ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ತಾರತಮ್ಯ ಸರಿಪಡಿಸಿ

2020ರ ಮೌಲ್ಯಮಾಪನ ಬಹಿಷ್ಕರಿಸಲು ನಿರ್ಧಾರ: ಉಪನ್ಯಾಸಕರ ಪ್ರತಿಭಟನೆ
Last Updated 28 ನವೆಂಬರ್ 2019, 14:48 IST
ಅಕ್ಷರ ಗಾತ್ರ

ಹಾಸನ: ವೇತನ ತಾರತಮ್ಯ ಸರಿಪಡಿಸುವ ಸಂಬಂಧ ಎರಡನೇ ಹೆಚ್ಚುವರಿ ವೇತನ ಬಡ್ತಿ ಮಂಜೂರು ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಆರ್‌.ಸಿ. ರಸ್ತೆಯಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯಿಂದ ಮೆರವಣಿಗೆಯಲ್ಲಿ ಬಂದು ಜಿಲ್ಲಾಧಿಕಾರಿ ಆರ್.ಗಿರೀಶ್‌ ಅವರಿಗೆ ಮನವಿ ಸಲ್ಲಿಸಿದರು.

2016ರಲ್ಲಿ ಸರ್ಕಾರ ಕೊಟ್ಟ ಮಾತಿನಂತೆ ಈವರೆಗೂ ಬೇಡಿಕೆ ಈಡೇರಿಸಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದರೂ ಶಿಕ್ಷಣ ಸಚಿವರಾಗಲಿ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಾಗಲಿ ಸಂಘದ ಜತೆ ಚರ್ಚೆ ನಡೆಸಿಲ್ಲ. ಹಾಗಾಗಿ ಸಂಘದ ಕಾರ್ಯಕಾರಿ ಸಮಿತಿ ತೀರ್ಮಾನದಂತೆ 2020ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮೌಲ್ಯಮಾಪನ ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದರು.

2008ರ ಆ.1ರ ನಂತರ ಆಯ್ಕೆಯಾದ ಉಪನ್ಯಾಸಕರಿಗೆ ನೀಡುತ್ತಿದ್ದ ₹ 500 ವಿಶೇಷ ಭತ್ಯೆಯನ್ನು ಕೂಡಲೇ ಮೂಲ ವೇತನದಲ್ಲಿ ವಿಲೀನಗೊಳಿಸಬೇಕು. ಈಗಾಗಲೇ ವಿಶೇಷ ಭತ್ಯೆಯನ್ನು ಮರು ಪಾವತಿಸುವಂತೆ ಮಾಡಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

‌ಪ್ರೌಢಶಾಲೆಯಿಂದ ಪದೋನ್ನತಿ ಹೊಂದಿ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರಿಗೆ ಹಲವು ವರ್ಷಗಳ ಕಾಲಮಿತಿ ವೇತನ ಬಡ್ತಿ ಮಂಜೂರು ಮಾಡಬೇಕು. ಉಪನ್ಯಾಸಕರ ಕಾರ್ಯ ಭಾರ ಕುರಿತು ಉನ್ನತ ಮಟ್ಟದ ಪರಿಷತ್ ಸಮಿತಿ ರಚಿಸುವವರೆಗೂ ವಾರದಲ್ಲಿ 16 ಗಂಟೆ ಬೋಧನಾ ಅವಧಿ ಮಂದುವರಿಸಬೇಕು ಎಂದು ಮನವಿ ಮಾಡಿದರು.

ನೆಟ್‌, ಸ್ಲೇಡ್‌, ಪಿಎಚ್.ಡಿ. ವಿದ್ಯಾರ್ಹತೆ ಹೊಂದಿರುವ ಉಪನ್ಯಾಸಕರಿಗೆ ಪದವಿ ಕಾಲೇಜುಗಳಿಗೆ ಬಡ್ತಿ ನೀಡಬೇಕು. ಅನುದಾನಿತ ಕಾಲೇಜುಗಳ ಉಪನ್ಯಾಸಕರ ವೇತನ ಸಮಸ್ಯೆ ಬಗೆಹರಿಸಬೇಕು ಮತ್ತು ನೂತನ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಪ್ರತಿ ತರಗತಿಗೆ ವಿದ್ಯಾರ್ಥಿಗಳ ಸಂಖ್ಯೆಯನ್ನು 80ರಿಂದ 40ಕ್ಕೆ ನಿಗದಿಪಡಿಸಬೇಕು ಎಂದರು.

ವೃತ್ತಿ ಶಿಕ್ಷಣ ಇಲಾಖೆಯಿಂದ ವಿಲೀನವಾಗಿರುವ ಉಪನ್ಯಾಸಕರಿಗೆ ಬಿಇಡಿ ಪದವಿಯಿಂದ ವಿನಾಯಿತಿ ನೀಡಿ, ಕಾಯಂ ಸೇವಾವಧಿ ನೀಡಬೇಕು. ಖಾಲಿ ಇರುವ 600 ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲ ಹುದ್ದೆಗೆ ಪದೋನ್ನತಿ ನೀಡಬೇಕು ಎಂದು ಒತ್ತಾಯಿಸಿದರು.

ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಟಿ. ಸುರೇಶ್, ಕಾರ್ಯಾಧ್ಯಕ್ಷ ಬಿ.ಟಿ. ಕಂಬೇಗೌಡ, ಪ್ರಧಾನ ಕಾರ್ಯದರ್ಶಿ ಹೊನ್ನವಳ್ಳಿ ವೆಂಕಟೇಶ್, ಕೋಶಾಧ್ಯಕ್ಷ ಸುರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT