ಬುಧವಾರ, ಜೂನ್ 23, 2021
30 °C
ಕೊರೊನಾ ಸೋಂಕು ಮತ್ತು ಮರಣ ಪ್ರಮಾಣ ಇಳಿಕೆಗೆ ಕಾರ್ಯೋನ್ಮುಖರಾಗಿ: ಜಿಲ್ಲಾಧಿಕಾರಿ

ಹಾವೇರಿ: ರ‍್ಯಾಪಿಡ್‌ ಸರ್ವೆ ಚುರುಕುಗೊಳಿಸಿ-ಸಂಜಯ ಶೆಟ್ಟೆಣ್ಣವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹಾಗೂ ಮರಣ ಪ್ರಮಾಣ ಕಡಿಮೆಗೊಳಿಸಲು ನಿಗದಿತ ಅವಧಿಯೊಳಗೆ ರ‍್ಯಾಪಿಡ್‌ ಸರ್ವೆ ನಡೆಸಬೇಕು. ಲಕ್ಷಣಗಳು ಕಂಡುಬಂದರೆ ಗಂಟಲು ದ್ರವ ತಪಾಸಣೆ ನಡೆಸಿ, ಸಕಾಲದಲ್ಲಿ ಚಿಕಿತ್ಸೆ ನೀಡಿದರೆ ಸೋಂಕಿನ ಹರಡುವಿಕೆಯನ್ನು ತಡೆಯಬಹುದು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕು ಅಧಿಕಾರಿಗಳ ಸಭೆ ನಡೆಸಿ, ತಾಲ್ಲೂಕುವಾರು ರ‍್ಯಾಪಿಡ್‌ ತಪಾಸಣೆ. ಸ್ವ್ಯಾಬ್ ಪರೀಕ್ಷೆ, ಪಾಸಿಟಿವ್ ಪ್ರಮಾಣ, ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸಿದ ಮಾಹಿತಿ ಹಾಗೂ ಮೈಕ್ರೋ ಕಂಟೈನ್‍ಮೆಂಟ್ ಜೋನ್ ರಚನೆಯ ಮಾಹಿತಿ ಪಡೆದುಕೊಂಡರು.

ಈಗಾಗಲೇ ಸೋಂಕು ಪತ್ತೆಯಾದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲಿ ಶೇ 42ರಷ್ಟು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ 52ರಷ್ಟು ಸೋಂಕಿನ ಪ್ರಮಾಣವಿದೆ. ದೈನಂದಿನ ಸೋಂಕಿನ ಪ್ರಮಾಣವನ್ನು ಆಧರಿಸಿ ಆಯಾ ಪ್ರದೇಶದಲ್ಲಿ ರ‍್ಯಾಪಿಡ್‌ ಸರ್ವೆ, ಶಂಕಿತರ ಗಂಟಲು ದ್ರವ ಪರೀಕ್ಷೆ, ಪಾಸಿಟಿವ್ ಬಂದವರ ಐಸೋಲೇಷನ್ ಹಾಗೂ ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸುವ ಕೆಲಸ ತ್ವರಿತ ಹಾಗೂ ನಿಯಮಿತವಾಗಿ ಕೈಗೊಳ್ಳಲು ಸೂಚನೆ ನೀಡಿದರು.

ಗ್ರಾಮಗಳಲ್ಲಿ ಪಾಸಿಟಿವ್ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಪ್ರತ್ಯೇಕಿಸಿದರೆ ಸಮುದಾಯಕ್ಕೆ ಹರಡುವುದನ್ನು ತಪ್ಪಿಸಬಹುದು. ಪಾಸಿಟಿವ್ ಬಂದವರನ್ನು ಕೋವಿಡ್ ಆರೈಕೆ ಕೇಂದ್ರಗಳಿಗೆ ಸೇರಿಸಿ ಮೂರ್ನಾಲ್ಕು ದಿನ ಇರಿಸಿ ಚಿಕಿತ್ಸೆ ನೀಡಿದರೆ ಸೋಂಕು ನಿವಾರಣೆಯಾಗುತ್ತದೆ.  ಎಂದು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಿಟ್‍ಗಳ ಜೊತೆಗೆ ಸೋಂಕಿನ ಲಕ್ಷಣವಿದ್ದವರಿಗೆ ಔಷಧ ಕಿಟ್ ನೀಡಿ. ಸ್ಥಳೀಯವಾಗಿಯೇ ಔಷಧಿಗಳ ಖರೀದಿಗೆ ಕ್ರಮಕೈಗೊಳ್ಳಿ. ಇದಕ್ಕೆ ಬೇಕಾದ ಅನುದಾನವನ್ನು ಎಸ್.ಡಿ.ಆರ್.ಎಫ್. ಅನುದಾನದಲ್ಲಿ ಒದಗಿಸಲಾಗುವುದು. ಈಗಾಗಲೇ ಈ ಕುರಿತಂತೆ ತಮಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌ ಮಾತನಾಡಿ, ‘ರ್‍ಯಾಪಿಡ್‌ ಪರೀಕ್ಷೆಗಳನ್ನು ನಿಗದಿತ ಕಾಲಾವಧಿಯೊಳಗೆ ನಡೆಸಲೇಬೇಕು. ಆರೋಗ್ಯಾಧಿಕಾರಿಗಳು, ತಹಶೀಲ್ದಾರ್‌ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ. ಹೆಚ್ಚು ಪ್ರಕರಣ ಬಂದ ಪ್ರದೇಶದಲ್ಲಿ 48 ಗಂಟೆಯೊಳಗಾಗಿ ರ‍್ಯಾಪಿಡ್‌ ಸರ್ವೆ ಪೂರ್ಣಗೊಳಿಸಲೇಬೇಕು. ಸೋಂಕಿನ ಪ್ರಮಾಣ ಹೆಚ್ಚಿರುವ ಹಿರೇಕೆರೂರು, ಶಿಗ್ಗಾವಿ, ರಟ್ಟಿಹಳ್ಳಿಯಲ್ಲಿ ಹೆಚ್ಚಿನ ಶ್ರಮವಹಿಸಬೇಕು’ ಎಂದರು. 

ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ ಮಾತನಾಡಿ, ‘ರ‍್ಯಾಪಿಡ್‌ ಸರ್ವೆಯಲ್ಲಿ ಒಂದು ಮನೆಯಲ್ಲಿ ಐದು ಜನರಿಗೆ ಪಾಸಿಟಿವ್ ಬಂದಿದ್ದರೆ ಆ ಮನೆಯನ್ನು ಮೈಕ್ರೋ ಕಂಟೈನ್‍ಮೆಂಟ್ ಆಗಿ ಘೋಷಣೆಮಾಡಿ. ಮನೆಯಿಂದ ಹೊರಗೆ ಬರದಂತೆ ಕ್ರಮವಹಿಸಬೇಕು. ಅವರಿಗೆ ಅಗತ್ಯವಾದ ಜೀವನಾವಶ್ಯಕ ವಸ್ತುಗಳ ಪೂರೈಕೆಗೆ ವ್ಯವಸ್ಥೆ ಮಾಡಬೇಕು’ ಎಂದರು. 

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಸಂತೋಷ್, ಉಪವಿಭಾಗಾಧಿಕಾರಿಗಳಾದ ಶಿವಾನಂದ ಉಳ್ಳಾಗಡ್ಡಿ, ಅನ್ನಪೂರ್ಣ ಮುದಕಮ್ಮನವರ ಇದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು