದ್ಯಪ್ರಿಯರ ಸುಲಿಗೆ: ಆರೋಪ
Published 8 ಜುಲೈ 2023, 14:38 IST
Last Updated 8 ಜುಲೈ 2023, 14:38 IST
ಅಕ್ಷರ ಗಾತ್ರ

ಹಾಸನ: ಬಜೆಟ್‌ನಲ್ಲಿ ಅಬಕಾರಿ ಸುಂಕವನ್ನು ಶೇ 20ರಷ್ಟು ಹೆಚ್ಚಳ ಮಾಡುವ ಮೂಲಕ ರಾಜ್ಯ ಸರ್ಕಾರ ಮಧ್ಯಪ್ರಿಯರಿಂದ ಹಣ ಸುಲಿಗೆ ಮಾಡುತ್ತಿದೆ ಎಂದು ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದ ರಾಜ್ಯ ಘಟಕದ ಅಧ್ಯಕ್ಷ ವೆಂಕಟೇಶ ಗೌಡ ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಬಕಾರಿ ಸುಂಕ ಹೆಚ್ಚಳ ಮಾಡಿರುವುದಕ್ಕೆ ನಮ್ಮ ತೀವ್ರ ವಿರೋಧವಿದೆ. ಹಿಂದಿನ ಸರ್ಕಾರ ಬೆಳಗಾವಿ ಅಧಿವೇಶನದ ನಂತರ ಶೇ 30% ಅಬಕಾರಿ ಸುಂಕ ಹೆಚ್ಚಳ ಮಾಡಿತ್ತು. ಇದೇ ಕಾರಣಕ್ಕೆ ಶೇ 90ರಷ್ಟು ಮದ್ಯಪ್ರಿಯರು ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತ ಹಾಕಿದ್ದಾರೆ ಎಂದು ಹೇಳಿದರು.

ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಐದು ಗ್ಯಾರಂಟಿಗಳನ್ನು ಈಡೇರಿಸುವ ಭರದಲ್ಲಿ ಶೇ 20ರಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗಂಡನಿಂದ ತಿಂಗಳಿಗೆ ₹ 10 ಸಾವಿರದಿಂದ ₹20 ಸಾವಿರ ಸುಂಕದ ರೂಪದಲ್ಲಿ ವಸೂಲಿ ಮಾಡಿ, ಪತ್ನಿಗೆ ₹ 2ಸಾವಿರ ಹಾಕಲು ಮುಂದಾಗಿದೆ. ಕೂಡಲೇ ಹೆಚ್ಚಳ ಮಾಡಿರುವ ಅಬಕಾರಿ ಸುಂಕವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಹಿಂದಿನ ಬಿಜೆಪಿ ಸರ್ಕಾರ ಹೆಚ್ಚಳ ಮಾಡಿದ್ದ ಶೇ 30ರಷ್ಟು ಅಬಕಾರಿ ಸುಂಕವನ್ನು ರದ್ದು ಮಾಡಿ, ಶೇ 10 ರಷ್ಟು ಸುಂಕ ಇಳಿಕೆ ಮಾಡಬೇಕು. ಇಲ್ಲವಾದಲ್ಲಿ ಮದ್ಯಪ್ರಿಯರೆಲ್ಲರೂ ಸೇರಿ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟ ಅವಧಿ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿರೋಧ ಪಕ್ಷದ ಶಾಸಕರು ಕೂಡ ನಮ್ಮ ಪರ ಧ್ವನಿ ಎತ್ತುತ್ತಿಲ್ಲ. ಅವರನ್ನು ಎಚ್ಚರಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದ ಅವರು, ಶೀಘ್ರದಲ್ಲಿಯೇ ನಮ್ಮ ಸಂಘದ ಸಭೆ ಕರೆದು ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಅಬಕಾರಿ ಸುಂಕ ಹಿಂಪಡೆಯದಿದ್ದಲ್ಲಿ ಸಂಘದಿಂದ ನಿರಂತರ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT