ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ : ಸಚಿವ ಎಚ್.ಡಿ.ರೇವಣ್ಣ

7
ಯಡಿಯೂರಪ್ಪ ವಿರುದ್ಧ ಸಚಿವ ರೇವಣ್ಣ ವಾಗ್ದಾಳಿ

ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ : ಸಚಿವ ಎಚ್.ಡಿ.ರೇವಣ್ಣ

Published:
Updated:
Deccan Herald

ಹಾಸನ: ‘ನನ್ನ ಇಲಾಖೆ ಅಥವಾ ಬೇರೆ ಇಲಾಖೆಯ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡಿದ್ದರೆ ಇಲ್ಲವೇ ದಂಧೆ ನಡೆಸಿದ್ದರೆ, ಯಡಿಯೂರಪ್ಪ ಹೇಳಿಕೆಗೆ ಬದ್ಧ’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ.

‘ಯಡಿಯೂರಪ್ಪ ನನ್ನ ಬಳಿ ಬಂದರೆ ವರ್ಗಾವಣೆ ಪಟ್ಟಿಯನ್ನು ಅವರ ಮುಂದೆ ಇಡುವೆ. ಅದರಲ್ಲಿ ಏನಾದರೂ ಹಣಕಾಸು ವ್ಯವಹಾರ ಅಥವಾ ದಂಧೆ ನಡೆದಿದ್ದರೆ, ಅವರು ಹೇಳಿದಂತೆ ಕೇಳುವೆ’ ಎಂದು ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

‘ನನ್ನ ಇಲಾಖೆ ಹೊರತುಪಡಿಸಿ ಅನ್ಯ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದರೆ, ಈ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ಅಥವಾ ಬೇರೆ ಯಾವುದೇ ಮಂತ್ರಿಗಳು ಹೇಳಲಿ. ನನಗೆ ಅಂಥ ಪ್ರಮೇಯ ಇಲ್ಲ’ ಎಂದರು.

‘ಸತ್ಯಕ್ಕೆ ದೂರವಾಗಿರುವ ಯಡಿಯೂರಪ್ಪ ಪ್ರಶ್ನೆಗೆ ನಾನು ಉತ್ತರಿಸಿದರೆ, ಪೊಳ್ಳೆದ್ದು ಹೋಗುವೆ’ ಎಂದು ಅವರದೇ ಭಾಷೆಯಲ್ಲಿ ಲೇವಡಿ ಮಾಡಿದರು.

‘ನಮ್ಮದು ಅಖಂಡ ಕರ್ನಾಟಕ ಉದ್ದೇಶ. ಉತ್ತರ ಕರ್ನಾಟಕಕ್ಕೆ ಏನಾದರೂ ಅನ್ಯಾಯವಾಗಿದ್ದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಯಡಿಯೂರಪ್ಪ ಮಾತನಾಡಲಿ. ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಹೋಗುವುದಲ್ಲ. ಅವರು ಮುಖ್ಯಮಂತ್ರಿಯಾಗಿದ್ದಾಗ ಮತ್ತು ಹಾಲಿ ಕೇಂದ್ರ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಬಹಿರಂಗ ಪಡಿಸಲಿ’ ಎಂದು ಒತ್ತಾಯಿಸಿದರು.

ಪುತ್ರ ಪ್ರಜ್ವಲ್ ರೇವಣ್ಣ ಚುನಾವಣಾ ರಾಜಕೀಯ ಪ್ರವೇಶ ಮಾಡುವ ಕುರಿತ ಪ್ರಶ್ನೆಗೆ, ‘ನಾನು ಶಾಸಕನಾಗಲು 32 ವರ್ಷ ಕಾಯಬೇಕಾಯಿತು. ಮಗನಿಗೆ ಇನ್ನು ಸಮಯ ಇದೆ. ಅಲ್ಲಿಯವರೆಗೂ ಪಕ್ಷದ ಕೆಲಸ ಮಾಡಲಿ. ದೇವೇಗೌಡರ ಉತ್ತರಾಧಿಕಾರಿ ಯಾರು ಎಂಬುದನ್ನು ಪಕ್ಷದ ಮುಖಂಡರು ತೀರ್ಮಾನ ಮಾಡಲಿದ್ದಾರೆ. ಆ ಬಗ್ಗೆ ನಾನು ಹೇಳುವುದು ಸೂಕ್ತ ಅಲ್ಲ’ ಎಂದು ಸ್ಪಷ್ಟಪಡಿಸಿದರು. 

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !