ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7ರ ಬಳಿಕ ಲಾಕ್‌ಡೌನ್‌; ಚರ್ಚಿಸಿ ತೀರ್ಮಾನ

ಸಂವಾದ ನಂತರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ
Last Updated 29 ಮೇ 2021, 16:52 IST
ಅಕ್ಷರ ಗಾತ್ರ

ಹಾಸನ: ‘ಜೂನ್‌ 7ರ ಬಳಿಕ ಜಿಲ್ಲೆಯಲ್ಲಿ ಲಾಕ್‌ಡೌನ್‌ ತೆರವುಗೊಳಿಸು ವುದು ಅಥವಾ ಮುಂದುವರೆಸುವ ಬಗ್ಗೆ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ನಂತರ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಖ್ಯಮಂತ್ರಿ ನಡೆಸಿದ ವಿಡಿಯೊ ಸಂವಾದದಲ್ಲಿ ಭಾಗವಹಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆ ಕೊರೊನಾ ಪಾಸಿಟಿವಿಟಿ ದರ ಶೇಕಡಾ 45ರಷ್ಟಿತ್ತು. ಮೂರು ದಿನಗಳಿಂದ ಸರಾಸರಿಪಾಸಿಟಿವಿಟಿ ದರ ಶೇಕಡಾ 35ಕ್ಕೆ ಇಳಿಕೆಯಾಗಿದೆ. ಇನ್ನು ಒಂದು ವಾರದಲ್ಲಿ ಶೇಕಡಾ 12ರಷ್ಟಕ್ಕೆ ಇಳಿಸುವ ಗುರಿ ಹೊಂದಲಾಗಿದೆ’ ಎಂದು ತಿಳಿಸಿದರು.

‘ಜೂನ್‌ 7 ಬಳಿಕವೂ ಲಾಕ್‌ಡೌನ್‌ ಮುಂದುವರೆಸುವ ಬಗ್ಗೆ ಕೇಂದ್ರ ಮತ್ತು ರಾಜ್ಯದಿಂದ ಏನೇ ಮಾರ್ಗಸೂಚಿ ಹೊರಡಿಸಿದರೂ ಅದನ್ನು ಪಾಲಿಸಲಾಗುವುದು. ಜತೆಗೆ ಆಯಾ ಜಿಲ್ಲೆಯ ಸ್ಥಿತಿಗತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಅಧಿಕಾರ ನೀಡಿರುವುದರಿಂದ ಅ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದರು.

‘ಜಿಲ್ಲೆಯ ಎಲ್ಲಾ ಶಾಸಕರ ಒತ್ತಾಯದಂತೆ ಹೋಂ ಐಸೋಲೇಷನ್‌ ತೆಗೆದು ಪ್ರತಿಯೊಬ್ಬ ಕೊರೊನಾ ಸೋಂಕಿತ ವ್ಯಕ್ತಿ ಕೋವಿಡ್‌ ಆರೈಕೆ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆಯಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥ್‌ನಾರಾಯಣ ಆದೇಶ ಹೊರಡಿಸಿದ್ದರು. ಅದರಂತೆ ಜಿಲ್ಲೆಯಲ್ಲಿ ಸಿಸಿ ಕೇಂದ್ರಗಳನ್ನು ತರೆಯಲಾಗಿದೆ. ಪೊಲೀಸರ ಸಹಕಾರ ಪಡೆದು ಸಿಬ್ಬಂದಿ ಸೋಂಕಿತ ವ್ಯಕ್ತಿಯನ್ನು ಸಿಸಿ ಕೇಂದ್ರಕ್ಕೆ ತಂದು ಬಿಡುವ ಕಾರ್ಯ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ನಿನ್ನೆಯವರೆಗೆ2,796 ಮಂದಿಯನ್ನು ಕರೆತರಲಾಗಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಕೋವಿಡ್‌ ರೋಗಿಗಳ ಸಾವಿನ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. 8ರಿಂದ 10 ದಿನಗಳಲ್ಲಿ ಜಿಲ್ಲೆಯಲ್ಲಿ ಕೋವಿಡ್‌ ಮತ್ತಷ್ಟು ಹತೋಟಿಗೆ ಬರಲಿದೆ. ಈಗಾಗಲೇ ಜಿಲ್ಲೆಯಲ್ಲಿ ‘ವೈದ್ಯರ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, 50 ವಾಹನಗಳನ್ನು ಒದಗಿಸಲಾಗಿದೆ. ಯಾವ ತಾಲ್ಲೂಕಿಗೆ ಹೆಚ್ಚಿನ ವಾಹನಗಳು ಬೇಕು ಎಂದು ಶಾಸಕರು ತಿಳಿಸಿದರೆ ಒದಗಿಸಲಾಗುವುದು’ ಎಂದರು.

‘ಸಕಲೇಶಪುರ, ಬೇಲೂರು ಮತ್ತು ಅರಸೀಕೆರೆ ತಾಲ್ಲೂಕಿನಲ್ಲಿ ಈಗಾಗಲೇ ಆಮ್ಲಜನಕ ಘಟಕದ ಕಾಮಗಾರಿ ಆರಂಭವಾಗಿದೆ. ಅದೇ ರೀತಿ ಎಲ್ಲಾ ತಾಲ್ಲೂಕುಗಳಲ್ಲಿಯೂಆಮ್ಲಜನಕ ಘಟಕ ಸ್ಥಾಪನೆಗೆ ಟೆಂಡರ್‌ ಕರೆಯಲಾಗಿದೆ. ಕೋವಿಡ್‌ ಮೂರನೇ ಅಲೆಗೆ ಈಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಜಿಲ್ಲಾಡಳಿತ ಕೋವಿಡ್‌ ಮೂರನೇ ಅಲೆ ಎದುರಿಸಲು ಸನ್ನದ್ಧವಾಗಿದೆ’ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಸಿ.ಎನ್. ಬಾಲಕೃಷ್ಣ, ಕೆ.ಎಸ್. ಲಿಂಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT