ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಕೆರೂರ: ಕಾರ್ಯಕರ್ತರೊಂದಿಗೆ ಗೆಲುವಿನ ಲೆಕ್ಕಾಚಾರ

ಭಾರಿ ಮಳೆ ಸುರಿದು ನಿಂತ ಅನುಭವ– ಬಿ.ಸಿ. ಪಾಟೀಲ
Last Updated 6 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಹಿರೇಕೆರೂರ: ನಾಲ್ಕನೇಗೆಲುವಿನ ನಿರೀಕ್ಷೆಯಲ್ಲಿರುವ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ಅವರು ಇಲ್ಲಿನ ತಮ್ಮ ನಿವಾಸ 'ಸೇವಕ'ದಲ್ಲಿ ಉಪಚುನಾವಣೆ ಮತದಾನದ ಬಗ್ಗೆ ಲೆಕ್ಕಾಚಾರ ಮಾಡುತ್ತಾ ಕುಟುಂಬದ ಸದಸ್ಯರೊಂದಿಗೆ ನಿರಾಳ ಭಾವದಿಂದ ಇರುವುದು ಶುಕ್ರವಾರ ಕಂಡು ಬಂದಿತು.

ಬಿಳಿ ಪಂಚೆ, ಶರ್ಟ್ ಹಾಗೂ ಹಣೆಗೆ ವಿಭೂತಿ ಧರಿಸಿಕೊಂಡು ಕುಳಿತಿದ್ದ ಬಿ.ಸಿ.ಪಾಟೀಲ, ಮೊಬೈಲ್ ಕರೆ ಸ್ವೀಕರಿಸುತ್ತಾ ಕಾರ್ಯಕರ್ತರಿಂದ ಮತದಾನ ಮಾಹಿತಿ ಪಡೆಯುವುದು, ಬಂದ ಕಾರ್ಯಕರ್ತರೊಂದಿಗೆ ಮತಗಳನ್ನು ಕೂಡಿಸುವುದು, ತಮಗೆ ಬರಬಹುದಾದ ಮತಗಳನ್ನು ಖಚಿತಪಡಿಸಿಕೊಳ್ಳುತ್ತಿರುವುದು ಈ ದಿನದ ಪ್ರಮುಖ ಕಾರ್ಯವಾಯಿತು.

'ಪ್ರಜಾವಾಣಿ' ಜೊತೆಗೆ ತಮ್ಮ ಅನಿಸಿಕೆ ಹಂಚಿಕೊಂಡ ಬಿ.ಸಿ.ಪಾಟೀಲ, 'ಇಂದಿಗೆ ನಾನು ರಾಜೀನಾಮೆ ನೀಡಿ 5 ತಿಂಗಳಾಯಿತು. ಬಿಜೆಪಿ ಸೇರಿ 21 ದಿನಗಳು ಕಳೆದವು. ಈ ದಿನ ಭಾರಿ ಮಳೆ ಸುರಿದು ನಿಂತ ಅನುಭವವಾಗುತ್ತಿದೆ. ಉಪ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಅತ್ಯಂತ ಉತ್ಸುಕತೆಯಿಂದ ಕೆಲಸ ಮಾಡಿದರು. ಯಾವುದೇ ಗುಂಪುಗಾರಿಕೆ ಮಾಡಲಿಲ್ಲ, ಯು.ಬಿ.ಬಣಕಾರ ಗುಂಪು, ಬಿ.ಸಿ.ಪಾಟೀಲ ಗುಂಪು ಎನ್ನದೇ ಎಲ್ಲರೂ ಒಟ್ಟಾಗಿ ಬಿಜೆಪಿ ಗೆಲುವಿಗೆ ಶ್ರಮವಹಿಸಿದ್ದಾರೆ. ಹಾಗಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ' ಎಂದರು.

'ನನ್ನ ಮತ್ತು ಯು.ಬಿ.ಬಣಕಾರ ಮಧ್ಯೆ ವಿರಸ ತಂದೊಡ್ಡಬೇಕೆಂದು ಬಹಳಷ್ಟು ಜನ ಪ್ರಯತ್ನಿಸಿದರು. ಯಾರೂ ಯಶಸ್ವಿಯಾಗಲಿಲ್ಲ, ನಾವಿಬ್ಬರೂ ಹೊಂದಿಕೊಂಡು ಚುನಾವಣೆ ಮಾಡಿರುವುದು ದೊಡ್ಡ ಗೆಲುವಿಗೆ ಕಾರಣವಾಗಲಿದೆ. ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳು, ಬಿಜೆಪಿ ತತ್ವ-ಸಿದ್ಧಾಂತಗಳನ್ನು ಜನತೆ ಒಪ್ಪಿಕೊಂಡು ಬಹಳ ಪ್ರೀತಿಯಿಂದ ಬಿಜೆಪಿ ಪರವಾಗಿ ಮತದಾನ ಮಾಡಿದ್ದಾರೆ. ಹಾಗಾಗಿ ನನ್ನ ಪರವಾಗಿ ಶ್ರಮಿಸಿದ ಎಲ್ಲರಿಗೂ ಚಿರಋಣಿ' ಎಂದು ಹೇಳಿದರು.

'ಛಲ ಇರಬೇಕು, ಛಲ ಸಾಧಿಸಲು ತ್ಯಾಗ ಮಾಡಬೇಕು. ಬದುಕು ನಿಂತ ನೀರಾಗಬಾರದು, ನಮ್ಮ ಹೆಜ್ಜೆ ಗುರುತು ಬಿಟ್ಟು ಹೋಗುವಂತಿರಬೇಕು. ಆಗುವುದಿಲ್ಲ ಎಂಬ ಮಾತು ಬೇಡ, ಸಾಧಿಸುವ ಛಲ ಇದ್ದರೆ ಎಲ್ಲವೂ ಸಾಧ್ಯವಿದೆ. ಆತ್ಮಸ್ಥೈರ್ಯ ಇರಬೇಕು. ಎಲ್ಲವನ್ನೂ ಚಾಲೆಂಜ್ ಆಗಿ ತೆಗೆದುಕೊಂಡಿದ್ದೇನೆ’ ಎಂದು ವಿಶ್ವಾಸದ ನುಡಿಗಳನ್ನಾಡಿದರು.

ಪೊಲೀಸ್ ವೃತ್ತಿ, ಸಿನಿಮಾ ಹಾಗೂ ರಾಜಕೀಯ ಬದುಕು ಕಂಡಿದ್ದೇನೆ. ರಾಜಕೀಯಕ್ಕೆ ಬರುತ್ತೇನೆ ಅಂದುಕೊಂಡಿರಲಿಲ್ಲ, ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಪೊಲೀಸ್ ಕೆಲಸ ಬಿಟ್ಟು ಬಂದೆ, ಆಗ ರಾಜಕೀಯ ಪ್ರವೇಶವಾಯಿತು. 3 ಬಾರಿ ಆಯ್ಕೆಯಾದರೂ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿತು. 38 ವರ್ಷಗಳಿಂದ ತಾಲ್ಲೂಕಿಗೆ ಸಚಿವ ಸ್ಥಾನ ಸಿಗದೇ ಅನ್ಯಾಯವಾಗಿತ್ತು. ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕನಾಗಿದ್ದರೂ ಕಾಂಗ್ರೆಸ್ ನನ್ನನ್ನು ಕಡೆಗಣಿಸಿತು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದೆ. ಈಗ ಬಿಜೆಪಿ ಸೇರಿದಾಗ ಭಾರಿ ಬೆಂಬಲ ವ್ಯಕ್ತವಾಗಿದೆ' ಎಂದು ತಾವು ನಡೆದು ಬಂದ ಹಾದಿಯನ್ನು ಬಿ.ಸಿ.ಪಾಟೀಲ ವಿವರಿಸಿದರು.

'ಕಾರ್ಯಕರ್ತರೊಂದಿಗೆ ಚರ್ಚಿಸುವುದೇ ಇಡೀ ದಿನ ಕಾಯಕವಾಗಿದೆ. ಕುಟುಂಬದ ಸದಸ್ಯರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುತ್ತಿದ್ದೇನೆ. ನಾಳೆ (ಶನಿವಾರ) ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ತೆರಳುತ್ತೇನೆ' ಎಂದು ತಿಳಿಸಿದರು.

ಪತ್ನಿ ವನಜಾ ಪಾಟೀಲ, ಪುತ್ರಿಯರಾದ ಸೌಮ್ಯ ಪಾಟೀಲ, ಸೃಷ್ಟಿ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT