ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮ್ಮೇಳನ: ಒಂದೇ ಒಂದು ಆಂಗ್ಲ ಪದವಿಲ್ಲದೇ ನಟ ಸುಚೇಂದ್ರ ಪ್ರಸಾದ್ ಮಾತು

ನಟ ಸುಚೇಂದ್ರ ಪ್ರಸಾದ್, ಡಾ. ಜಯದೇವಿ ಮಾತಿಗೆ ತಲೆಬಾಗಿದ ಸಭಿಕರು
Last Updated 8 ಜನವರಿ 2023, 5:18 IST
ಅಕ್ಷರ ಗಾತ್ರ

ಹಾವೇರಿ (ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ ವೇದಿಕೆ): ವಚನ, ತತ್ವಪದ, ಬೀದಿ ನಾಟಕದ ಹಾಡುಗಳು ತಲೆದೂಗುವಂತೆ ಮಾಡಿದರೆ, ಒಂದೇ ಒಂದು ಇಂಗ್ಲಿಷ್ ಪದವಿಲ್ಲದ ಅಚ್ಚ ಕನ್ನಡದ ಸರಾಗ ಮಾತುಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದವು.

ಐದು ಕ್ಷೇತ್ರಗಳ ಸಾಧಕರನ್ನು ಒಳಗೊಂಡ ‘ಕಲಾ ಸಂಗಮ’ ಗೋಷ್ಠಿ ಎರಡೂವರೆ ತಾಸು ಸಭಿಕರನ್ನು ಹಿಡಿದಿಟ್ಟುಕೊಂಡಿತು.

ಅಧ್ಯಕ್ಷೀಯ ನುಡಿಗಳನ್ನಾಡಿದ ಚಲನಚಿತ್ರ ನಟ ಸುಚೇಂದ್ರ ಪ್ರಸಾದ್, ‘ಪರಸ್ಪರ ಬೆರೆಯುವ, ಒಂದೆಡೆ ಕೂಡಿ ಮುಂದಡಿ ಇಡುವ ಮಹತ್ತರ ಹರಿವು ಸಂಗಮವಾದರೆ, ಮುಕ್ತಿ ದಯಪಾಲಿಸುವ, ದರ್ಶನ ಒದಗಿಸುವ ಮಹತ್ಸಾಧನವೇ ಕಲೆ. ಕಲಾ ಸಂಗಮ ಹಲವು ಕಲಾ ಪ್ರಕಾರಗಳ ಅಸಾದೃಶ್ಯ, ಔನ್ನತ್ಯದ ಪ್ರತೀಕವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಕಲೆ ಮನ ಅರಳಿಸುವ ಸತ್ಕಾರ್ಯವಾಗಬೇಕು. ಕಲಾ ತಪಸ್ವಿಗೆ ಪ್ರೇರಕ, ಪೂರಕ ಹಾಗೂ ಮಾರಕ ಅಂಶಗಳು ಗೊತ್ತಿರಬೇಕು. ಕಲಾ ಮಾಧ್ಯಮ ಉತ್ತರದಾಯಿತ್ವವೂ ಆಗಿರಬೇಕು. ಹಳೆ ಬೇರನ್ನು ಕಡೆಗಣಿಸದೆ, ಹೊಸ ಬೇರು ಶ್ರೇಷ್ಠವೆಂದು‌ ಬೀರದೆ ಕಲೆಗಳು ಸಾಗಬೇಕು’ ಎಂಬ ಆಶಯ ವ್ಯಕ್ತಪಡಿಸಿದರು.

ಗೋಷ್ಠಿಯು ರಂಗಭೂಮಿ ವಿಷಯವನ್ನು ಸಹ ಒಳಗೊಳ್ಳಬೇಕಿತ್ತು’ ಎಂದು ಆಶಯ ನುಡಿಗಳನ್ನು ಆರಂಭಿಸಿದ ರಂಗಕರ್ಮಿ ಶ್ರೀಪತಿ ಮಂಜನಬೈಲು, ‘ಎಲ್ಲಾ ಕಲೆಗಳನ್ನು ಅನುಭವಿಸುವ ಕಲೆ ಮನುಷ್ಯನಿಗೆ ಇದ್ದರೆ, ಪ್ರಕೃತಿಯು ಸಹಕಾರಿಯಾಗುತ್ತದೆ. ಆಧುನಿಕ ಕಾಲದಲ್ಲಿ ಎದುರಾಗಿರುವ ಸವಾಲುಗಳನ್ನು ಮೀರಿ ಕಲೆಗಳು ಬೆಳೆಯಬೇಕಿದೆ’ ಎಂದರು.

‘ಶಿಲ್ಪಕಲೆ’ ವಿಷಯ ಕುರಿತು ಮಾತನಾಡಿದ ವೀರಣ್ಣ ಅರ್ಕಸಾಲಿ, ‘ಎಲ್ಲೋರಾ, ಅಜಂತಾ, ತಂಜಾವೂರಿನ ದೇವಾಲಯ, ಬಾದಾಮಿ, ಹಂಪಿ, ಶ್ರವಣಬೆಳಗೊಳ, ಬೇಲೂರು, ಹಳೇಬೀಡು, ಸೋಮನಾಥಪುರ ದೇವಾಲಯಗಳು ಶಿಲ್ಪಕಲೆಗೆ ಮೇಲ್ಪಂಕ್ತಿ ಹಾಕಿವೆ. ಜಕಣಾಚಾರಿ ಅವರು ಅಮರಶಿಲ್ಪಿಯಾಗಿ ಉಳಿದಿರುವುದ ಈ ನೆಲದಲ್ಲಿ ಶಿಲ್ಪಕಲೆಗಿರುವ ಮಹತ್ವಕ್ಕೆ ಸಾಕ್ಷಿಯಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಶಿಲ್ಪಿಗೆ ಸೌಂದರ್ಯಪ್ರಜ್ಞೆ ಕೂಡ ಇರಬೇಕು ಎಂಬುದಕ್ಕೆ ಬೇಲೂರು ದೇವಸ್ಥಾನ ನಿದರ್ಶನವಾಗಿದೆ. ಈಗಿನ ಶಿಲ್ಪಿಗಳು ಸಹ ದೇಶ-ವಿದೇಶಗಳಲ್ಲಿ ಹೆಸರುವಾಸಿಯಾಗಿದ್ದಾರೆ. ನಾಡಿನ ಖ್ಯಾತಿಗೆ ಶಿಲ್ಪಕಲೆ ಕ್ಷೇತ್ರದ ಕೊಡುಗೆ ಮಹತ್ವದ್ದಾದರೂ ಶಿಲ್ಪಿಗಳ ಹೆಸರು ಅಷ್ಟಾಗಿ ಕೇಳಿ ಬರುತ್ತಿಲ್ಲ. ಶಿಲ್ಪಕಲಾಕೃತಿಗಳನ್ನು ಸಂರಕ್ಷಣೆ ಮಾಡಿ, ಮುಂದಿನ ತಲೆಮಾರಿಗೆ ತಲುಪಿಸುವ ಕೆಲಸ ಮಾಡಬೇಕಿದೆ’ ಎಂದು ಹೇಳಿದರು.

ವಚನ, ತತ್ವಪದ ಸೇರಿದಂತೆ ವಿವಿಧ ಪ್ರಕಾರಗಳ ಹಾಡುಗಳ ಎಳೆಯೊಂದಿಗೆ ಡಾ. ಜಯದೇವಿ ಜಂಗಮಶೆಟ್ಟಿ ಅವರು ಮಂಡಿಸಿದ, ‘ಸಂಗೀತ ಮತ್ತು ನೃತ್ಯ ಕ್ಷೇತ್ರದ ಹೊಸ ಪ್ರಯೋಗಗಳು’ ವಿಷಯ ಪ್ರೇಕ್ಷಕರಿಗೆ ಮುದ ನೀಡಿತು.

‘ಬೀದಿ ನಾಟಕ ಅಕಾಡೆಮಿ ಸ್ಥಾಪಿಸಿ’

‘ಜನ ಜಾಗೃತಿಗೆ ಬೀದಿ ನಾಟಕಗಳ ಪ್ರಭಾವ’ ಕುರಿತು ಮಾತನಾಡಿದ ಗ್ಯಾರಂಟಿ ರಾಮಣ್ಣ, ‘ಬೀದಿ ನಾಟಕ ವಿಶೇಷ, ವಿಭಿನ್ನ, ವಿನೂತನ, ವಿಚಿತ್ರವಾದುದು. ಸಮಾಜದ ನೋವು– ನಲಿವು, ಸಮಸ್ಯೆಗಳನ್ನು ತಿಳಿಸುವ ಅಸ್ತ್ರ. ಯಾವುದೇ ಪರಿಕಲ್ಪನೆ ಇದಕ್ಕಿಲ್ಲ. ರಾಜ್ಯದಲ್ಲಿ 5800 ಬೀದಿ ನಾಟಕ ಕಲಾವಿದರಿದ್ದಾರೆ.‌ ಅದರಲ್ಲೂ ದಲಿತರು ಮತ್ತು ಹಿಂದುಳಿದಿರುವವರೇ ಇದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ. ಎಲ್ಲಾ ರೀತಿಯ ಕಲೆಗಳನ್ನು ಬಳಸಿಕೊಂಡಿರುವ ಕ್ಷೇತ್ರವಿದು. ಸರ್ಕಾರ ಬೀದಿ ನಾಟಕ ಅಕಾಡೆಮಿಯನ್ನು ಸ್ಥಾಪಿಸಿ, ಈ ಕ್ಷೇತ್ರಕ್ಕೆ ನೆರವಾಗಬೇಕು. ರಾಜ್ಯೋತ್ಸವ ಪ್ರಶಸ್ತಿಗೆ ಬೀದಿ ನಾಟಕ ಕಲಾವಿದರನ್ನು ಸಹ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT