ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿಯಲ್ಲಿ 5 ವರ್ಷಗಳಲ್ಲಿ 45 ಭ್ರಷ್ಟಾಚಾರ ಪ್ರಕರಣಗಳು!

ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ ಇಂದು: ಹಾವೇರಿ ತಾಲ್ಲೂಕಿನಲ್ಲೇ ಹೆಚ್ಚು ಪ್ರಕರಣ
Last Updated 8 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಹಾವೇರಿ: ಭ್ರಷ್ಟಾಚಾರ, ಲಂಚಗುಳಿತನ, ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ ಒಟ್ಟು 45 ಪ್ರಕರಣಗಳುನಗರದಲ್ಲಿರುವ ‘ಭ್ರಷ್ಟಾಚಾರ ನಿಗ್ರಹದಳ’ (ಎಸಿಬಿ) ಪೊಲೀಸ್‌ ಠಾಣೆಯಲ್ಲಿ ದಾಖಲಾಗಿವೆ.

ಸರ್ಕಾರಿ ನೌಕರರ ಮೇಲೆಇದುವರೆಗೆ 25 ಟ್ರ್ಯಾಪ್‌ ಪ್ರಕರಣಗಳು ನಡೆದಿವೆ. ಅವುಗಳಲ್ಲಿ ಹಾವೇರಿ ತಾಲ್ಲೂಕಿನಲ್ಲಿ 7 ಪ್ರಕರಣ, ಶಿಗ್ಗಾವಿ ತಾಲ್ಲೂಕಿನಲ್ಲಿ 6 ಪ್ರಕರಣಗಳು ದಾಖಲಾಗಿವೆ. ಉಳಿದಂತೆ ರಾಣೆಬೆನ್ನೂರು (3), ಹಾನಗಲ್‌ (3), ಬ್ಯಾಡಗಿ (2), ಹಿರೇಕೆರೂರು (2) ಹಾಗೂ ಸವಣೂರು ತಾಲ್ಲೂಕಿನಲ್ಲಿ (2) ಪ್ರಕರಣಗಳು ದಾಖಲಾಗಿವೆ. ರಟ್ಟೀಹಳ್ಳಿ ತಾಲ್ಲೂಕಿನಲ್ಲಿ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

2017ರಲ್ಲಿ ಹಾವೇರಿ ತಾಲ್ಲೂಕಿನಲ್ಲಿ ಅಕ್ರಮ ಆಸ್ತಿ ಸಂಪಾದನೆ ಸಂಬಂಧ ಒಮ್ಮೆ ಎಸಿಬಿ ದಾಳಿ ನಡೆದಿದೆ. ಸರ್ಕಾರಿ ಯೋಜನೆಗಳಲ್ಲಿ ನಡೆದಿರುವ ಭ್ರಷ್ಟಾಚಾರ ಹಾಗೂ ಇತರೆ ಪ್ರಕರಣಗಳು ಸೇರಿದಂತೆ 19 ಪ್ರಕರಣಗಳು ದಾಖಲಾಗಿವೆ. ಈ 45 ಪ್ರಕರಣಗಳಲ್ಲಿ ಕೆಲವು ತನಿಖಾ ಹಂತದಲ್ಲಿವೆ, ಮತ್ತೆ ಕೆಲವು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ. ಹೀಗಾಗಿ, ಇದುವರೆಗೆ ಯಾವುದೇ ಪ್ರಕರಣಗಳು ಇತ್ಯರ್ಥಗೊಂಡು, ಶಿಕ್ಷೆ ಪ್ರಕಟಗೊಂಡಿಲ್ಲ.

ಜನರಲ್ಲಿ ಎಸಿಬಿ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದಿರುವುದು, ಅಗತ್ಯ ದಾಖಲೆಗಳ ಕೊರತೆ, ತನಿಖಾ ಪ್ರಕ್ರಿಯೆಯಲ್ಲಿ ದೂರುದಾರ ಅರ್ಧಕ್ಕೆ ಹಿಂದೆ ಸರಿಯುವುದು ಮುಂತಾದ ಕಾರಣಗಳಿಂದಎಸಿಬಿ ಠಾಣೆಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿಲ್ಲ ಎನ್ನಲಾಗುತ್ತದೆ.

ಅಹವಾಲು ಸ್ವೀಕಾರ:

ಸರ್ಕಾರಿ ಇಲಾಖೆಗಳಲ್ಲಿ ನಡೆಯುವ ಭ್ರಷ್ಟಾಚಾರ ಮತ್ತು ಸರ್ಕಾರಿ ನೌಕರರ ಅನಗತ್ಯ ವಿಳಂಬ ಧೋರಣೆ ವಿರುದ್ಧ ಜನರು ದೂರು ಸಲ್ಲಿಸಲು ಅನುಕೂಲವಾಗುವಂತೆ ಪ್ರತಿ ತಾಲ್ಲೂಕಿನಲ್ಲಿ ಆಗಾಗ್ಗೆ ‘ಸಾರ್ವಜನಿಕ ಅಹವಾಲು ಸ್ವೀಕಾರ ಹಾಗೂ ಎಸಿಬಿ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ’ವನ್ನು ಹಮ್ಮಿಕೊಳ್ಳಲಾಗುತ್ತದೆ. ಜನರು ದೂರು ನೀಡುವ ಜತೆಗೆ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಮನವರಿಕೆ ಮಾಡಲಾಗುತ್ತದೆ ಎನ್ನುತ್ತಾರೆ ಎಸಿಬಿ ಇನ್‌ಸ್ಪೆಕ್ಟರ್‌.

ಗುಪ್ತ ಮಾಹಿತಿ ಸಂಗ್ರಹ:

ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಗುಪ್ತ ಮಾಹಿತಿ ಸಂಗ್ರಹಿಸುವುದು, ಇತರ ಇಲಾಖೆಗಳ ವಿಚಕ್ಷಣಾ ದಳದ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ, ಸರ್ಕಾರಿ ಅಧಿಕಾರಿಗಳು ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸುವಂತೆ ನೋಡಿಕೊಳ್ಳುವುದು, ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳ ಬಗ್ಗೆ ತನಿಖೆಯನ್ನು ಕೈಗೊಂಡು ಅಭಿಯೋಜನೆಗೆ ಒಳಪಡಿಸುವುದು ಹಾಗೂ ಭ್ರಷ್ಟಾಚಾರ ನಿಯಂತ್ರಣಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವುದು ಎಸಿಬಿಯ ಪ್ರಮುಖ ಕರ್ತವ್ಯಗಳಾಗಿವೆ.

‘ಪ್ರಾಥಮಿಕ ವಿಚಾರಣೆಯಲ್ಲಿ ಪ್ರಕರಣ ದಾಖಲಿಸಲು ಸಾಕಷ್ಟು ಮಾಹಿತಿ/ ಸಾಕ್ಷಿಗಳಿವೆ ಎಂದು ಕಂಡುಬಂದಲ್ಲಿ ಎಫ್.ಐ.ಆರ್ ದಾಖಲಿಸಿ ಸಂಬಂಧಿಸಿದ ನ್ಯಾಯಾಲಯಕ್ಕೆ ಸಲ್ಲಿಸಿ ತನಿಖೆಯನ್ನು ಕೈಗೆತ್ತಿಕೊಳ್ಳಲಾಗುತ್ತದೆ. ತನಿಖೆ ಮುಗಿದ ನಂತರ ಸತ್ಯಾಸತ್ಯತೆಗಳ ಆಧಾರದ ಮೇಲೆ ದೋಷಾರೋಪ ಪಟ್ಟಿಯನ್ನು ದಾಖಲಿಸಲಾಗುತ್ತದೆ. ಇಲ್ಲವೇ ಸಂಬಂಧಿಸಿದ ಇಲಾಖೆಗಳಿಗೆ ಆರೋಪಿತ ಅಧಿಕಾರಿಯ ಬಗ್ಗೆ ಇಲಾಖಾ ವಿಚಾರಣೆ ಮಾಡಲು ನಿರ್ದೇಶಿಸಲಾಗುತ್ತದೆ’ ಎನ್ನುತ್ತಾರೆ ಎಸಿಬಿ ಡಿವೈಎಸ್ಪಿ ಮಹಾಂತೇಶ್ವರ ಜಿದ್ದಿ.

ತರಹೇವಾರಿ ಶಿಕ್ಷೆ:

ನ್ಯಾಯಾಲಯದಲ್ಲಿ ಸಾರ್ವಜನಿಕ ನೌಕರನು ದೋಷಿ ಎಂದು ತೀರ್ಮಾನವಾದರೆ, ಅಂತಹ ನೌಕರನನ್ನು ಸೇವೆಯಿಂದ ವಜಾಗೊಳಿಸಬೇಕಾಗುತ್ತದೆ. ಇಲಾಖಾ ವಿಚಾರಣೆಯಲ್ಲಿ ನೌಕರನ ವಿರುದ್ಧ ದೊಡ್ಡ ಶಿಕ್ಷೆ ಅಥವಾ ಅಲ್ಪ ಶಿಕ್ಷೆಯನ್ನು ಪ್ರಕರಣದ ಆಳ ಮತ್ತು ವಿಸ್ತಾರಗಳನ್ನು ಆಧರಿಸಿ ನೀಡಲಾಗುತ್ತದೆ. ದೊಡ್ಡ ಶಿಕ್ಷೆಯಲ್ಲಿ ವಜಾ, ಪದೋನ್ನತಿಯಲ್ಲಿ ಇಳಿಮುಖ, ಪದೋನ್ನತಿಯನ್ನು ತಡೆ ಹಿಡಿಯುವಿಕೆ, ವೇತನ ಹೆಚ್ಚಳಗಳನ್ನು ತಡೆಯುವುದು, ವಾಗ್ದಂಡನೆ, ಎಚ್ಚರಿಕೆ ಇತ್ಯಾದಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

‘ಭ್ರಷ್ಟಾಚಾರದ ಕೊಂಡಿಯನ್ನು ಕಳಚಿ’

‘ಸರ್ಕಾರಿ ಕಚೇರಿಗಳಲ್ಲಿ ನೌಕರರು ಲಂಚ ಕೇಳಿದರೆ ಹಾಗೂ ಸರ್ಕಾರಿ ಅಧಿಕಾರಿ ಮತ್ತು ನೌಕರರು ಅಕ್ರಮ ಆಸ್ತಿ ಹೊಂದಿದ್ದರೆ, ಅಗತ್ಯ ದಾಖಲೆಗಳೊಂದಿಗೆ ಎ.ಸಿ.ಬಿ.ಗೆ ಸಾರ್ವಜನಿಕರು ದೂರು ನೀಡಬಹುದು. ದೂರು ನೀಡಿದವರ ಹೆಸರನ್ನು ಗೋಪ್ಯವಾಗಿಡುತ್ತೇವೆ. ಲಂಚ ಪಡೆಯುವುದು ಮತ್ತು ಕೊಡುವುದು ಎರಡೂ ಅಪರಾಧ. ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ಎ.ಸಿ.ಬಿ.ಯೊಂದಿಗೆ ಕೈ ಜೋಡಿಸಿ’ ಎನ್ನುತ್ತಾರೆ ಹಾವೇರಿ ಎಸಿಬಿ ಡಿವೈಎಸ್ಪಿ ಮಹಾಂತೇಶ್ವರ ಜಿದ್ದಿ.

ದೂರು ನೀಡಲು ದೂ: 08375–235533 ಅಥವಾ 94808 06289 ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT