ಬುಧವಾರ, ಸೆಪ್ಟೆಂಬರ್ 22, 2021
22 °C
‘ಹ್ಯಾಟ್ರಿಕ್‌ ಗೆಲುವು’ ಸಾಧಿಸಿದ್ದ ಬಸವರಾಜ ಬೊಮ್ಮಾಯಿ ನೂತನ ಸಿ.ಎಂ

ಏಲಕ್ಕಿ ನಾಡಿಗೆ ‘ಮುಖ್ಯಮಂತ್ರಿ’ ಪಟ್ಟ: ಅಭಿಮಾನಿಗಳಿಂದ ಸಂಭ್ರಮಾಚರಣೆ

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಏಲಕ್ಕಿ ಕಂಪಿನ ನಾಡು’ ಶಿಗ್ಗಾವಿ–ಸವಣೂರ ಕ್ಷೇತ್ರದಲ್ಲಿ ‘ಹ್ಯಾಟ್ರಿಕ್‌ ಗೆಲುವು' ಸಾಧಿಸಿದ್ದ ಬಸವರಾಜ ಬೊಮ್ಮಾಯಿ ಅವರು ನಾಡಿನ ನೂತನ ಸಿ.ಎಂ. ಎಂದು ಘೋಷಣೆಯಾಗುತ್ತಿದ್ದಂತೆ ಜಿಲ್ಲೆಯಾದ್ಯಂತ ಹಬ್ಬದ ವಾತಾವರಣ ಕಳೆಗಟ್ಟಿದೆ. 

‘ಉತ್ತರ ಕರ್ನಾಟಕದ ಹೆಬ್ಬಾಗಿಲು’ ಎನಿಸಿರುವ ಹಾವೇರಿ ಜಿಲ್ಲೆ 24 ಆಗಸ್ಟ್‌ 1997ರಲ್ಲಿ ನೂತನ ಜಿಲ್ಲೆಯಾಗಿ ಉದಯವಾಯಿತು. 24 ವರ್ಷಗಳ ನಂತರ ಮೊದಲ ಬಾರಿಗೆ ಜಿಲ್ಲೆಗೆ ಸಿ.ಎಂ. ಸ್ಥಾನ ಸಿಕ್ಕಿದೆ. ಹೀಗಾಗಿ, ಜಿಲ್ಲೆಯ ಜನರು, ಬಿಜೆಪಿ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ, ಸಂಭ್ರಮಿಸಿದರು. 

ಮಾಜಿ ಮುಖ್ಯಮಂತ್ರಿ ಪುತ್ರ: ಮಾಜಿ ಮುಖ್ಯಮಂತ್ರಿ ಎಸ್‌.ಆರ್‌.ಬೊಮ್ಮಾಯಿ ಅವರ ಪುತ್ರನಾದ ಬಸವರಾಜ ಬೊಮ್ಮಾಯಿ ಜನತಾ ಪರಿವಾರದಿಂದ ರಾಜಕಾರಣ ಆರಂಭಿಸಿದರು. ನಂತರ ಬಿಜೆಪಿಗೆ ಸೇರ್ಪಡೆಯಾದರು. ಎರಡು ಬಾರಿ ವಿಧಾನ ಪರಿಷತ್‌ ಸದಸ್ಯರಾಗಿದ್ದ ಬೊಮ್ಮಾಯಿ ಅವರು ನಂತರ 2008, 2013 ಹಾಗೂ 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾವಿ–ಸವಣೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಬೊಮ್ಮಾಯಿ ಅವರು ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ.

2008ರಲ್ಲಿ ಬಿ.ಎಸ್‌.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ಹಾಗೂ ಜಗದೀಶ ಶೆಟ್ಟರ್‌ ಅವರ ಸಚಿವ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿ ಸೇವೆ ಸಲ್ಲಿಸಿ, ನಾಡಿನಾದ್ಯಂತ ಉತ್ತಮ ಹೆಸರು ಗಳಿಸಿದರು. 2018ರಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಗೃಹ ಸಚಿವ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ಅವರಿಗೆ ಆಪ್ತರಾಗಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ‘ಮುಖ್ಯಮಂತ್ರಿ ಪಟ್ಟ’ ಸಿಕ್ಕಿರುವುದು ಜಿಲ್ಲೆಯ ಜನತೆಗೆ ಅಪಾರ ಸಂತೋಷ ನೀಡಿದೆ. 

ನೀರಾವರಿ ಕ್ಷೇತ್ರದಲ್ಲಿ ಕ್ರಾಂತಿ: ಬಸವರಾಜ ಬೊಮ್ಮಾಯಿ ಅವರು ಜಲಸಂಪನ್ಮೂಲ ಸಚಿವರಾಗಿ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯಲ್ಲಿ ಹಲವು ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಬ್ಯಾಡಗಿ ತಾಲ್ಲೂಕಿನ ಆಣೂರು ಮತ್ತು ಸುತ್ತಮುತ್ತಲಿನ 30 ಕೆರೆಗಳನ್ನು ತುಂಬಿಸುವ ಯೋಜನೆಗೆ ₹212 ಕೋಟಿ ಯೋಜನಾ ವರದಿಗೆ ತಾತ್ವಿಕ ಅನುಮೋದನೆ ಸಿಕ್ಕಿದೆ.

ಹಾನಗಲ್‌ ತಾಲ್ಲೂಕಿನ ಬಾಳಂಬೀಡ ಮತ್ತು ಸುತ್ತಮುತ್ತಲಿನ 162 ಕೆರೆಗಳನ್ನು ವರದಾ ನದಿಯಿಂದ ತುಂಬಿಸುವ ಯೋಜನೆಗೆ ಸರ್ಕಾರದಿಂದ ₹386 ಕೋಟಿ ಕಾಮಗಾರಿ ಚಾಲ್ತಿಯಲ್ಲಿದೆ. ರಾಣೆಬೆನ್ನೂರು ತಾಲ್ಲೂಕಿನ ದೊಡ್ಡಕೆರೆ ತುಂಬಿಸುವ ಯೋಜನೆ ಮುಕ್ತಾಯ ಹಂತದಲ್ಲಿದೆ. ಅಸುಂಡಿ ಇತರ 17 ಕೆರೆ ತುಂಬಿಸುವ ಯೋಜನೆ ಪ್ರಗತಿಯಲ್ಲಿದೆ. ಹಿರೇಕೆರೂರು ತಾಲ್ಲೂಕಿನ ಗುಡ್ಡದಮಾದಾಪುರ ಏತ ನೀರಾವರಿ ಯೋಜನೆ ಪೂರ್ಣಗೊಂಡಿದ್ದು, ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ದುರ್ಗಾದೇವಿ ಮತ್ತು ಬಹುಗ್ರಾಮ ಕೆರೆ ತುಂಬುವ ಯೋಜನೆ ಪ್ರಗತಿಯಲ್ಲಿದೆ. ಶಿಗ್ಗಾವಿ–ಸವಣೂರು ಏತ ನೀರಾವರಿ ಯೋಜನೆಗೆ ಬೊಮ್ಮಾಯಿ ಅವರ ಕೊಡುಗೆ ಅಪಾರವಾಗಿದೆ. 

ಅಭಿವೃದ್ಧಿ ಪರ್ವ: ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆ, ಬಾಡಾದಲ್ಲಿ ಕನಕದಾಸರ ಅರಮನೆ, ಸವಣೂರಿನಲ್ಲಿ ನವಾಬರ ಅರಮನೆ ಮರುಸೃಷ್ಟಿ, ಕಾಗಿನೆಲೆಯಲ್ಲಿ ಕನಕ ಉದ್ಯಾನ, ಬಂಕಾಪುರದಲ್ಲಿ ನವಿಲುಧಾಮ ಅಭಿವೃದ್ಧಿ, ಶಿಗ್ಗಾವಿಯಲ್ಲಿ ಜವಳಿ ಪಾರ್ಕ್‌ ಸ್ಥಾಪನೆ, ಬಂಕಾಪುರದಲ್ಲಿ ಪಾಲಿಟೆಕ್ನಿಕ್‌ ಕಾಲೇಜು ಸ್ಥಾಪನೆ, ಶಿಶುನಾಳದ ಷರೀಫ ಪುಣ್ಯಭೂಮಿ ಅಭಿವೃದ್ಧಿ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಜಿಲ್ಲೆಗೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. 

ಕ್ಷೇತ್ರದಿಂದ ಇಬ್ಬರಿಗೆ ‘ಮುಖ್ಯಮಂತ್ರಿ’ ಯೋಗ

ಶಿಗ್ಗಾವಿ-ಸವಣೂರ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದ ಎಸ್.ನಿಜಲಿಂಗಪ್ಪ ಅವರು  ಮುಖ್ಯಮಂತ್ರಿಯಾಗಿದ್ದರು. ಇದೇ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಬಸವರಾಜ ಬೊಮ್ಮಾಯಿ ಅವರು ನಾಡಿನ ಸಿ.ಎಂ. ಪಟ್ಟ ಅಲಂಕರಿಸಿದ್ದಾರೆ.  

ಹೀಗಾಗಿ, ಈ ಕ್ಷೇತ್ರದಿಂದ ಗೆದ್ದ ಇಬ್ಬರು ಶಾಸಕರಿಗೆ ‘ಮುಖ್ಯಮಂತ್ರಿ’ ಸ್ಥಾನ ಒಲಿದಿರುವುದು ಕ್ಷೇತ್ರದ ಜನತೆಯ ಸಂತಸವನ್ನು ಹೆಚ್ಚಿಸಿದೆ. 

‘ವಾತ್ಸಲ್ಯ’ ಯೋಜನೆ ಜಾರಿ

ಕೋವಿಡ್‌ ಮೂರನೇ ಅಲೆ ಬರುವ ಮುನ್ನ ಜಿಲ್ಲೆಯ 4.7 ಲಕ್ಷ ಮಕ್ಕಳ ಆರೋಗ್ಯ ತಪಾಸಣೆ ಮಾಡುವ ‘ವಾತ್ಸಲ್ಯ’ಯೋಜನೆಯನ್ನು ರಾಜ್ಯದಲ್ಲೇ ಮೊದಲ ಬಾರಿಗೆ ಜಾರಿಗೆ ತರಲಾಗಿದ್ದು, ಈಗಾಗಲೇ ಶೇ 90ರಷ್ಟು ಪ್ರಗತಿಯಾಗಿದೆ. ಇದು ಬಸವರಾಜ ಬೊಮ್ಮಾಯಿ ಅವರ ‘ಕನಸಿನ ಕೂಸು’ ಎನ್ನುತ್ತಾರೆ ಜಿ.ಪಂ. ಸಿಇಒ ಮೊಹಮ್ಮದ್‌ ರೋಶನ್‌. 

ಹಾವೇರಿಯಲ್ಲಿ ₹365 ಕೋಟಿ ವೆಚ್ಚದ ‘ಮೆಡಿಕಲ್‌ ಕಾಲೇಜು’ ಸ್ಥಾಪನೆ, ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸಿ ಮೇಲ್ದರ್ಜೆಗೇರಿಸಿ, ಆರೋಗ್ಯ ವ್ಯವಸ್ಥೆಗೆ ಕಾಯಕಲ್ಪ ಕಲ್ಪಿಸಿದ್ದಾರೆ ಬಸವರಾಜ ಬೊಮ್ಮಾಯಿ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು