ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ಅರ್ಜಿ ವಿಲೇವಾರಿ- ರಾಜ್ಯಕ್ಕೆ ಹಾವೇರಿ ಪ್ರಥಮ

ಶೇ 99 ಅರ್ಜಿಗಳು ನಿಗದಿತ ಅವಧಿಗಿಂತ ಮೊದಲೇ ವಿಲೇವಾರಿ
Last Updated 22 ಜನವರಿ 2022, 19:30 IST
ಅಕ್ಷರ ಗಾತ್ರ

ಹಾವೇರಿ: ಅಟಲ್‌ಜೀ ಜನಸ್ನೇಹಿ ಕೇಂದ್ರ (ಎ.ಜೆ.ಎಸ್‌.ಕೆ) ಯೋಜನೆಯಡಿ ಜಿಲ್ಲೆಯ ನಾಡಕಚೇರಿಗಳಲ್ಲಿ ಸಾರ್ವಜನಿಕರಿಂದ ಸ್ವೀಕರಿಸಿದ ಅರ್ಜಿಗಳಲ್ಲಿ ಶೇ 99ರಷ್ಟು ಅರ್ಜಿಗಳನ್ನು ನಿಗದಿತ ಅವಧಿಗಿಂತ ಮೊದಲೇ ವಿಲೇವಾರಿ ಮಾಡಿ, ಹಾವೇರಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದೆ.

2021ರ ಡಿಸೆಂಬರ್‌ನಲ್ಲಿ ಒಟ್ಟು 30,078 ಅರ್ಜಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಿ, 29,808 ಅರ್ಜಿಗಳ ವಿಲೇವಾರಿ ಮಾಡಿದೆ. ಹಾವೇರಿ ಜಿಲ್ಲೆ 4.72 ‘ಸಿಗ್ಮಾ ಮೌಲ್ಯ’ವನ್ನು (ಅರ್ಜಿಗಳ ವಿಲೇವಾರಿಯಲ್ಲಿನ ವಿಳಂಬ ಪ್ರಮಾಣ) ಪಡೆದಿದೆ. ಗರಿಷ್ಠ 4.02 ವಿಲೇವಾರಿ ಸೂಚ್ಯಂಕವನ್ನು (ಡಿಸ್ಪೋಸಲ್‌ ಇಂಡೆಕ್ಸ್‌) ಗಳಿಸಿದೆ.

‘ಈ ಕಾರ್ಯ ಸಾಧನೆಗೆ ನಾಡಕಚೇರಿ ಮತ್ತು ಅಟಲ್‌ಜೀ ಜನಸ್ನೇಹಿ ಕೇಂದ್ರದ ಅಧಿಕಾರಿ ಮತ್ತು ಸಿಬ್ಬಂದಿಯ ಸಹಕಾರ, ಕಾರ್ಯತತ್ಪರತೆ ಕಾರಣವಾಗಿದೆ. ಮುಂದಿನ ದಿನಗಳಲ್ಲೂ ಇದೇ ರೀತಿಯ ಕಾರ್ಯಕ್ಷಮತೆಯನ್ನು ನಿರೀಕ್ಷಿಸುತ್ತೇವೆ’ ಎಂದು ಅಟಲ್‌ಜೀ ಜನಸ್ನೇಹಿ ನಿರ್ದೇಶನಾಲಯದ ನಿರ್ದೇಶಕಿ ಗಂಗೂಬಾಯಿ ಮಾನಕರ ಅವರು ಹಾವೇರಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರಿಗೆ ‘ಅಭಿನಂದನಾ ಪತ್ರ’ ಕಳುಹಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿಗೆ ಕಡೆಯ ಸ್ಥಾನ:ವಿಲೇವಾರಿ ಸೂಚ್ಯಂಕದ ಪ್ರಕಾರ ಹಾವೇರಿ (4.02 ಡಿಐ), ಬೆಳಗಾವಿ (3.7), ಮಂಡ್ಯ (3.57) ಜಿಲ್ಲೆಗಳು ಮೊದಲ ಮೂರು ಸ್ಥಾನಗಳನ್ನು ಕ್ರಮವಾಗಿ ಗಳಿಸಿವೆ.ಚಿಕ್ಕಮಗಳೂರು (1.61), ಕಲ್ಬುರ್ಗಿ (1.51) ಹಾಗೂ ಬಳ್ಳಾರಿ (1.42) ಜಿಲ್ಲೆಗಳು ವಿಲೇವಾರಿ ಸೂಚ್ಯಂಕದಲ್ಲಿ ಕಟ್ಟ ಕಡೆಯ ಸ್ಥಾನದಲ್ಲಿವೆ.

ಸರ್ಕಾರದ ಎಲ್ಲಾ ಕಂದಾಯ ಸೇವೆಗಳನ್ನು ಹೋಬಳಿ ಮಟ್ಟದಲ್ಲಿ ಗ್ರಾಮೀಣ ಪ್ರದೇಶದ ನಾಗರಿಕರಿಗೆ ಪಾರದರ್ಶಕ, ವಿಶ್ವಾಸಾರ್ಹ ಹಾಗೂ ಕೈಗೆಟಕುವಂತೆನೀಡಲು ಅಟಲ್ ಜೀ ಜನಸ್ನೇಹಿ ಕೇಂದ್ರವನ್ನು 2012ರಲ್ಲಿ ಆರಂಭಿಸಲಾಯಿತು. ರಾಜ್ಯದಲ್ಲಿ 769 ಅಟಲ್ ಜೀ ಜನಸ್ನೇಹಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

‘ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ ‘ಸಿಎಂ ತವರು ಜಿಲ್ಲೆ’ ಹಾವೇರಿಯ ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳು ಚುರುಕುಗೊಂಡಿವೆ. ವಿವಿಧ ಇಲಾಖೆಗಳ ಸಚಿವರು ಆಗಾಗ್ಗೆ ಹಾವೇರಿಗೆ ಭೇಟಿ ನೀಡಿ, ಸಭೆಗಳನ್ನು ನಡೆಸಿ ಅಧಿಕಾರಿಗಳಿಗೆ ಚಾಟಿ ಬೀಸುತ್ತಿದ್ದಾರೆ. ನಿರ್ಲಕ್ಷ್ಯ ತೋರಿದ ನೌಕರರಿಗೆ ನೋಟಿಸ್‌, ಅಮಾನತುಗಳಂಥ ಶಿಕ್ಷೆಗೆ ಗುರಿ ಪಡಿಸಲಾಗುತ್ತಿದೆ. ಈ ಕಾರಣಗಳಿಂದ ಜಿಲ್ಲೆಯಲ್ಲಿ ಸರ್ಕಾರಿ ಸೇವೆ ಮೊದಲಿಗಿಂತ ಉತ್ತಮವಾಗಿದೆ’ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

*

ನಾಗರಿಕರ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು, ವಿಳಂಬವಾದರೆ ಕಾರಣ ತಿಳಿಸಬೇಕು ಎಂದು ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ

– ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT