ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿಯ ಸರ್ವಾಂಗೀಣ ಪ್ರಗತಿಗೆ ಕ್ರಮ: ಬಿ.ಸಿ.ಪಾಟೀಲ

ಜಿಲ್ಲಾಡಳಿತದಿಂದ ಕೊರೊನಾ ವಾರಿಯರ್‌ಗಳಿಗೆ ಸನ್ಮಾನ: ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿಕೆ
Last Updated 15 ಆಗಸ್ಟ್ 2021, 13:13 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯವರೇ ಆದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿರುವುದು ಅಭಿಮಾನದ ಸಂಗತಿ. ಅವರ ನೇತೃತ್ವದಲ್ಲಿ ಹಾವೇರಿ ಜಿಲ್ಲೆಯ ಸರ್ವಾಂಗೀಣ ಪ್ರಗತಿಗೆ ಕ್ರಮ ಕೈಗೊಂಡು ‘ಮಾದರಿ ಜಿಲ್ಲೆ’ಯನ್ನಾಗಿ ರೂಪಿಸಲು ಶ್ರಮಿಸುತ್ತೇವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ 75ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರೆವೇರಿಸಿ ಅವರು ಮಾತನಾಡಿದರು.

ಎರಡನೇ ಬಾರಿ ಕೃಷಿ ಖಾತೆಯನ್ನು ನಿರ್ವಹಿಸಲು ಅವಕಾಶ ದೊರೆತಿರುವುದಲ್ಲದೇ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಿಮ್ಮೆಲ್ಲರ ಸೇವೆ ಮಾಡುವ ಸೌಭಾಗ್ಯ ಒದಗಿ ಬಂದಿದೆ. ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ತಕ್ಷಣ, ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಯೋಜನೆ ಜಾರಿಗೊಳಿಸಿದರು. ಕೃಷಿ ಪದವಿಗೆ ಶೇ 50ರಷ್ಟು ಸೀಟು ಕಾಯ್ದಿರಿಸಿ ಆದೇಶ ಮಾಡಲಾಗಿದೆ ಎಂದು ಹೇಳಿದರು.

ಆಹಾರ ಉತ್ಪಾದನೆ ಹೆಚ್ಚಳ:

ಜಿಲ್ಲೆಯ ಹನುಮನಮಟ್ಟಿ ಕೃಷಿ ಪ್ರಾದೇಶಿಕ ಕೇಂದ್ರದ ಅಭಿವೃದ್ಧಿಗೆ ₹5 ಕೋಟಿ ಹಣವನ್ನು ಒದಗಿಸಲಾಗಿದೆ. ಕೃಷಿಯ ಸಮಗ್ರ ಬೆಳೆವಣಿಗೆಗೆ ಎಲ್ಲ ಆದ್ಯತೆ ನೀಡಲಾಗುವುದು. ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ರಾಜ್ಯದಲ್ಲಿ 154 ಲಕ್ಷ ಮೆಟ್ರಿಕ್ ಟನ್ ಆಹಾರ ಪದಾರ್ಥವನ್ನು ಉತ್ಪಾದಿಸುವ ಮೂಲಕ ಶೇ 10ರಷ್ಟು ಹೆಚ್ಚು ಉತ್ಪಾದನೆ ಮಾಡಿದ್ದೇವೆ ಎಂದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್‌ನಿಧಿ ಯೋಜನೆಯಡಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ₹10 ಸಾವಿರದಂತೆ 53 ಲಕ್ಷ ರೈತರಿಗೆ ಸಹಾಯಧನ ನೀಡಿದ್ದೇವೆ. ಜಿಲ್ಲೆಯಲ್ಲಿ ₹10 ಕೋಟಿ ವೆಚ್ಚದಲ್ಲಿ 10 ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.

ಕೋವಿಡ್‌ ಎದುರಿಸಲು ಸನ್ನದ್ಧ:

ಜಿಲ್ಲೆಯಲ್ಲಿ ಕೋವಿಡ್ ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಆರ್.ಟಿ.ಪಿ.ಸಿ.ಆರ್. ಲ್ಯಾಬ್ ಸ್ಥಾಪನೆ, ಆಕ್ಸಿಜನ್ ಪ್ಲಾಂಟ್‌ಗಳ ಸ್ಥಾಪನೆ, ವಾತ್ಸಲ್ಯ ಕಾರ್ಯಕ್ರಮದಡಿ ಮಕ್ಕಳ ಆರೋಗ್ಯ ತಪಾಸಣೆ, ಮಕ್ಕಳಿಗಾಗಿ ಪ್ರತ್ಯೇಕ ವಾರ್ಡ್, ವೆಂಟಿಲೇಷನ್ ವ್ಯವಸ್ಥೆ ಮಾಡಲಾಗಿದೆ. ಬ್ರಿಟೀಷರಿಂದ ಮುಕ್ತಿಪಡೆದಂತೆ ಶಾಶ್ವತವಾಗಿ ಮಾಸ್ಕ್‌ನಿಂದ ಮುಕ್ತಿ ಪಡೆಯಲು ಕೋವಿಡ್ ನಿರ್ಮೂಲನೆಗೆ ಸ್ವಯಂ ಜಾಗೃತಿ ಅವಶ್ಯ ಎಂದು ಹೇಳಿದರು.

ಅತಿವೃಷ್ಟಿಯಿಂದ ಹಾನಿಯಾದ 1093 ಮನೆಗಳಿಗೆ ಒಟ್ಟಾರೆ ₹2.54 ಕೋಟಿ ಪರಿಹಾರ ಪಾವತಿಸಲಾಗಿದೆ. ಅತಿವೃಷ್ಟಿಯಿಂದ 1406 ಹೆಕ್ಟೇರ್ ತೋಟಗಾರಿಕೆ ಬೆಳೆ, 8134 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. ಸಮೀಕ್ಷೆ ಕಾರ್ಯ ಪೂರ್ಣಗೊಂಡ ನಂತರ ಪರಿಹಾರ ಪಾವತಿಸಲಾಗುವುದು ಎಂದರು.

ಆಕರ್ಷಕ ಪಥಸಂಚಲನ:

ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಸಶಸ್ತ್ರ ಮೀಸಲು ಪಡೆ, ನಾಗರಿಕ ಪಡೆ, ಅಬಕಾರಿ ಪಡೆ, ಗೃಹ ದಳ, ಅರಣ್ಯ ಪಡೆಗಳು ಪಥಸಂಚಲನ ಆರ್ಕಷಕವಾಗಿ ಜರುಗಿತು. ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಧ್ವಜವಂದನೆ ಸ್ವೀಕರಿಸಿದರು.

ಕೃಷಿ ಇಲಾಖೆ ಪ್ರಚಾರ ವಾಹನಕ್ಕೆ ಕೃಷಿ ಸಚಿವರಾದ ಬಿ.ಸಿ.ಪಾಟೀಲ ಅವರು ಚಾಲನೆ ನೀಡಿ, ಕರಪತ್ರಗಳನ್ನು ಬಿಡುಗಡೆಗೊಳಿಸಿದರು.

ವಿವಿಧ ಸಾಧಕರಿಗೆ ಸನ್ಮಾನ

ಸ್ವಾತಂತ್ರ್ಯಯೋಧ ಮಳ್ಳಪ್ಪ ಸಿದ್ದಪ್ಪ ಕೊಪ್ಪದ, ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಪ್ರಭಾಕರ ಎಸ್.ಮಂಟೂರ, ಪತ್ರಕರ್ತ ಮಾಲತೇಶ ಅಂಗೂರ, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ಸ್ನೇಹಾ ಹಾವೇರಿ, ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕಪಡೆದ ಸುಕನ್ಯಾ ಜಾಧವ ಹಾಗೂ ಕೊರೊನಾ ವಾರಿಯರ್ ಆಗಿ ಕಾರ್ಯನಿರ್ವಹಿಸಿದ ಆರೋಗ್ಯ ಇಲಾಖೆ, ಪೊಲೀಸ್, ಗ್ರಾಮೀಣಾಭಿವೃದ್ಧಿ, ಕಂದಾಯ, ಪೌರಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಾಲಾ ಶಿಕ್ಷಕರು ಸೇರಿದಂತೆ 46 ಜನರಿಗೆ ಪುಸ್ತಕ ಹಾಗೂ ಪ್ರಮಾಣಪತ್ರ ನೀಡಿ ಕೃಷಿ ಸಚಿವರು ಸನ್ಮಾನಿಸಿದರು.

ಶಾಸಕ ನೆಹರು ಓಲೇಕಾರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಯೋಗೇಶ್ವರ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ತಹಶೀಲ್ದಾರ್‌ ಗಿರೀಶ ಸ್ವಾದಿ ಇದ್ದರು.

ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ಮತ್ತು ಹಾಲು ಒಕ್ಕೂಟ ಸ್ಥಾಪಿಸುವ ಸಂಬಂಧ ಸಿಎಂ ಜೊತೆ ಚರ್ಚಿಸಿ, ಶೀಘ್ರ ಕ್ರಮ ಕೈಗೊಳ್ಳಲಾಗುವುದು.
– ಬಿ.ಸಿ.ಪಾಟೀಲ, ಕೃಷಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT