ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಬಂದ್‌ಗೆ ವ್ಯಾಪಕ ವಿರೋಧ

ಆಮೆ ನಡಿಗೆಯಾದ ಹಾಸನ– ಮಾರನಹಳ್ಳಿ ಚತುಷ್ಪಥ ಕಾಮಗಾರಿ: ಆಕ್ರೋಶ
Last Updated 21 ಜನವರಿ 2022, 4:54 IST
ಅಕ್ಷರ ಗಾತ್ರ

ಸಕಲೇಶಪುರ: ಚತುಷ್ಪಥ ಕಾಮಗಾರಿಗಾಗಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಕಲೇಶಪುರದಿಂದ–ಮಾರನಹಳ್ಳಿವರೆಗೆ 10 ಕಿ.ಮೀ. 6 ತಿಂಗಳು ಬಂದ್‌ ಮಾಡಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಹಾಸನ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ಇದಕ್ಕೆ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಹಾಸನದಿಂದ– ಬಿ.ಸಿ. ರೋಡ್‌ ನಡುವಿನ ಚತುಷ್ಪಥ ಕಾಮಗಾರಿ 2017ರಲ್ಲಿ ಶುರುವಾಗಿದ್ದು, 2019ರ ಮಾರ್ಚ್‌ ಅಂತ್ಯಕ್ಕೆ ಪೂರ್ಣಗೊಂಡು ಉದ್ಘಾಟನೆಗೊಳ್ಳಬೇಕಿತ್ತು. ಗುತ್ತಿಗೆ ಪಡೆದಿದ್ದ ಐಸೋಲೆಕ್ಸ್‌ ಕಂಪನಿ ಬ್ಯಾಂಕ್‌ ದಿವಾಳಿ ಹೊಂದಿ, ನಂತರ ಉಪ ಗುತ್ತಿಗೆ, ನೇರ ಗುತ್ತಿಗೆ ಪಡೆದಿದ ರಾಜ್‌ಕಮಲ್‌ ಬಿಲ್ಡರ್ಸ್‌ನಿಂದಲೂ ಸಹ ಕಾಮಗಾರಿ ನನೆಗುದಿಗೆ ಬಿದ್ದಿದೆ. ಪರಿಣಾಮ ಹಾಸನದಿಂದ ಸಕಲೇಶಪುರ 38 ಕಿ.ಮೀ. ರಸ್ತೆ ಕಾಮಗಾರಿ, 5 ವರ್ಷದಿಂದ ಶೇ. 30 ರಷ್ಟು ಆಗಿಲ್ಲ. ಹೇಮಾವತಿ ನದಿಗೆ ಸೇತುವೆ ನಿರ್ಮಾಣ ಸಹ ಶೇ 5 ಆಗಿಲ್ಲ.

ಇನ್ನು ಆನೇಮಹಲ್‌ನಿಂದ ಮಾರನಹಳ್ಳಿವರೆಗೆ 10 ಕಿ.ಮೀ. ಈ ಪ್ರದೇಶ ಸಂಪೂರ್ಣ ಪಶ್ಚಿಮಘಟ್ಟದ ಗುಡ್ಡಗಾಡು ಪ್ರದೇಶದಲ್ಲಿ ಹಾದು ಹೋಗುತ್ತದೆ. ಒಂದು ಕಿ.ಮೀ. ಗೆ ಕನಿಷ್ಟ 30 ರಿಂದ 35 ಕಡಿದಾದ ತಿರುವುಗಳು ಇವೆ. ನೂರಾರು ಅಡಿ ಎತ್ತರ ಅಷ್ಟೇ ಆಳವಾದ ಕಂದಕಗಳು ಇವೆ. ಒಂದೇ ಒಂದು ಕಡೆ ತಡೆಗೋಡೆ ನಿರ್ಮಾಣ ಕಾಮಗಾರಿಯೇ ಆಗಿಲ್ಲ.

2017–18ರಲ್ಲಿ ಗುಡ್ಡಗಳನ್ನು ಅಗೆದು ರಸ್ತೆ ವಿಸ್ತರಣೆ ಮಾಡಿ ತಡೆಗೋಡೆಗಳನ್ನು ನಿರ್ಮಾಣ ಮಾಡದೆ ಇದ್ದ ಪರಿಣಾಮ 2019ರಿಂದಲೂ ಪ್ರತಿ ಮಳೆಗಾಲದಲ್ಲಿ ದೋಣಿಗಾಲ್‌, ಎತ್ತಿನಹಳ್ಳ, ದೊಡ್ಡತಪ್ಪಲೆ ಈ ಭಾಗದಲ್ಲಿ ರಸ್ತೆಗಳ ಮೇಲೆ ಗುಡ್ಡಗಳೇ ಕುಸಿದು, ರಸ್ತೆಗಳು ಸಹ ಕುಸಿದು ತಿಂಗಳುಗಟ್ಟಲೆ ಶಿರಾಡಿ ಘಾಟ್‌ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಬಂದ್‌ ಆಗಿ ಆರ್ಥಿಕ ನಷ್ಟ, ಪ್ರಯಾಣಿಕರು, ಸರಕು ಸಾಗಣೆಗೆ ಗಂಭೀರ ಸಮಸ್ಯೆ ಎದುರಿಸಬೇಕಾಯಿತು.

ರಸ್ತೆ ವಿಸ್ತರಣೆ, ತಡೆಗೋಡೆ ಕಾಮಗಾರಿಗಳನ್ನು ನಿರ್ವಹಣೆ ಮಾಡದೆ, ಕರಾವಳಿ ಹಾಗೂ ರಾಜಧಾನಿ ನಡುವಿನ ಜನರ ಜೀವನಾಡಿ ರಾಷ್ಟ್ರೀಯ ಹೆದ್ದಾರಿ ಏಕಾ ಏಕಿ ಬಂದ್‌ ಮಾಡುವುದು ಅವೈಜ್ಞಾನಿಕ ಹಾಗೂ ಸಾರ್ವಜನಿಕರ ಬದುಕಿನ ಮೇಲೆ ಬರೆ ಎಳೆದಂತೆ ಆಗುತ್ತದೆ. ಚಾರ್ಮುಡಿ ಘಾಟ್‌ ಹಾಗೂ ಸಂಪಾಜೆ ಘಾಟ್‌ ಈ ಎರಡೂ ಮಾರ್ಗಗಳು ತೀರಾ ಕಿರಿದಾದ ಹಾಗೂ ಕಡಿದಾಡ ತಿರುವುಗಳನ್ನು ಹೊಂದಿರುವುದಲ್ಲದೆ, ಸುತ್ತಿಬಳಸಿ ಹೆಚ್ಚು ಕಿ.ಮೀ. ಪ್ರಯಾಣ ಮಾಡಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT