ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ

ಸಲೀಂ–ಹಾವೇರಿಗೂ ಅವಿನಾಭಾವ ಸಂಬಂಧ: ಮಾಜಿ ಸಚಿವ ಎಚ್‌.ಆಂಜನೇಯ ಹೇಳಿಕೆ
Last Updated 5 ಡಿಸೆಂಬರ್ 2021, 12:52 IST
ಅಕ್ಷರ ಗಾತ್ರ

ಹಾವೇರಿ: ‘ದಿನಸಿ ಬೆಲೆ, ತೈಲ ಬೆಲೆ, ಅಡುಗೆ ಅನಿಲದ ಬೆಲೆ ಗಗನಮುಖಿಯಾಗಿದ್ದು ಬಡಜನರು ಬದುಕುವುದೇ ಕಷ್ಟವಾಗಿದೆ. ‘ಅಚ್ಛೇ ದಿನ್‌’ ತರುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ವಚನಭ್ರಷ್ಟರಾಗಿದ್ದಾರೆ. ಬಿಜೆಪಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ’ ಎಂದು ಮಾಜಿ ಸಚಿವ ಎಚ್‌.ಆಂಜನೇಯ ಟೀಕಿಸಿದರು.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿ, ‘ಮಳೆ ಮತ್ತು ನೆರೆಯಿಂದ ಅರ್ಧ ಕರ್ನಾಟಕ ಮುಳುಗಿದೆ. ನೆರೆ ಸಂತ್ರಸ್ತರಿಗೆ ಸರಿಯಾಗಿ ಪರಿಹಾರ ಸಿಕ್ಕಿಲ್ಲ. ಕೋವಿಡ್‌ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಉದ್ಯೋಗ ಕಳೆದುಕೊಂಡವರಿಗೆ ಮತ್ತೆ ಕೆಲಸಗಳು ಸಿಗುತ್ತಿಲ್ಲ. ಬಿಜೆಪಿ ದುರಾಡಳಿತದಿಂದ ಬೇಸತ್ತ ಜನರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು.

ವಿಧಾನ ಪರಿಷತ್‌ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಲೀಂ ಅಹಮದ್‌ ಅವರಿಗೂ ಹಾವೇರಿಗೂ ಅವಿನಾಭಾವ ಸಂಬಂಧವಿದೆ. ಅವರು ಲೋಕಸಭಾ ಚುನಾವಣೆಗೆ ಎರಡು ಬಾರಿ ಸ್ಪರ್ಧಿಸಿ ಅಲ್ಪ ಅಂತರದಿಂದ ಹಿನ್ನಡೆ ಅನುಭವಿಸಿದರು. ಅವರು ಗೆದ್ದಿದ್ದರೆ ಕೇಂದ್ರ ಮಂತ್ರಿಯಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದರು ಎಂದು ಹೇಳಿದರು.

ಕ್ರಿಯಾಶೀಲ ಕಾರ್ಯಾಧ್ಯಕ್ಷ:

ದಿಟ್ಟ ಹೋರಾಟಗಾರ, ಜನಪರ ಕಾಳಜಿ ಇರುವ ನಾಯಕರಾದ ‌ಸಲೀಂ ಅಹಮದ್‌ ಅವರು ಎರಡು ಬಾರಿ ವಿಧಾನ ಪರಿಷತ್‌ ಸದಸ್ಯರಾಗಿ, ಪರಿಷತ್‌ ಮುಖ್ಯ ಸಚೇತಕರಾಗಿ, ಕೆಪಿಸಿಸಿಯ ಕ್ರಿಯಾಶೀಲ ಕಾರ್ಯಾಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಅವರ ಗೆಲುವಿನಲ್ಲಿ ಯಾವುದೇ ಸಂಶಯವಿಲ್ಲ. ದಾಖಲೆಯ ಗೆಲುವು ಸಿಗಲಿ ಎಂದು ಆಶಿಸುತ್ತೇನೆ. ಗ್ರಾ.ಪಂ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರ ಸಮಸ್ಯೆಗೆ ಸ್ಪಂದಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‌ಉದ್ಯೋಗ ಖಾತ್ರಿ ಇಲ್ಲದಿದ್ದರೆ ಹಳ್ಳಿಗಾಡಿನ ಬಡಜನರಿಗೆ ಕೋವಿಡ್‌ ಕಾಲದಲ್ಲಿ ತೀವ್ರ ತೊಂದರೆಯಾಗುತ್ತಿತ್ತು. ಜನರು ಗುಳೇ ಹೋಗುವುದನ್ನು ತಪ್ಪಿಸಿ, ದುಡಿಯುವ ಕೈಗಳಿಗೆ ಕೆಲಸ ಮತ್ತು ಹಳ್ಳಿಗಳ ಅಭಿವೃದ್ಧಿಗೆ ಕೊಡುಗೆ ನೀಡಲು ಕಾರಣವಾದ ಉದ್ಯೋಗ ಖಾತ್ರಿ ಕಾಂಗ್ರೆಸ್‌ ಸರ್ಕಾರದ ಯೋಜನೆ. ಅನ್ನಭಾಗ್ಯ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮ ರೂಪಿಸಿದಸಿದ್ದರಾಮಯ್ಯನವರ ಆಡಳಿತ ‘ಸುವರ್ಣಯುಗ’ ಎಂದು ಗುಣಗಾನ ಮಾಡಿದರು.

ಕ್ರಾಂತಿಕಾರಕ ಶಾಸನ:

ಗ್ರಾಮಸಭೆಗಳ ಮೂಲಕ ಫಲಾನುಭವಿ ಆಯ್ಕೆ ನಡೆಯಬೇಕು ಎಂದು ಕಾಂಗ್ರೆಸ್ ಸರ್ಕಾರ ಕ್ರಾಂತಿಕಾರಕ ಕಾಯ್ದೆ ಜಾರಿಗೊಳಿಸಿತು. ರಾಜೀವ್‌ಗಾಂಧಿ ಅವರು ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಜಾರಿಗೆ ತಂದರು. ಭೂ ಮಾಲೀಕರು ಮತ್ತು ಶ್ರೀಮಂತರ ಮನೆಯಲ್ಲಿ ಜೀತಕ್ಕಿದ್ದ ಮಂದಿಗೂ ಅಧಿಕಾರ ಸಿಗುವಂತೆ ಮಾಡಿದರು. ಆದರೆ, ಬಿಜೆಪಿ ಸರ್ಕಾರ ಗ್ರಾಮ ಪಂಚಾಯಿತಿಗಳ ಅಧಿಕಾರವನ್ನು ಮೊಟಕುಗೊಳಿಸುತ್ತಿದ್ದಾರೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT