ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಲೇವಾರಿಯಾಗದ 99 ಸಾವಿರ ಅರ್ಜಿಗಳು

‘ಸಕಾಲ’ ಕಾಲಮಿತಿಯೊಳಗೆ ಸಿಗದ ಸರ್ಕಾರಿ ಸೇವೆ
Last Updated 7 ಡಿಸೆಂಬರ್ 2021, 15:50 IST
ಅಕ್ಷರ ಗಾತ್ರ

ಹಾವೇರಿ: ‘ಇಂದು ನಾಳೆ ಇನ್ನಿಲ್ಲ, ಹೇಳಿದ ದಿನ ತಪ್ಪೊಲ್ಲ’ ಎಂಬ ‘ಸಕಾಲ’ ಯೋಜನೆಯ ಭರವಸೆ ಕೇವಲ ಕಡತಕ್ಕೆ ಮಾತ್ರ ಸೀಮಿತವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ, ನವೆಂಬರ್‌ ಅಂತ್ಯಕ್ಕೆ ರಾಜ್ಯದಲ್ಲಿ ಒಟ್ಟು 99 ಸಾವಿರ ಅರ್ಜಿಗಳು ಕಾಲಮಿತಿ ಮುಗಿದರೂ ವಿಲೇವಾರಿಯಾಗದೇ ಕಚೇರಿಗಳಲ್ಲಿ ದೂಳು ಹಿಡಿಯುತ್ತಿವೆ.

ರಾಜ್ಯದ ನಾಗರಿಕರಿಗೆ ಗೊತ್ತುಮಾಡಿದ ಕಾಲಮಿತಿಯೊಳಗೆ ಸೇವೆಗಳ ಖಾತರಿಗಾಗಿ ‘ಸಕಾಲ’ ಯೋಜನೆಯನ್ನು 2011ಕ್ಕೆ ಜಾರಿಗೆ ತರಲಾಗಿದೆ. ಈ ಯೋಜನೆಯು 99 ಇಲಾಖೆಗಳು ಮತ್ತು 1,115 ಸೇವೆಗಳನ್ನು ಒಳಗೊಂಡಿದೆ.ಆದರೆ, ಅಧಿಕಾರಿಗಳು ಅರ್ಜಿ ವಿಲೇವಾರಿಗೆ ಆಸಕ್ತಿ ತೋರಿಸದೇ ವಿವಿಧ ಕಾರಣಗಳನ್ನು ಹೇಳುತ್ತಾ, ಜನರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿದ್ದಾರೆ ಎಂಬ ವ್ಯಾಪಕ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.

ಬೆಂಗಳೂರಿನಲ್ಲಿ ಹೆಚ್ಚು ಸಮಸ್ಯೆ:

ಅರ್ಜಿಗಳನ್ನು ವಿಲೇವಾರಿ ಮಾಡದೇ, ಬಾಕಿ ಉಳಿಸಿಕೊಂಡಿರುವ ಜಿಲ್ಲೆಗಳಲ್ಲಿಬೆಂಗಳೂರು ನಗರ, ಬೆಳಗಾವಿ, ರಾಯಚೂರು, ಬಳ್ಳಾರಿ ಮತ್ತು ಮೈಸೂರು ಜಿಲ್ಲೆಗಳು ಮೊದಲ ಐದು ಸ್ಥಾನಗಳಲ್ಲಿವೆ. ಉತ್ತರ ಕನ್ನಡ (771), ಬೆಂಗಳೂರು ಗ್ರಾಮೀಣ (547), ದಕ್ಷಿಣ ಕನ್ನಡ (365), ಕೊಡಗು (265) ಹಾಗೂ ಉಡುಪಿ (138) ಜಿಲ್ಲೆಗಳಲ್ಲಿ ಅತ್ಯಂತ ಕಡಿಮೆ ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಹಾವೇರಿ (2,479) ಜಿಲ್ಲೆ ರಾಜ್ಯದಲ್ಲಿ 12ನೇ ಸ್ಥಾನದಲ್ಲಿದೆ.

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್, ನಗರಾಭಿವೃದ್ಧಿ ಪ್ರಾಧಿಕಾರ, ಕಂದಾಯ ಇಲಾಖೆ, ಸಾರಿಗೆ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳಲ್ಲಿ ಸಾವಿರಾರು ಅರ್ಜಿಗಳು ವಿಲೇವಾರಿಯಾಗದೇ ವಿವಿಧ ಹಂತಗಳಲ್ಲಿ ಉಳಿದುಕೊಂಡಿವೆ. ಇದರಿಂದ ಫಲಾನುಭವಿಗಳಿಗೆ ನಿಗದಿತ ವೇಳೆಯಲ್ಲಿ ಸವಲತ್ತುಗಳು ದೊರಕುತ್ತಿಲ್ಲ. ಅರ್ಜಿ ವಿಲೇವಾರಿ ವಿಳಂಬಕ್ಕೆ ಸಿಬ್ಬಂದಿ ನಿರಾಸಕ್ತಿ, ತಾಂತ್ರಿಕ ಕಾರಣ ಹಾಗೂ ಅಧಿಕಾರಿಗಳ ಲಂಚದ ಬೇಡಿಕೆ ಪ್ರಮುಖ ಕಾರಣಗಳು ಎನ್ನಲಾಗುತ್ತಿದೆ.

ಇ–ಸ್ವತ್ತು ಅರ್ಜಿಗಳಿಗೆ ಗ್ರಹಣ:

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯಲ್ಲಿ ‘ಇ–ಸ್ವತ್ತು’ ಅರ್ಜಿಗಳು ವಿಲೇವಾರಿಯಾಗದೇ ಸಾವಿರಾರು ಸಂಖ್ಯೆಯಲ್ಲಿ ಬಾಕಿ ಉಳಿದಿವೆ. ಸರ್ಕಾರಿ ಭೂಮಾಪಕ (ಸರ್ವೆಯರ್‌) ಸಿಬ್ಬಂದಿಗಳ ಕೊರತೆ ಹಾಗೂ ಪರವಾನಗಿ ಭೂಮಾಪಕರ ಸೇವೆ ಅಲಭ್ಯವಾಗಿರುವುದರಿಂದ ಇ–ಸ್ವತ್ತು ಅರ್ಜಿಗಳು ವಿಲೇವಾರಿಯಾಗುತ್ತಿಲ್ಲ.

‘ಸಕಾಲ’ ಯೋಜನೆಯಡಿ, ವಿದ್ಯಾರ್ಥಿಗಳ ಬಸ್‌ಪಾಸ್‌ ಅನ್ನು ಅರ್ಜಿ ಸಲ್ಲಿಸಿದ 7 ದಿನಗಳ ಒಳಗಾಗಿ ವಿತರಿಸಬೇಕು. ಆದರೆ, ‘ಸೇವಾ ಸಿಂಧು’ ಪೋರ್ಟಲ್‌ನಲ್ಲಿ 15 ದಿನಗಳ ಕಾಲಮಿತಿ ಇದೆ. ಈ ದ್ವಂದ್ವ ನಿಯಮಗಳಿಂದ ಬಸ್‌ಪಾಸ್‌ ಅರ್ಜಿಗಳು ಹೆಚ್ಚು ಬಾಕಿ ಉಳಿದಿವೆ ಎಂದು ಅಂಕಿಅಂಶ ತೋರಿಸುತ್ತಿದೆ. ಇದು ತಿದ್ದುಪಡಿಯಾದರೆ, ಸಾರಿಗೆ ಇಲಾಖೆಯಡಿ ಅರ್ಜಿಗಳು ಬಾಕಿ ಉಳಿಯುವುದು ಕಡಿಮೆಯಾಗುತ್ತದೆ ಎನ್ನುತ್ತಾರೆ ಸಾರಿಗೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT