ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ಯುವನಿಧಿ ಯೋಜನೆ: 67,951 ಅಭ್ಯರ್ಥಿಗಳು ನೋಂದಣಿ

ಬೆಳಗಾವಿ ಜಿಲ್ಲೆಯಿಂದ ಹೆಚ್ಚು ಅರ್ಜಿ ಸಲ್ಲಿಕೆ
Published 12 ಜನವರಿ 2024, 14:15 IST
Last Updated 12 ಜನವರಿ 2024, 14:15 IST
ಅಕ್ಷರ ಗಾತ್ರ

ಹಾವೇರಿ: ಕಾಂಗ್ರೆಸ್‌ ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯೋಜನೆ ‘ಯುವನಿಧಿ’ಗೆ ರಾಜ್ಯದಾದ್ಯಂತ 67,951 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು 7,453 ಅಭ್ಯರ್ಥಿಗಳು ಆನ್‌ಲೈನ್‌ ಅರ್ಜಿ ಸಲ್ಲಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಅತಿ ಕಡಿಮೆ 560 ಅಭ್ಯರ್ಥಿಗಳು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 1,736 ಅಭ್ಯರ್ಥಿಗಳ ನೋಂದಣಿಯಾಗಿದೆ.

ಏನಿದು ಯೋಜನೆ: 2022-23ನೇ ಸಾಲಿನಲ್ಲಿ ಪದವಿ, ಡಿಪ್ಲೊಮಾ ತೇರ್ಗಡೆ ಆಗಿ 6 ತಿಂಗಳಿನಿಂದ ಉದ್ಯೋಗ ಸಿಗದೇ ರಾಜ್ಯದಲ್ಲಿ ವಾಸ ಇರುವವರಿಗೆ ಈ ಯುವನಿಧಿ ಯೋಜನೆ ಅನ್ವಯವಾಗಲಿದೆ. ಪದವೀಧರ ನಿರುದ್ಯೋಗಿಗಳಿಗೆ ತಿಂಗಳಿಗೆ ₹3 ಸಾವಿರ ಮತ್ತು ಡಿಪ್ಲೊಮಾ ತೇರ್ಗಡೆಯಾದ ನಿರುದ್ಯೋಗಿಗಳಿಗೆ ತಿಂಗಳಿಗೆ ₹1,500 ಸಿಗಲಿದೆ. ನಿರುದ್ಯೋಗ ಭತ್ಯೆ ಎರಡು ವರ್ಷಗಳ ಅವಧಿಗೆ ಮಾತ್ರ ಇರುತ್ತದೆ.

ಫಲಾನುಭವಿಯು ಎರಡು ವರ್ಷಗಳ ನಂತರ ಅಥವಾ ಎರಡು ವರ್ಷಗಳ ಅವಧಿಯಲ್ಲಿ ಉದ್ಯೋಗ ಪಡೆದರೆ ನಿರುದ್ಯೋಗ ಭತ್ಯೆ ತಕ್ಷಣವೇ ನಿಲ್ಲಿಸಲಾಗುತ್ತದೆ. ಈ ಯೋಜನೆಯು ರಾಜ್ಯದ ಕನ್ನಡಿಗ ಅಭ್ಯರ್ಥಿಗಳಿಗೆ ಮಾತ್ರ ಅನ್ವಯ ಆಗುತ್ತದೆ. ಯುವನಿಧಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸೇವಾಸಿಂಧು ಪೋರ್ಟಲ್, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್ ಸೇರಿದಂತೆ ಇತರೆ ಸೇವಾ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು.

ನಕಲಿ ಪ್ರಮಾಣಪತ್ರಕ್ಕಿಲ್ಲ ಅವಕಾಶ: ‘ಅಭ್ಯರ್ಥಿಗಳು ಸಲ್ಲಿಸಿರುವ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ/ಡಿಪ್ಲೊಮಾ ಪ್ರಮಾಣಪತ್ರಗಳ ಸಂಖ್ಯೆಗಳನ್ನು ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಶೈಕ್ಷಣಿಕ ಠೇವಣಿ’ ಜಾಲತಾಣದಲ್ಲಿ ನಮೂದಿಸಿ, ಅಲ್ಲಿಂದ ದಾಖಲೆ ಡೌನ್‌ಲೋಡ್‌ ಮಾಡಿಕೊಳ್ಳಲಾಗುವುದು. ನಕಲಿ ಪ್ರಮಾಣ ಪತ್ರ ಸಲ್ಲಿಸಿ, ಸೌಲಭ್ಯ ಪಡೆಯಲು ಸಾಧ್ಯವಿಲ್ಲ’ ಎಂದು ಹಾವೇರಿ ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಹುಲಿರಾಜ ತಿಳಿಸಿದರು.

ನೋಂದಾಯಿತ ಅಭ್ಯರ್ಥಿಗಳು ಪ್ರತಿ ತಿಂಗಳು ‘ನಿರುದ್ಯೋಗಿ’ ಎಂದು ಕಡ್ಡಾಯವಾಗಿ ದೃಢೀಕರಣ ಪತ್ರ ಸಲ್ಲಿಸಬೇಕು. ಸ್ವಯಂ ಉದ್ಯೋಗ ಹೊಂದಿಲ್ಲದವರು ಮತ್ತು ಉನ್ನತ ಶಿಕ್ಷಣ ಮುಂದುವರಿಸದೇ ಇರುವವರಿಗೆ ಸೌಲಭ್ಯ ಸಿಗಲಿದೆ
-ಹುಲಿರಾಜ ಎಚ್‌. ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಹಾವೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT