ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಆಸ್ಪತ್ರೆಯಲ್ಲಿ ಕಾಯಂ ವೈದ್ಯರಿಲ್ಲ

ವಾಣಿಜ್ಯ ಕೇಂದ್ರ ಬಾಣಾವರ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ದುಸ್ಥಿತಿ
Last Updated 20 ಜುಲೈ 2016, 9:42 IST
ಅಕ್ಷರ ಗಾತ್ರ

ಬಾಣಾವರ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರು ಇಲ್ಲದಿರುವುದರಿಂದ ಹೋಬಳಿ ಯ ಜನರು ಪರಿತಪಿಸುವಂತಾಗಿದೆ. ಜಿಲ್ಲೆಯ ಅತ್ಯಂತ ದೊಡ್ಡ ಹೋಬಳಿ ಕೇಂದ್ರವಾದ ಬಾಣಾವರ ಪ್ರಾಥಮಿಕ ಆರೋಗ್ಯ ಕೇಂದ್ರ ಸುತ್ತಮುತ್ತಲಿನ ಎಲ್ಲ ಗ್ರಾಮಗಳ ಜನರ ಜೀವನಾಡಿಯಂತಿದೆ.

ಈ ಆಸ್ಪತ್ರೆಯಲ್ಲಿ ಫಾರ್ಮಸಿಸ್ಟ್–1, ಹಿರಿಯ ಪುರುಷ ಆರೋಗ್ಯ ಸಹಾಯಕ–1, ಮಹಿಳಾ ಆರೋಗ್ಯ ಸಹಾಯಕರು–1, ಕಿರಿಯ ಪುರುಷ ಆರೋಗ್ಯ ಸಹಾಯಕರು–4, ಮಹಿಳಾ ಸಹಾಯಕರು–8, ಸ್ಟಾಫ್‌ ನರ್ಸ್‌–1, ಗ್ರೂಪ್‌ ‘ಡಿ’ ನೌಕರರು–4 ಹಾಗೂ  ಪ್ರಯೋಗಾಲಯ ಸಹಾಯಕರು ಇದ್ದಾರೆ.

ಇಲ್ಲಿಗೆ ನಿತ್ಯ 250–300 ರೋಗಿಗಳು ಬರುತ್ತಾರೆ. ಈ ಆಸ್ಪತ್ರೆಯ ವ್ಯಾಪ್ತಿಗೆ 40,000 ಜನಸಂಖ್ಯೆ ಹಾಗೂ 64 ಹಳ್ಳಿಗಳು ಹಾಗೂ 8,465 ಕುಂಟುಂಬಗಳು ಒಳಪಡುತ್ತವೆ.ಆದರೆ, ಒಂದುವರೆ ತಿಂಗಳಿಂದ ಇಲ್ಲಿ ಖಾಯಂ ವೈದ್ಯರಿಲ್ಲದಿರುವುದರಿಂದ ರಂಗ ನಾಯಕನ ಕೊಪ್ಪಲು ಆರೋಗ್ಯ ಕೇಂದ್ರದಿಂದ ವೈದ್ಯರು ದಿನ ಬಿಟ್ಟು ದಿನ ವಾರದಲ್ಲಿ 3 ದಿನ ಬರುತ್ತಾರೆ. ಉಳಿದ 3 ದಿನಗಳಲ್ಲಿ ವೈದ್ಯರಿಲ್ಲದೆ ರೋಗಿಗಳು ಪರಿತಪಿಸುವಂತಾಗಿದೆ.

ಇನ್ನು ಇಲ್ಲಿ 5 ವರ್ಷಗಳಿಂದ ಮಹಿಳಾ ವೈದ್ಯರಿಲ್ಲದಿರುವುದು ಗ್ರಾಮಾಂತರ ಪ್ರದೇಶದ ಜನರಿಗೆ ಬಹಳ ತೊಂದರೆಯಾಗುತ್ತದೆ. ಮಹಿಳೆಯರು ಸಣ್ಣ ಪುಟ್ಟ ಸಮಸ್ಯೆಗೂ ತಾಲ್ಲೂಕು ಕೇಂದ್ರಗಳಿಗೆ ಭೇಟಿ ನೀಡಬೇಕಾಗಿದೆ.

ಅರಸೀಕೆರೆಯಿಂದ 15 ಕಿ.ಮೀ, ಹಾಸನದಿಂದ 60 ಕಿ.ಮೀ, ಕಡೂರಿನಿಂದ 25 ಕಿ.ಮೀ ದೂರದಲ್ಲಿರುವ ಬಾಣಾವರ ಹೋಬಳಿ ಸೇರಿದಂತೆ ಅಕ್ಕಪಕ್ಕದ ತಾಲ್ಲೂಕುಗಳಿಂದ ಸಾರ್ವಜನಿಕರು ತಪಾಸಣೆಗಾಗಿ ಈ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಮಹಿಳಾ ವೈದ್ಯರನ್ನು ನೇಮಿಸಲು ಕ್ರಮ ಕೈಗೊಳ್ಳಬೇಕು ಎಂದು ಈಗಾಗಲೇ ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದ್ದು, ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎನ್ನುವ ಆರೋಪ ಸಾರ್ವಜನಿಕರದ್ದು.

ವಾಣಿಜ್ಯ ಕೇಂದ್ರ: ವಾಣಿಜ್ಯ ಕೇಂದ್ರವಾಗಿರುವ ಬಾಣಾವರ ಪಟ್ಟಣ ದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವುದ ರಿಂದ ರಾಜ್ಯದ ಎಲ್ಲ ಪ್ರಮುಖ ನಗರಗಳ ಸಂಪರ್ಕ ಹೊಂದಿದೆ. 4 ಬ್ಯಾಂಕ್‌ಗಳು, ಅಂಚೆ ಕಚೇರಿ, ಪೊಲೀಸ್‌ಠಾಣೆ, ಉಪ ನೋಂದಣಿ ಕಚೇರಿ, ಪ್ರಥಮದರ್ಜೆ ಕಾಲೇಜು, ಪದವಿಪೂರ್ವ ಕಾಲೇಜು, 4 ಪ್ರೌಢಶಾಲೆಗಳು, ಕೆಇಬಿ ಕಚೇರಿ, ಕಂದಾಯ ನಿರೀಕ್ಷಕರ ಕಚೇರಿ, ಮೇಲ್ದರ್ಜೆಗೇರಿದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ರೈತ ಸಂಪರ್ಕ ಕೇಂದ್ರ, ನಾಡ ಕಚೇರಿ, ಪಟ್ಟಣಕ್ಕೆ ಹೊಂದಿ ಕೊಂಡತಿರುವ ರೈಲ್ವೆ ನಿಲ್ದಾಣ ಸೇರಿದಂತೆ ಎಲ್ಲ ನಾಗರಿಕ ಸೌಲಭ್ಯಗಳಿರುವುದರಿಂದ ಇದೊಂದು ಅತಿ ದೊಡ್ಡ ವಾಣಿಜ್ಯ ಕೇಂದ್ರವಾಗಿದೆ.

ಹಾಗಾಗಿ, ನಿತ್ಯ ಸುತ್ತಮುತ್ತಲಿನ ಹಲವಾರು ಪ್ರದೇಶದಿಂದ ಜನರು ಇಲ್ಲಿಗೆ ಬರುತ್ತಿರುತ್ತಾರೆ. ಅವರ ಕಾಳಜಿಗಾಗಿ, ಗ್ರಾಮೀಣ ಜನರ ಆರೋಗ್ಯಕ್ಕಾಗಿ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರನ್ನು ನೇಮಿಸಬೇಕು ಎಂಬುಂದು ಸಾರ್ವಜನಿಕರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT