ಬೇಲೂರು: ತಾಲ್ಲೂಕಿನ ಚೀಕನಹಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ರೌಡಿ ಶೀಟರ್ ಮಧು ಹಾಗೂ ರಘು ಎಂಬುವವರು ಸೇರಿ, ಡ್ರ್ಯಾಗನ್ ಚಾಕುವಿನಿಂದ ಇರಿದು ನೀರುಗಂಟಿ ಗಣೇಶ್(27) ಎಂಬಾತನನ್ನು ಕೊಲೆ ಮಾಡಿದ್ದಾನೆ.
ತಾಲ್ಲೂಕಿನ ಅರೇಹಳ್ಳಿ ಗ್ರಾಮದ ರೌಡಿ ಶೀಟರ್ ಮಧು, ಶುಕ್ರವಾರ ರಾತ್ರಿ ಚೀಕನಹಳ್ಳಿಯಲ್ಲಿ ಸ್ನೇಹಿತರೊಂದಿಗೆ ಮದ್ಯ ಸೇವಿಸಿದ್ದಾನೆ. ನಂತರ ಸ್ನೇಹಿತರನ್ನು ಇಸ್ಪೀಟ್ ಆಡಲು ಕರೆದಿದ್ದಾನೆ. ಚೀಕನಹಳ್ಳಿ ಗ್ರಾಮ ಪಂಚಾಯಿತಿ ನೀರುಗಂಟಿ ಕುಂಬಾರಳ್ಳಿಯ ಗಣೇಶ್, ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾನೆ.
ನಂತರ ಆರೋಪಿ ರೌಡಿ ಶೀಟರ್ ಮಧು ಹಾಗೂ ರಘು, ಗಣೇಶನನ್ನು ಆಟೋ ನಿಲ್ದಾಣದತ್ತ ಕರೆದುಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ಸಣ್ಣ ದ್ವನಿಯಲ್ಲಿ ಮಾತನಾಡುತ್ತಿದ್ದವರು, ಜೋರಾಗಿ ಮಾತಿಗೆ ಮಾತು ಬೆಳೆದಿದೆ. ಮೊದಲೇ ಮದ್ಯ ಸೇವಿಸಿದ್ದ ಮಧು ಹಾಗೂ ರಘು, ಆಕ್ರೋಶಿತರಾಗಿ ಡ್ರ್ಯಾಗನ್ ಚಾಕುವಿನಿಂದ ಗಣೇಶನಿಗೆ ಇರಿದಿದ್ದಾರೆ. ತೀವ್ರ ರಕ್ತಸ್ರಾವವಾಗಿ ಆಟೋ ನಿಲ್ದಾಣದ ಸ್ಥಳದಲ್ಲಿಯೇ ಗಣೇಶ ಮೃತಪಟ್ಟಿದ್ದಾನೆ.
ಗಣೇಶ ಕುಸಿದು ಬಿದ್ದಿದ್ದನ್ನು ಕಂಡು ಮಧು ಮತ್ತು ರಘು ಸ್ಥಳದಿಂದ ಪರಾರಿಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅರೇಹಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನ ಹಿಮ್ಸ್ ಆಸ್ಪತ್ರೆಗೆ ಸಾಗಿಸಿದರು.
ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಮಾಡಿ ಪರಾರಿಯಾಗಿರುವ ಆರೋಪಿ ರೌಡಿ ಶೀಟರ್ ಮಧು ಹಾಗೂ ರಘು ಬಂಧನಕ್ಕಾಗಿ ತಂಡ ರಚಿಸಿ ತನಿಖೆ ಕೈಗೊಂಡಿದ್ದಾರೆ.
₹ 100 ಕೊಡದಿದ್ದಕ್ಕೆ ಕೊಲೆ: ಕೇವಲ ₹100 ಕೊಟ್ಟಿಲ್ಲವೆಂಬ ಕಾರಣಕ್ಕೆ ಗಣೇಶನನ್ನು ಕೊಲೆ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಶುಕ್ರವಾರ ರಾತ್ರಿ ಪಾರ್ಟಿ ಮುಗಿಸಿದ ನಂತರ ಗಣೇಶನ ಗೆಳೆಯ ರಘು, ₹100 ಕೇಳಿದ್ದ ಎನ್ನಲಾಗಿದೆ. ಇದಕ್ಕೆ ಉತ್ತರಿಸಿದ್ದ ಗಣೇಶ್, ‘ಪದೇ ಪದೇ ಹಣ ಏಕೆ ಕೇಳುತ್ತೀಯಾ? ನನ್ ಹತ್ತಿರ ದುಡ್ಡಿಲ್ಲ ಹೋಗು’ ಎಂದು ಹೇಳಿದ್ದಕ್ಕೆ ಸಿಟ್ಟಾಗಿದ್ದ ರಘು, ರೌಡಿಶೀಟರ್ ಗೆಳೆಯ ಮಧು ಎಂಬುವವನಿಗೆ ವಿಚಾರ ತಿಳಿಸಿದ್ದ. ಮೊದಲೇ ಕುಡಿದ ಅಮಲಿನಲ್ಲಿದ್ದ ಮಧು, ಏಕಾಏಕಿ ಗಣೇಶ್ ಮೇಲೆ ಮುಗಿಬಿದ್ದಿದ್ದ.
‘ನನ್ನ ದೋಸ್ತನಿಗೆ ಹಣ ಕೊಡುವುದಿಲ್ಲ ಎನ್ನುತ್ತೀಯಾ’ ಎಂದು ಹಲ್ಲೆ ಮಾಡಲು ಮುಂದಾಗಿದ್ದಾನೆ. ತಪ್ಪಿಸಿಕೊಂಡು ಓಡಲು ಯತ್ನಿಸಿದರೂ ಬಿಡದೇ ಗಣೇಶ್ನನ್ನು ಅಟ್ಟಾಡಿಸಿಕೊಂಡು ಹೋದ ರಘು ಮತ್ತು ಮಧು, ರಸ್ತೆ ಬದಿಯಲ್ಲೇ ಚೂರಿಯಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಕೊಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.ಮೊಹಮ್ಮದ್ ಸುಜೀತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.