ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಟ್ಟೆ ವ್ಯಾಪಾರಿಯ ಬ್ಯಾಡ್ಮಿಂಟನ್‌ ನಂಟು

ಹಳ್ಳಿ ಹೈದ ಯುವ ಕ್ರೀಡಾಪಟುಗಳಿಗೆ ಪ್ರೇರಣೆ
Last Updated 21 ಜುಲೈ 2016, 10:20 IST
ಅಕ್ಷರ ಗಾತ್ರ

ಬಾಣಾವರ:  ಸತತ ಪರಿಶ್ರಮ ಹಾಗೂ ಛಲದಿಂದ ಗ್ರಾಮೀಣ ಭಾಗದ ಯುವಕರು ಸಹ ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಬಲ್ಲರು ಎಂಬುದಕ್ಕೆ  ಬ್ಯಾಡ್ಮಿಂಟನ್‌ ಆಟಗಾರ ರಾಕೇಶ್‌ ಅವರೇ ಸಾಕ್ಷಿ.

ಪಟ್ಟಣದ ಕ್ರೀಡಾಪಟು ರಾಕೇಶ್ ಅವರು 35 ವರ್ಷಕ್ಕೂ ಮೇಲ್ಪಟ್ಟವರ ವಿಭಾಗದ ಬ್ಯಾಡ್ಮಿಂಟನ್ ಆಟಗಾರರಾಗಿ ಯುವ ಕ್ರೀಡಾ ಪಟುಗಳಿಗೆ ಪ್ರೇರಣೆಯಾಗಿದ್ದಾರೆ. ಹಾಸನ, ಬೆಂಗಳೂರು  ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದ ಕ್ರೀಡಾಕೂಟಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಎರಡು ದಶಕದಿಂದ ಕ್ರೀಡಾಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ರಾಕೇಶ್ ಆರಂಭದಲ್ಲಿ ಉತ್ತಮ ಕ್ರಿಕೆಟ್‌ಪಟು ಆಗಿದ್ದರು. ಬರಬರುತ್ತ ಅವರ ಆಸಕ್ತಿ ಬ್ಯಾಡ್ಮಿಂಟನ್ ಕಡೆಗೆ ವಾಲಿತು. ಅಷ್ಟಾಗಿದ್ದೇ ತಡ; ರಾಕೇಶ್‌ ಮತ್ತೆ ತಿರುಗಿ ನೋಡಲೇ ಇಲ್ಲ. ಪಟ್ಟಣದ ಹನುಮಾನ್ ಕ್ರೀಡಾ ಕ್ಲಬ್ ಆವರಣದಲ್ಲಿ ಆರಂಭಗೊಂಡ ಬ್ಯಾಡ್ಮಿಂಟನ್‌ ನಂಟು ಇಂದು ಅವರನ್ನು ಸಾಧಕರ ಸಾಲಿನಲ್ಲಿ ನಿಲ್ಲಿಸಿದೆ. 35 ವರ್ಷಕ್ಕೂ ಮೇಲ್ಪಟ್ಟ ಮಾಸ್ಟರ್ ಬ್ಯಾಡ್ಮಿಂಟನ್‌ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಡಬಲ್ಸ್ ವಿಭಾಗದಲ್ಲಿ ಭಾಗವಹಿಸಿ ಅವರು ಯಶಸ್ಸು ಕಂಡಿದ್ದಾರೆ.

ಬೆಂಗಳೂರಿನ ದಾಸರಹಳ್ಳಿಯಲ್ಲಿ ನಡೆದ ರಾಜ್ಯಮಟ್ಟದ ಷಟಲ್ ಲೀಗ್ ಟೂರ್ನಿಯಲ್ಲಿ ದ್ವಿತೀಯ ಸ್ಥಾನ, ವಿಜಯ ನಗರದಲ್ಲಿ ನಡೆದ ವಾಜಪೇಯಿ ಕಪ್, ಹಾಸನದ ಸಕಲೇಶಪುರದಲ್ಲಿ ನಡೆದ ರಾಜ್ಯಮಟ್ಟದ ಸೀನಿಯರ್ ಬ್ಯಾಡ್ಮಿಂಟನ್‌  ಟೂರ್ನಿಯಲ್ಲಿ ಪ್ರಶಸ್ತಿ, ಬೆಂಗಳೂರಿನ ಸಿಟಿ ಕ್ಲಬ್ ವತಿಯಿಂದ ನಡೆದ ವಿಶ್ವೇಶ್ವರಯ್ಯ ಸ್ಮರಣಾರ್ಥ ಟೂರ್ನಿಯಲ್ಲಿ ಪ್ರಶಸ್ತಿ, ಹಾಸನ್ ಕಪ್, ನಾಗಮಂಗಲ ಕಪ್ ಅಲ್ಲದೇ, ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಸೀನಿಯರ್ ಬ್ಯಾಡ್ಮಿಂಟನ್‌ ಪ್ರಶಸ್ತಿಯನ್ನೂ ಅವರು ಬಾಚಿಕೊಂಡಿದ್ದಾರೆ. ಇದರೊಂದಿಗೆ 40ಕ್ಕೂ ಹೆಚ್ಚು ಟೂರ್ನಿಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಹೆಮ್ಮೆ ಈ ಕ್ರೀಡಾಪಟುವಿನದು.

ವೃತ್ತಿಯಲ್ಲಿ ಬಟ್ಟೆ ವ್ಯಾಪರಿಯಾಗಿದ್ದರೂ ಬಿಡುವಿನ ವೇಳೆಯಲ್ಲಿ ಅಭ್ಯಾಸ ನಡೆಸಿ ಆಗಾಧ ಕ್ರೀಡಾಪ್ರೇಮ ತೋರುವ ರಾಕೇಶ್‌ ರಾಜ್ಯದ ಭರವಸೆಯ ಆಟಗಾರ. ಕ್ರೀಡೆಯ ಬಗ್ಗೆ ಸಾಕಷ್ಟು ಜ್ಞಾನ ಹೊಂದಿರುವುದೂ ಅವರ ಯಶಸ್ಸಿಗೆ ಮೂಲ ಕಾರಣ ಎನ್ನುತ್ತಾರೆ ರಾಕೇಶ್‌.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT