ಭಾನುವಾರ, ಜೂನ್ 26, 2022
21 °C
ಮುಖ್ಯಮಂತ್ರಿಗೆ ಕೂಡಲಸಂಗಮ ಸ್ವಾಮೀಜಿ ಆಗ್ರಹ

ಪಂಚಮಸಾಲಿಗಳು ನವಣಕ್ಕಿ ಅನ್ನ ತಿನಿಸವ್ರೆ, ಮೀಸಲಾತಿ ಕೊಟ್ಟು ಋಣ ತೀರಿಸಿ: ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಪಂಚಮಸಾಲಿ ಸಮಾಜದವರು ನವಣಕ್ಕಿ ಅನ್ನ ತಿನಿಸವ್ರೆ, ರೊಟ್ಟಿ ಕೊಟ್ಟವ್ರೆ’ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಿಸೆಂಬರ್‌ನಲ್ಲಿ ಶಿಗ್ಗಾವಿಗೆ ಬಂದಾಗ ಕಣ್ಣೀರು ಹಾಕಿದ್ದರು. ನವಣಕ್ಕಿ ಅನ್ನದ ಋಣ ತೀರಿಸಲು ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಿ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಬೊಮ್ಮಾಯಿ ಅವರು ಆರಂಭದಲ್ಲಿ ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಮಾರ್ಚ್‌ 31ರೊಳಗೆ ಮೀಸಲಾತಿ ಕಲ್ಪಿಸುವುದಾಗಿ ಮಾತು ಕೊಟ್ಟಿದ್ದರು. ಆದರೆ, ನುಡಿದಂತೆ ನಡೆದುಕೊಳ್ಳಲಿಲ್ಲ. ಕಳೆದೆರಡು ತಿಂಗಳಿಂದ ಬೊಮ್ಮಾಯಿ ಅವರ ಮಾತಿನಲ್ಲಿ ಸ್ಪಷ್ಟತೆ ಕಾಣುತ್ತಿಲ್ಲ. ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಟ್ಟರೆ ನಿಮ್ಮ ರಾಜಕೀಯ ಭವಿಷ್ಯಕ್ಕೆ ಹಿನ್ನಡೆಯಾಗುತ್ತದೆಯೇ? ಯಾರಾದರೂ ಕೊಡಬೇಡಿ ಎಂದು ಒತ್ತಡ ಹಾಕುತ್ತಿದ್ದಾರೆಯೇ? ನಿಮ್ಮ ಮೌನಕ್ಕೆ ಕಾರಣವೇನು? ಎಂದು ಪ್ರಶ್ನಿಸಿದರು. 

ಬೊಮ್ಮಾಯಿ ಅವರು ಮೀಸಲಾತಿ ನೀಡುವ ದಿನಾಂಕವನ್ನು ಸ್ಪಷ್ಟವಾಗಿ ಹೇಳಬೇಕು. ಇಲ್ಲವೇ ನನ್ನನ್ನು ಕಾಡಬೇಡಿ, ಮೀಸಲಾತಿ ಕೊಡಲು ಕಷ್ಟವಾಗುತ್ತದೆ ಎಂಬುದನ್ನಾದರೂ ಹೇಳಬೇಕು. ನಾವು ದೊಡ್ಡ ಮಠ ಕಟ್ಟಿಕೊಡಿ ಎಂದು ಕೇಳುತ್ತಿಲ್ಲ, ನಮ್ಮ ಮಠಕ್ಕೆ ಅನುದಾನ ಕೊಡಿ ಎಂದು ಕೇಳುತ್ತಿಲ್ಲ, ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಮೀಸಲಾತಿ ಕೇಳುತ್ತಿದ್ದೇವೆ. ಬೊಮ್ಮಾಯಿಯವರ ಗೆಲುವಿನಲ್ಲಿ ಸಮಾಜದ ಪಾತ್ರ ದೊಡ್ಡದಿದೆ ಎಂದು ಹೇಳಿದರು. 

ಹಾವೇರಿಯಿಂದ ಚಾಲನೆ

ಮೇ 23ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಒಂದು ದಿನದ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದೆವು. ಮಳೆ ಅವಾಂತರದಿಂದ ಮುಂದೂಡಲಾಗಿದೆ. ಹಾವೇರಿಯಲ್ಲಿ ಮೇ 29ರಂದು ನಡೆಯುವ ಸಭೆಯಲ್ಲಿ ದಿನಾಂಕ ತಿಳಿಸುತ್ತೇವೆ. ಶಿಗ್ಗಾವಿಯ ಸಿಎಂ ಮನೆ ಮುಂದೆ ಧರಣಿ ಕೂರುವ ಮೂಲಕ ‘ಸತ್ಯಾಗ್ರಹ ಚಳವಳಿ’ಗೆ ಚಾಲನೆ ನೀಡುತ್ತೇವೆ ಎಂದರು. 

ಮೀಸಲಾತಿ ಮಠಾಧೀಶರಿಗಲ್ಲ

ಮೀಸಲಾತಿ ಬಗ್ಗೆ ಪಂಚಮಸಾಲಿ ಪೀಠಗಳ ಮಧ್ಯೆಯೇ ಭಿನ್ನಾಭಿಪ್ರಾಯವಿದೆಯಲ್ಲ ಎಂಬ ಪ್ರಶ್ನೆಗೆ, ‘ಆ ಸ್ವಾಮೀಜಿ (ಹರಿಹರ ಪೀಠದ ವಚನಾನಂದ ಸ್ವಾಮೀಜಿ) ಸುಖದ ಸುಪ್ಪತ್ತಿಗೆಯಲ್ಲಿದ್ದಾರೆ. ಅವರಿಗೆ ಮೀಸಲಾತಿ ಬೇಡದೇ ಇರಬಹುದು. ಮೀಸಲಾತಿ ರಾಜಕಾರಣಿಗಳಿಗಲ್ಲ, ಮಠಾಧೀಶರಿಗಲ್ಲ, ಸಮಾಜದ ಕಟ್ಟ ಕಡೆಯ ವ್ಯಕ್ತಿಗಾಗಿ ಬೇಕಿದೆ ಎಂದರು. ಮೂರನೇ ಪೀಠ ಉದಯದ ಬಗ್ಗೆ ಪ್ರತಿಕ್ರಿಯಿಸಿ, ‘ನನಗೆ ಯಾವ ಪೀಠವೂ ಗೊತ್ತಿಲ್ಲ. ನನ್ನ ಚಿತ್ತ ಮೀಸಲಾತಿಯತ್ತ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು