ಭಾನುವಾರ, ಜೂನ್ 26, 2022
26 °C
ಮುಂಗಾರು ಪ್ರವಾಹ- ಅತಿವೃಷ್ಟಿ ಎದುರಿಸಲು ಮುಂಜಾಗ್ರತಾ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಶನಿವಾರದೊಳಗೆ ಪರಿಹಾರ ಹಣ ಪಾವತಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಪ್ರವಾಹ ಮತ್ತು ಅತಿವೃಷ್ಟಿ ಎದುರಿಸಲು ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿ, ನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ಮಾಡಬೇಕು. ಸತತ ಮಳೆಯಿಂದ ಹಾನಿಯಾದ ಮನೆಗಳಿಗೆ ಶನಿವಾರದೊಳಗೆ ಕನಿಷ್ಠ ಪರಿಹಾರ ಹಣ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಪ್ರಸಕ್ತ ಮುಂಗಾರು ಪ್ರವಾಹ, ಅತಿವೃಷ್ಟಿ ಎದುರಿಸಲು ಮುಂಜಾಗ್ರತಾ ಕ್ರಮಗಳ ಪೂರ್ವಸಿದ್ಧತೆಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

12 ಗ್ರಾಮಗಳು ಗುರುತು: ಪ್ರವಾಹಕ್ಕೆ ತುತ್ತಾಗುವ ತಗ್ಗು ಪ್ರದೇಶ ಹಾಗೂ ಮನೆಗೆ ನೀರು ನುಗ್ಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ವಿಪತ್ತು ಸಂದರ್ಭದಲ್ಲಿ ಅಗತ್ಯವಾದ ಪರಿಕರಗಳನ್ನು ಸಿದ್ಧ ಮಾಡಿಟ್ಟುಕೊಳ್ಳಬೇಕು. ಓವರ್ ಹೆಡ್ ಟ್ಯಾಂಕ್‍ಗಳನ್ನು ಸ್ವಚ್ಛಗೊಳಿಸಬೇಕು. ಪ್ರವಾಹಕ್ಕೆ ತುತ್ತಾಗುವ 12 ಗ್ರಾಮಗಳನ್ನು ಗುರುತಿಸಲಾಗಿದ್ದು, ಈ ಗ್ರಾಮಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು ಹಾಗೂ ಪ್ರವಾಹ ಸಂದರ್ಭದಲ್ಲಿ ಸ್ಥಳಾಂತರಕ್ಕೆ ಅಗತ್ಯ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದರು. 

ಸ್ಥಳ ಗುರುತಿಸಿ: ಅತಿವೃಷ್ಟಿ ಸಮಯದಲ್ಲಿ ಸಂತ್ರಸ್ತರ ವಾಸಕ್ಕೆ ತಾತ್ಕಾಲಿಕ ಶೆಡ್ ನಿರ್ಮಾಣ ಹಾಗೂ ಪರಿಹಾರ ಕೇಂದ್ರ ಸ್ಥಾಪನೆಗೆ ಸ್ಥಳ ನಿಗದಿಪಡಿಸಬೇಕು. ಸರ್ಕಾರಿ ಶಾಲಾ-ಕಾಲೇಜು ಇತರೆ ಕಟ್ಟಡಗಳನ್ನು ಗುರುತಿಸಬೇಕು ಹಾಗೂ ಅಗತ್ಯ ಆಹಾರ ಪೂರೈಕೆಗೆ ಕ್ರಮವಹಿಸಬೇಕು. ಹಾನಗಲ್ ತಾಲ್ಲೂಕು ಕೂಡಲ ಗ್ರಾಮದ ವರದಾ ನದಿ ದಡದ ಮನೆಗಳ ಸ್ಥಳಾಂತರಕ್ಕೆ ಜಾಗ ಗುರುತಿಸಿ ಎಂದು ಸೂಚನೆ ನೀಡಿದರು.

ಜಂಟಿ ಸಮೀಕ್ಷೆ ನಡೆಸಿ:

ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕೃಷಿ ಹಾಗೂ ತೋಟಗಾರಿಕೆ ಬೆಳೆಹಾನಿ ಜಂಟಿ ಸಮೀಕ್ಷೆ ಕೈಗೊಂಡು ತ್ವರಿತವಾಗಿ ದಾಖಲಿಸಬೇಕು. ಪಂಚಾಯತ್ ರಾಜ್ ವಿಭಾಗದ ಹಾನಿಯಾದ ರಸ್ತೆಗಳ ವರದಿ ಸಲ್ಲಿಸಿದರೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು. ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನಗಳಲ್ಲಿಯೇ ವಾಸವಿರಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌ ಮಾತನಾಡಿ, ‘ಮನೆಗಳ ಹಾನಿ ಪ್ರದೇಶಕ್ಕೆ ತಹಶೀಲ್ದಾರ್‌ಗಳು ಭೇಟಿ ನೀಡಿ ಪರಿಶೀಲನೆ ನಡಸಬೇಕು. ಮನೆಗಳ ಹಾನಿ ಸಮೀಕ್ಷೆಗೆ ಲೋಕೊಪಯೋಗಿ ಇಲಾಖೆಯಿಂದ ಎಂಜಿನಿಯರ್‌ಗಳನ್ನು ನಿಯೋಜಿಸಬೇಕು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಪಿಡಿಒಗಳು ಗ್ರಾಮೀಣ ಪ್ರದೇಶದಲ್ಲಿ ಚರಂಡಿ ಹಾಗೂ ಓವರ್ ಹೆಡ್ ಟ್ಯಾಂಕ್‍ಗಳನ್ನು ಸ್ವಚ್ಛ ಮಾಡಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ 869 ಹೆಕ್ಟೇರ್ ಕೃಷಿ ಹಾಗೂ 402 ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ಮನೆಗಳ ಸಮೀಕ್ಷೆ ಪಾರದರ್ಶಕವಾಗಿರಲಿ’

ಮೇ ತಿಂಗಳಲ್ಲಿ ಸತತ ಮಳೆಯಿಂದ ಹಾನಿಯಾದ ಮನೆಗಳ ಸಮೀಕ್ಷೆಯನ್ನು ಪಾರದರ್ಶಕವಾಗಿ ನಡೆಸಿ, ಯಾವುದೇ ಲೋಪದೋಷವಿಲ್ಲದಂತೆ ಬಹಳ ಜಾಗೃತಿಯಿಂದ ವಿವರಗಳನ್ನು ಸಿದ್ಧಪಡಿಸಿ ಗುರುವಾರದೊಳಗೆ ಸಲ್ಲಿಸಬೇಕು. ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್ ಮಾರ್ಗಸೂಚಿ ಅನ್ವಯ ಶನಿವಾರದೊಳಗೆ ಕನಿಷ್ಠ ಪರಿಹಾರ ಹಣ ಪಾವತಿಮಾಡಿ, ಜಾಯಿಂಟ್ ಖಾತೆ ಸಮಸ್ಯೆ ಇರುವ ಮನೆಗಳ ಹಾನಿ ಪರಿಹಾರ ನಂತರ ಪಾವತಿಸಿ ಎಂದು ಸೂಚಿಸಿದರು.

ಮಕ್ಕಳ ಸ್ಥಳಾಂತರಕ್ಕೆ ಕ್ರಮವಹಿಸಿ

ಶಿಥಿಲಾವಸ್ಥೆಯಲ್ಲಿರುವ ಶಾಲಾ ಹಾಗೂ ಅಂಗನವಾಡಿಗಳನ್ನು ಗುರುತಿಸಬೇಕು. ಅಪಾಯಕಾರಿ ಕಟ್ಟಡಗಳಲ್ಲಿನ ಮಕ್ಕಳ ಸ್ಥಳಾಂತರಕ್ಕೆ ಕ್ರಮವಹಿಸಬೇಕು. ಹಾನಗಲ್ ಸೇರಿದಂತೆ ವಿವಿಧೆಡೆ ರಸ್ತೆಗಳ ಮೇಲೆ ಬೀಳುವ ಮರಗಳನ್ನು ಗುರುತಿಸಿ ಅಗತ್ಯ ಮುಂಜಾಗ್ರತೆ ವಹಿಸಬೇಕು. ಕಾಲಕಾಲಕ್ಕೆ ಕುಮದ್ವತಿ ಹಾಗೂ ಧರ್ಮಾ ಬ್ಯಾರೇಜ್‍ಗಳಲ್ಲಿ ನೀರಿನ ಪ್ರಮಾಣ ಪರಿಶೀಲಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.