ಬುಧವಾರ, ಅಕ್ಟೋಬರ್ 21, 2020
21 °C

ರಾಣೆಬೆನ್ನೂರು: 1,695 ಹೆಕ್ಟೇರ್‌ ಈರುಳ್ಳಿ ಬೆಳೆ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಣೆಬೆನ್ನೂರು: ತಾಲ್ಲೂಕಿನ ಮೆಡ್ಲೇರಿ, ರಾಣೆಬೆನ್ನೂರು ಮತ್ತು ಕುಪ್ಪೇಲೂರ ಈ ಮೂರು ಹೋಬಳಿಗಳಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕಟಾವಿಗೆ ಬಂದ ಭತ್ತ, ಮೆಕ್ಕೆಜೋಳ ಮತ್ತು ಈರುಳ್ಳಿ ಬೆಳೆಗಳು ಸಂಪೂರ್ಣ ಹಾನಿಯಾಗಿವೆ.

ತೇವಾಂಶ ಹೆಚ್ಚಾಗಿ ಮೆಕ್ಕೆಜೋಳಕ್ಕೆ ಲದ್ದಿ ಹುಳ, ಭತ್ತಕ್ಕೆ ಗಂಧಿಹುಳ ಕಾಟ ಹೆಚ್ಚಾಗಿದ್ದರಿಂದ ರೈತರು ಸಾಲ ಸೂಲ ಮಾಡಿ ಕ್ರಿಮಿನಾಶಕ ತಂದು ಸಿಂಪಡಿಸಿದ್ದರು. ಅದು ಕೂಡ ಮಳೆಗೆ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಕೊಳೆತ ಈರುಳ್ಳಿ:

ತಾಲ್ಲೂಕಿನ ಬೆನಕನಕೊಂಡ ಗ್ರಾಮದ ಶಿವಕುಮಾರ ಬಲಿಗೇರ ಮತ್ತು ಎಸ್‌.ಎಂ. ಮಲಗೌಡ್ರ ಎಂಬುವರಿಗೆ ಸೇರಿದ ಈರುಳ್ಳಿ ಕಿತ್ತು ಗೂಡು ಹಾಕಿದ್ದು ಕೊಳೆತು ನಾರುತ್ತಿದೆ. ಅಲ್ಲದೇ ಹಸಿ ಮೆಣಸಿನ ಗಿಡಗಳು ತೇವಾಂಶ ಹೆಚ್ಚಾಗಿ ರೋಗಕ್ಕೀಡಾಗಿವೆ. ಹರನಗಿರಿ ಗ್ರಾಮದಲ್ಲಿ ಸೋಮರಡ್ಡಿ ರಾಯರಡ್ಡಿ, ಮಂಜಪ್ಪ ಕುಪ್ಪೇಲೂರ, ನಾಗರಾಜ ಐರಣಿ ಅವರು ಸೇರಿದಂತೆ 40 ಎಕರೆಗೂ ಹೆಚ್ಚು ಭತ್ತದ ಬೆಳೆ ಹಾನಿಗೊಂಡಿದೆ.

‘ಭತ್ತ ಬೆಳೆದ ಪ್ರತಿ ರೈತರು ಬೆಳೆವಿಮೆ ಮಾಡಿಸಿದ್ದರಿಂದ ಹಾನಿಗೊಂಡ ಬಗ್ಗೆ ಸಮೀಕ್ಷೆ ಮಾಡಿ ವಿಮಾ ಕಂಪನಿಗೆ ವರದಿ ಸಲ್ಲಿಸಲಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಎಚ್‌.ಬಿ. ಗೌಡಪ್ಪಳವರ ತಿಳಿಸಿದ್ದಾರೆ.

ಒಟ್ಟಾರೆ ತಾಲ್ಲೂಕಿನಾದ್ಯಂತ ಹೆಚ್ಚಿನ ಮಳೆಗೆ ತೇವಾಂಶದಿಂದ 1,695 ಹೆಕ್ಟೇರ್‌ ಈರುಳ್ಳಿ ಬೆಳೆ ನಾಶವಾಗಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮೀ ತಿಳಿಸಿದ್ದಾರೆ.

16 ಮನೆಗಳಿಗೆ ಹಾನಿ:

‘ತಾಲ್ಲೂಕಿನಾದ್ಯಂತ 16 ಮನೆಗಳು ಮತ್ತು ಪಟ್ಟಣದಲ್ಲಿ 5 ಮನೆಗಳು ಭಾಗಶಃ ಹಾನಿಗೊಂಡಿವೆ. ಬೆಳೆ ಹಾನಿ ಬಗ್ಗೆ ಸಮೀಕ್ಷೆ ಮಾಡಿ ವರದಿ ಸಲ್ಲಿಸಲು ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಲಾಗಿದೆ. ಕುಮಧ್ವತಿ ಮತ್ತು ತುಂಗಭದ್ರಾ ನದಿ ನೀರಿನ ಪ್ರವಾಹ ಹೆಚ್ಚಾಗುವ ಸಂಭವಿದ್ದು, ನದಿ ತೀರದ ಪ್ರದೇಶದ ಜನರಿಗೆ ಎತ್ತರದ ಪ್ರದೇಶಕ್ಕೆ ತೆರಳಲು ಸೂಚಿಸಿದೆ’ ಎಂದು ತಹಶೀಲ್ದಾರ್‌ ಬಸನಗೌಡ ಕೋಟೂರ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು