ಸೂರಜ್ ಸ್ಪರ್ಧೆ; ಕಾರ್ಯಕರ್ತರ ನಿರ್ಧಾರ: ರೇವಣ್ಣ

ಹಾಸನ: ಜೆಡಿಎಸ್ ಪಕ್ಷದ ಕಾರ್ಯಕರ್ತರು, ಮುಖಂಡರ ಒತ್ತಾಯದ ಮೇರೆಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಆರ್.ಸೂರಜ್ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.
ಮಿಸಲಾತಿಯೇ ಇಲ್ಲದ ಸಮಯದಲ್ಲಿ ಎಸ್‌ಸಿ ಸಮುದಾಯದ ಬಾಲಕೃಷ್ಣ ಅವರನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಅದೇ ರೀತಿ ಚಿಕ್ಕಮಗಳೂರಿನಲ್ಲೂ ಕುರುಬ ಸಮುದಾಯದ ಕೆ.ಬಿ. ಕೃಷ್ಣಮೂರ್ತಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೆವು. ದೇವೇಗೌಡರು ಸಿ.ಎಂ. ಆಗಿದ್ದಾಗ ಮೊದಲ ಬಾರಿಗೆ ಅಲ್ಪಸಂಖ್ಯಾತರಿಗೆ ಶೇಕಡಾ 4 ರಷ್ಟು ಮೀಸಲಾತಿ ನೀಡಲಾಯಿತು. ಸೂರಜ್ ಸ್ಪರ್ಧೆ ಕಾರ್ಯಕರ್ತರ ಆಯ್ಕೆಯಾಗಿತ್ತು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಮೀಸಲಾತಿ ವಿರೋಧ ಪಕ್ಷಗಳ ನಾಯಕರಿಗೆ ದಿನ ಬೆಳಗಾದರೆ ದೇವೇಗೌಡರು ಮತ್ತು ಅವರ ಕುಟುಂಬ ಸದಸ್ಯರ ಹೆಸರು ಹೇಳದೇ ಹೋದರೆ ನಿದ್ದೆ ಬರುವುದಿಲ್ಲ. ವಿಧಾನ ಪರಿಷತ್ ಚುನಾವಣೆಯಲ್ಲಿ ಅವರ ಟೀಕೆಗೆ ಉತ್ತರ ನೀಡಲು ಹೋಗುವುದಿಲ್ಲ. ದೊಡ್ಡವರ ಬಗ್ಗೆ ಮಾತನಾಡಿ, ಅರಗಿಸಿಕೊಳ್ಳುವ ಶಕ್ತಿ ಇಲ್ಲ. ಕಾಂಗ್ರೆಸ್ ಕೇವಲ ಅಲ್ಪಸಂಖ್ಯಾತರು ಹಾಗೂ ಎಸ್‌ಸಿ, ಎಸ್ಟಿ ಸಮುದಾಯದವರ ಮತ ಪಡೆಯುತ್ತಿದೆಯೇ ಹೊರತು, ಈ ಸಮುದಾಯಗಳಿಗೆ ಅವರು ನೀಡಿರುವ ಕೊಡುಗೆ ಏನು ಎಂದು ಪ್ರಶ್ನಿಸಿದರು.
ರೈತರ ಹೆಸರು ಹೇಳಿಕೊಂಡು ತಲೆಮಾರು ರಾಜಕೀಯ ಮಾಡುವ ಪ್ರಮೇಯ ಇಲ್ಲ. ಅಭಿವೃದ್ಧಿ ನೋಡಿ ಮತ ಹಾಕುವಂತೆ ಜನರ ಬಳಿ ಹೋಗುತ್ತೇವೆ. ಜನರು ಹಾಗೂ ದೇವರ ಆಶೀರ್ವಾದ ಇರುವವರೆಗೂ ಕುಟುಂಬ ರಾಜಕಾರಣವನ್ನು ಎರಡೂ ರಾಷ್ಟ್ರೀಯ ಪಕ್ಷಗಳಿಂದ ಅಂತ್ಯ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಕಾಲವೇ ನಿರ್ಧರಿಸುತ್ತದೆ ಎಂದು ತಿರುಗೇಟು ನೀಡಿದರು.
ರೈತರಿಗೆ ರಾಷ್ಟ್ರೀಯ ಪಕ್ಷಗಳ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು ರಸಗೊಬ್ಬರ, ನೀರಾವರಿ ಯೋಜನೆಗೆಳಿಗೆ ಸಬ್ಸಿಡಿ ನೀಡಿದ್ದು ಯಾರು ಎಂದು ಜನರಿಗೆ ಗೊತ್ತಿದೆ. ಮತದಾರರು ಅಪಪ್ರಚಾರಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.
ಆರ್.ಸೂರಜ್ ಅವರ ನಾಮಪತ್ರ ಕಾನೂನು ಬಾಹಿರವಾಗಿದೆ ಎಂದು ಆಕ್ಷೇಪಿಸಿ ಕುಂದೂರು ಗ್ರಾಮದ ಕೆ.ಎಲ್.ಹರೀಶ್ ಸಲ್ಲಿಸಿದ್ದ ರಿಟ್ ಅರ್ಜಿಗೆ ಸಂಬಂಧಿಸಿದ ಪ್ರಶ್ನೆಗೆ ರೇವಣ್ಣ ಪ್ರತಿಕ್ರಿಯಿಸಲು ನಿರಾಕರಿಸಿದರು. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಮಾತನಾಡುವುದಿಲ್ಲ. ಉದ್ದೇಶಪೂರ್ವಕವಾಗಿಯೇ ಗೊಂದಲ ಉಂಟು ಮಾಡಲು ಈ ರೀತಿ ಮಾಡಲಾಗಿದೆ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.