ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯ; 15 ಕಂಪ್ಯೂಟರ್‌ ಲ್ಯಾಬ್‌ಗಳಿಗೆ ಗ್ರಹಣ

3 ವರ್ಷ ಕಳೆದರೂ ಕಾರ್ಯಾರಂಭಗೊಳ್ಳದ ಲ್ಯಾಬ್‌: ಕಳಪೆ ಸಾಮಗ್ರಿ ಬಳಕೆ– ಆರೋಪ
Last Updated 9 ಜನವರಿ 2022, 3:51 IST
ಅಕ್ಷರ ಗಾತ್ರ

ಹಾವೇರಿ: ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್‌ ನಂತರದ ವಸತಿ ನಿಲಯಗಳಲ್ಲಿ ನೂತನವಾಗಿ ನಿರ್ಮಿಸಿರುವ ‘ಅಭ್ಯಾಸ ಮತ್ತು ಗಣಕಯಂತ್ರದ ಕೊಠಡಿ’ಗಳು ಮೂರು ವರ್ಷ ಕಳೆದರೂ ಕಾರ್ಯಾರಂಭಗೊಂಡಿಲ್ಲ. ಇದರಿಂದ ನೂರಾರು ಬಡ ವಿದ್ಯಾರ್ಥಿಗಳು ‘ಕಂಪ್ಯೂಟರ್‌ ಸಾಕ್ಷರತೆ’ಯಿಂದ ವಂಚಿತರಾಗಿದ್ದಾರೆ.

ಹಾವೇರಿ–3, ಶಿಗ್ಗಾವಿ–1, ಸವಣೂರು–1, ಹಾನಗಲ್‌–2, ಹಿರೇಕೆರೂರು–3, ರಾಣೆಬೆನ್ನೂರು–3 ಹಾಗೂ ಬ್ಯಾಡಗಿ ತಾಲ್ಲೂಕಿನಲ್ಲಿ 2 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 15 ಕಂಪ್ಯೂಟರ್‌ ಲ್ಯಾಬ್‌ ಹಾಗೂ ಸ್ಟಡಿ ರೂಮ್‌ ನಿರ್ಮಿಸಲಾಗಿದೆ.ತಲಾ ಲ್ಯಾಬ್‌ಗೆ ₹ 80 ಲಕ್ಷ ವೆಚ್ಚದಂತೆ ಒಟ್ಟು ₹12 ಕೋಟಿ ವಿನಿಯೋಗಿಸಲಾಗಿದೆ.

ರಾಜ್ಯ ಸರ್ಕಾರದ ಈ ಯೋಜನೆಗೆ2016–17ರಲ್ಲಿ ಮಂಜೂರಾತಿ ದೊರೆಯಿತು. ವಸತಿ ನಿಲಯಗಳ ಆವರಣದಲ್ಲಿ ಎರಡು ಅಂತಸ್ತಿನ ನೂತನ ಕಟ್ಟಡವನ್ನು ನಿರ್ಮಿಸಿ, ನೆಲ ಅಂತಸ್ತಿನಲ್ಲಿ ‘ಸ್ಟಡಿ ರೂಮ್‌’ ಮತ್ತು ಒಂದನೇ ಅಂತಸ್ತಿನಲ್ಲಿ ‘ಕಂಪ್ಯೂಟರ್‌ ಲ್ಯಾಬ್‌’ ಅಳವಡಿಸಲಾಗಿದೆ. ಪ್ರತಿ ಲ್ಯಾಬ್‌ನಲ್ಲಿ 20 ಕಂಪ್ಯೂಟರ್‌ ಮತ್ತು ಪೀಠೋಪಕರಣಗಳಿದ್ದು, ಹವಾನಿಯಂತ್ರಿತ ಸೌಲಭ್ಯ ಕಲ್ಪಿಸಲಾಗಿದೆ.

2019ರಲ್ಲೇ ಹಸ್ತಾಂತರ:ಕಟ್ಟಡ ನಿರ್ಮಾಣದ ಹೊಣೆ ಹೊತ್ತಿದ್ದ ಹಾವೇರಿ ಜಿಲ್ಲಾ ನಿರ್ಮಿತಿ ಕೇಂದ್ರವು 2019ರಲ್ಲೇ ಸಮಾಜ ಕಲ್ಯಾಣ ಇಲಾಖೆಗೆ ಕಟ್ಟಡಗಳನ್ನು ಹಸ್ತಾಂತರಿಸಿದೆ. ಆದರೆ, ಮೂರು ವರ್ಷ ಕಳೆದರೂ ವಸತಿ ನಿಲಯಗಳಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಒಬಿಸಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ಬಳಸುವ ಭಾಗ್ಯ ದೊರೆತಿಲ್ಲ.

ವಿದ್ಯುತ್‌ ಸಂಪರ್ಕವಿಲ್ಲ:15 ಕಂಪ್ಯೂಟರ್‌ ಲ್ಯಾಬ್‌ಗಳಲ್ಲಿ ಐದು ಲ್ಯಾಬ್‌ಗಳಿಗೆ ಸಮರ್ಪಕವಾದ ವಿದ್ಯುತ್‌ ಸಂಪರ್ಕವಿಲ್ಲ. ಸರಿಯಾದ ದಾಖಲೆಗಳನ್ನು ಸಲ್ಲಿಸದ ಕಾರಣ ಕೆಇಬಿಯಿಂದ ಅನುಮತಿ ದೊರೆಯದೆ, ಮೀಟರ್‌ ಅಳವಡಿಸುವ ಕಾರ್ಯ ನನೆಗುದಿಗೆ ಬಿದ್ದಿದೆ. ಕೆಲವು ಕಡೆ ವೈರಿಂಗ್‌ ಸಮಸ್ಯೆಯಾಗಿ ಕಂಪ್ಯೂಟರ್‌ ಬಳಸಲು ಸಾಧ್ಯವಾಗುತ್ತಿಲ್ಲ ಎಂದು ಹಾಸ್ಟೆಲ್‌ ವಾರ್ಡನ್‌ವೊಬ್ಬರು ಸಮಸ್ಯೆ ತೋಡಿಕೊಂಡರು.

‘ಹಾಸ್ಟೆಲ್‌ಗಳಲ್ಲಿರುವ ಅವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳು ಪ್ರಶ್ನಿಸಿದರೆ, ಧ್ವನಿ ಅಡಗಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಅಕ್ರಮಗಳಿಗೆ ಸಾಕ್ಷಿಯಾಗಬೇಕಿದ್ದ ಸಿಸಿಟಿವಿ ಕ್ಯಾಮೆರಾಗಳು ಕೂಡ ನೌಕರರ ಕೈಚಳಕದಿಂದ ಆಗಾಗ ಕಣ್ಮುಚ್ಚಿರುತ್ತವೆ. ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ, ಸಮಸ್ಯೆಗಳು ಬೆಳಕಿಗೆ ಬಾರದಂತೆ ನೋಡಿಕೊಳ್ಳುವಲ್ಲಿ ಅಧಿಕಾರಿಗಳು
ಸಿದ್ಧಹಸ್ತರಾಗಿದ್ದಾರೆ’ ಎಂದು ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ ದೂರಿದರು.

‘ಸೋರುತ್ತಿರುವ ಕಟ್ಟಡ, ಕಳಪೆ ಉಪಕರಣ’

‘ಲ್ಯಾಬ್‌ಗೆ ಕಡಿಮೆ ಗುಣಮಟ್ಟದ ಕಂಪ್ಯೂಟರ್‌ ಹಾಗೂ ಕಳಪೆ ಸಾಮಗ್ರಿಗಳನ್ನು ಬಳಸಲಾಗಿದೆ. ಬಳಕೆಗೂ ಮುನ್ನವೇ ಕೆಲವು ಹಾಳಾಗಿದ್ದು, ರಿಪೇರಿಗೆ ಬಂದಿವೆ. ಹೊಸದಾಗಿ ಕಟ್ಟಿರುವ ಕೆಲವು ಕಟ್ಟಡಗಳು ಉದ್ಘಾಟನೆಗೂ ಮುನ್ನವೇ ಸೋರುತ್ತಿವೆ. ಕೆಲವು ಕುರ್ಚಿ ಮತ್ತು ಟೇಬಲ್‌ಗಳು ಮುರಿದು ಹೋಗಿವೆ. ನೆಲಕ್ಕೆ ಹಾಸಿರುವ ಪ್ಲೈವುಡ್‌ ಶೀಟ್‌ ಅಲ್ಲಲ್ಲಿ ಕಿತ್ತು ಹೋಗಿದೆ. ಹೀಗಾಗಿ ವಿದ್ಯಾರ್ಥಿಗಳ ಬಳಕೆಗೆ ಲ್ಯಾಬ್‌ ಯೋಗ್ಯವಾಗಿಲ್ಲ’ ಎಂದು ಹಾಸ್ಟೆಲ್‌ ವಿದ್ಯಾರ್ಥಿಗಳು ದೂರಿದರು.

15 ಲ್ಯಾಬ್‌ಗಳಲ್ಲಿರುವ ಕಂಪ್ಯೂಟರ್‌ಗಳಿಗೆ ಇಂಟರ್‌ನೆಟ್‌ ಸಂಪರ್ಕ ಕಲ್ಪಿಸಿಲ್ಲ. ಲ್ಯಾಬ್‌ನಲ್ಲಿದ್ದ ಕೆಲವು ಸಿಪಿಯುಗಳು, ಕಂಪ‍್ಯೂಟರ್‌ ಭಾಗಗಳು ನಾಪತ್ತೆಯಾಗಿವೆ. ಪ್ರೊಜೆಕ್ಟರ್ಸ್‌ ಮತ್ತು ಹವಾನಿಯಂತ್ರಿತ ಉಪಕರಣ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹಾಸ್ಟೆಲ್‌ ನೌಕರರೊಬ್ಬರು ಸಮಸ್ಯೆ ತೋಡಿಕೊಂಡರು.

*

ಈ ಯೋಜನೆಯಲ್ಲಿ ಭ್ರಷ್ಟಾಚಾರದ ವಾಸನೆ ಬರುತ್ತಿದೆ. ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು.
– ಬಸವರಾಜ ಭೋವಿ, ಜಿಲ್ಲಾ ಸಹ ಕಾರ್ಯದರ್ಶಿ, ಎಸ್‌ಎಫ್‌ಐ

*

ವಿದ್ಯುತ್‌ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಸೋರುತ್ತಿರುವ ಕಟ್ಟಡ ದುರಸ್ತಿಗೊಳಿಸಿ, ವಿದ್ಯಾರ್ಥಿಗಳ ಬಳಕೆಗೆ ಅವಕಾಶ ಕಲ್ಪಿಸಲಾಗುವುದು.
– ಜಗದೀಶ ಹೆಬ್ಬಳ್ಳಿ, ಉಪನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT