ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಮೇಲ್ಮನೆ ಪ್ರವೇಶ ಅವಕಾಶ ಯಾರಿಗೆ?

ಮತ ಎಣಿಕೆಗೆ ಸಕಲ ಸಿದ್ಧತೆ, ಮಧ್ಯಾಹ್ನದ ವೇಳೆಗೆ ಫಲಿತಾಂಶ ಬರುವ ನಿರೀಕ್ಷೆ
Last Updated 13 ಡಿಸೆಂಬರ್ 2021, 15:48 IST
ಅಕ್ಷರ ಗಾತ್ರ

ಹಾಸನ: ಕುತೂಹಲ ಕೆರಳಿಸಿರುವ ವಿಧಾನ ಪರಿಷತ್ ಚುನಾವಣೆ ಮತ ಎಣಿಕೆ ಮಂಗಳವಾರ ನಡೆಯಲಿದ್ದು, ಮೂವರಲ್ಲಿ ಯಾರಿಗೆ ಮೇಲ್ಮನೆ ಪ್ರವೇಶ ಮಾಡುವ ಅದೃಷ್ಟ ಸಿಗಲಿದೆ ಎಂಬ ಚಿತ್ರಣ ಮಧ್ಯಾಹ್ನದ ವೇಳೆಗೆ ಗೊತ್ತಾಗಲಿದೆ.

ಮತ ಎಣಿಕೆಗಾಗಿಒಟ್ಟು 14 ಟೇಬಲ್ ಅಳವಡಿಸಲಾಗಿದೆ. ಒಂದು ಟೇಬಲ್‌ಗೆ ಒಬ್ಬರು ಎಣಿಕಾ ಮೇಲ್ವಿಚಾರಕರು ಮತ್ತು ಸಹಾಯಕರು ಸೇರಿ ಇಬ್ಬರು ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.ಮತಗಟ್ಟೆ ಅಧಿಕಾರಿ ಮತ್ತು ಸಹಾಯಕ ಮತಗಟ್ಟೆ ಅಧಿಕಾರಿ ಟೇಬಲ್‌ಗಳೂ ಇರಲಿವೆ ಎಂದು ಜಿಲ್ಲಾ ಸಹಾಯಕ ಚುನಾವಣಾ ಅಧಿಕಾರಿಯೂ ಆಗಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂಮಾಹಿತಿ ನೀಡಿದರು.

ಒಟ್ಟು 257 ಮತಗಟ್ಟೆಗಳ ಬಾಕ್ಸ್‌ಗಳನ್ನು ತೆರೆದು ಚಲಾವಣೆ ಯಾಗಿರುವ ಮತಗಳನ್ನು ಖಚಿತ ಪಡಿಸಿಕೊಳ್ಳಲಾಗುವುದು. ಮತಗಟ್ಟೆ ಅಧಿಕಾರಿ ಟೇಬಲ್‌ಗಳಲ್ಲಿ ಎಲ್ಲಾ ಮತಪತ್ರಗಳನ್ನು ಮಿಶ್ರಣ ಮಾಡಿ
ಆ ನಂತರ ತಲಾ 25 ರಂತೆ ಬಂಡಲ್ ಮಾಡಿ ಪ್ರತಿ ಮತ ಎಣಿಕಾ ಟೇಬಲ್‌ಗೆ ತಲಾ 250 ಮತಪತ್ರಗಳನ್ನು ಹಂಚಿಕೆ ಮಾಡಲಾಗುವುದು. ಪ್ರಾಶಸ್ತ್ಯ ಆಧಾರದ ಮೇಲೆ ಮತ ಎಣಿಕೆ ನಡೆಯಲಿದೆ ಎಂದು ಹೇಳಿದರು.

ಡಿ.10 ರಂದು ನಡೆದ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಮತ ಚಲಾಯಿಸಿದ್ದರು. ಶೇ 99.78ರಷ್ಟು ಮತದಾನವಾಗಿತ್ತು. ಶೇಕಡಾವಾರು ಮತದಾನ, ಹಂಚಿಕೆ ಮಾಡಿರುವ ಹಣ ಎಷ್ಟರ ಮಟ್ಟಿಗೆ ಕೆಲಸ ಮಾಡಿದೆ ಎಂಬುದರ ಆಧಾರದ ಮೇಲೆ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಸೋಲು, ಗೆಲುವಿನ ಲೆಕ್ಕಾಚಾರ ನಡೆಸಿದ್ದಾರೆ. ಮತದಾರರು ತಮ್ಮ ಕೈ ಹಿಡಿಯಲಿದ್ದಾರೆ ಎಂಬುದು ಮೂರೂ ಅಭ್ಯರ್ಥಿಗಳ ವಿಶ್ವಾಸದ ನುಡಿಯಾಗಿದೆ.

ಗ್ರಾಮ ಪಂಚಾಯಿತಿಗಳಲ್ಲಿ ಪಕ್ಷ ಬೆಂಬಲಿತ ಸದಸ್ಯರೇ ಹೆಚ್ಚು ಆಯ್ಕೆಯಾಗಿರುವುದರಿಂದ ಗೆಲುವು ನಮ್ಮದೇ ಎಂಬುದು ಜೆಡಿಎಸ್‌ ವಿಶ್ವಾಸವಾಗಿದ್ದರೆ, ಕಳೆದ ಬಾರಿಯಂತೆ ಈ ಬಾರಿಯೂ ನಮ್ಮದೇ ಗೆಲುವು ಎಂಬ ಲೆಕ್ಕಾಚಾರ ‘ಕೈ’ ಪಡೆಯದ್ದಾಗಿದೆ. ಬಿಜೆಪಿಗೆ ಆಡಳಿತ ಬಲವಷ್ಟೇ ಕೈ ಹಿಡಿಯಬೇಕಿದೆ.

ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚು ಮಂದಿ ಜೆಡಿಎಸ್ ಬೆಂಬಲಿತರು ಹೆಚ್ಚಿರುವುದರಿಂದ ಡಾ.ಸೂರಜ್ ಅವರ ಗೆಲುವು ಶತಸಿದ್ಧ. ಎಷ್ಟು ಮತಗಳ ಅಂತರದಿಂದ ಗೆಲುವುಸಾಧಿಸಿದ್ದಾರೆ ಎಂಬುದನ್ನಷ್ಟೇ ತಿಳಿಯಬೇಕಿದೆ ಎನ್ನುತ್ತಿದೆ ಜೆಡಿಎಸ್ ಪಾಳೆಯ.

ಹಿಂದಿನ ಬಾರಿಯಂತೆಯೇ ಗೆಲ್ಲುತ್ತೇವೆ ಎಂದು ಕಾಂಗ್ರೆಸ್ ಹೇಳುತ್ತಿದ್ದರೂ, ಅದಕ್ಕೆ ಪೂರಕವಾದ ಸನ್ನಿವೇಶ ಕಂಡು ಬರಲಿಲ್ಲ. ರಾಜ್ಯದ ಕೆಲವು ನಾಯಕರ ಹೊರತಾಗಿ ಜಿಲ್ಲೆಯ ಎಲ್ಲಾ ಮುಖಂಡರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಅಭ್ಯರ್ಥಿಗಳು ಎಂ.ಶಂಕರ್ ಪರ ಪ್ರಚಾರ ಮಾಡದೇ ಇರುವುದು ಹಿನ್ನಡೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಬಿಜೆಪಿ ಅಭ್ಯರ್ಥಿ ಎಚ್.ಎಂ. ವಿಶ್ವನಾಥ್ ಅವರ ಪರವಾಗಿಉಸ್ತುವಾರಿ ಸಚಿವಕೆ.ಗೋಪಾಲಯ್ಯ ಅವರು ಒಂದು ಬಾರಿ ಜಿಲ್ಲೆಯಾದ್ಯಂತ ಪ್ರವಾಸ ಮಾಡಿದರು. ಇವರೊಂದಿಗೆ ಕೆಲ ಸ್ಥಳೀಯ ಮುಖಂಡರು ಕಾಣಿಸಿಕೊಂಡರಾದರೂ, ನಂತರದ ದಿನಗಳಲ್ಲಿ ಸರ್ಕಾರದ ಸಾಧನೆ, ವಿಪಕ್ಷಗಳ ಲೋಪಗಳನ್ನು ಮುಂದಿಟ್ಟು ಒಗ್ಗಟ್ಟಾಗಿ ಕೆಲಸ ಮಾಡುವ ಗೋಜಿಗೆ ಹೋಗಲೇ ಇಲ್ಲ.ಆದರೂ ಸರ್ಕಾರದ ಶ್ರೀರಕ್ಷೆ ತಮಗೆ ಗೆಲುವಿನ ಉಡುಗೊರೆ ನೀಡಲಿದೆ ಎಂಬ ಲೆಕ್ಕಾಚಾರದಲ್ಲಿ ಅನೇಕರಿದ್ದಾರೆ.

ಮತ ಎಣಿಕೆ ನಡೆಯುವ ನಗರದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ 200 ಮೀಟರ್ ವ್ಯಾಪ್ತಿಯಲ್ಲಿ ಡಿ. 14ರ ಬೆಳಿಗ್ಗೆ 5 ರಿಂದ ಡಿ. 15 ರ ಬೆಳಿಗ್ಗೆ 5 ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಯಾವುದೇ ಬಹಿರಂಗ ಸಾರ್ವಜನಿಕ ಸಭೆ ಸಮಾರಂಭ, ಜಾತ್ರೆ, ಮೆರವಣಿಗೆ ಇತ್ಯಾದಿಗಳನ್ನು ನಡೆಸುವುದನ್ನು ನಿರ್ಬಂಧಿಸಿದೆ. ಧ್ವನಿವರ್ಧಕ, ಮೆಗಾಫೋನ್ ಮುಂತಾದವುಗಳನ್ನು ಅಳವಡಿಸುವುದನ್ನು ನಿರ್ಬಂಧಿಸಿದೆ.

ಮತ ಎಣಿಕೆ ಸಿಬ್ಬಂದಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಆರ್‌.ಗಿರೀಶ್‌ ಮಾತನಾಡಿ, ಕ್ರಮಬದ್ದವಾಗಿ ಎಣಿಕಾ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಸಹಾಯಕ ಚುನಾವಣಾಧಿಕಾರಿ ಕವಿತಾ ರಾಜಾರಾಂ ಅವರು ಮತ ಎಣಿಕಾ ಕ್ರಮಗಳನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT