ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ ಆಡಳಿತದಲ್ಲಿ ಕೊಲೆ, ಸುಲಿಗೆ ಹೆಚ್ಚಳ: ವಿರೂಪಾಕ್ಷಪ್ಪ ಬಳ್ಳಾರಿ

ಅಂಜಲಿ ಹತ್ಯೆಗೆ ಖಂಡನೆ; ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಬಿಜೆಪಿ ಆಗ್ರಹ
Published 18 ಮೇ 2024, 14:21 IST
Last Updated 18 ಮೇ 2024, 14:21 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಹಾವೇರಿ: ‘ಕಾಂಗ್ರೆಸ್ ಸರ್ಕಾರ ಕಳೆದ ಒಂದು ವರ್ಷದಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಕೇವಲ ಅಲ್ಪಸಂಖ್ಯಾತರ ಹಾಗೂ ಸಮಾಜಘಾತುಕ ವ್ಯಕ್ತಿಗಳ ಓಲೈಕೆ ಮಾಡುತ್ತಿದೆ. ಇತ್ತೀಚೆಗೆ ರಾಜ್ಯದಲ್ಲಿ ಸರಣಿ ಕೊಲೆಗಳು ನಡೆದರೂ ಕಾಂಗ್ರೆಸ್ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ದೂರಿದರು.

ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಶನಿವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. 

ಬರ ಪರಿಹಾರದ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ತಾರತಮ್ಯ ಮಾಡುತ್ತಿದೆ. ಅಲ್ಲದೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೂ ರಾಜ್ಯ ಸರ್ಕಾರ ಗಭೀರವಾಗಿ ಪರಿಗಣಿಸುತ್ತಿಲ್ಲ. ಇದೇ ರೀತಿ ಮುಂದುವರಿದರೆ ಕರ್ನಾಟಕ ರಾಜ್ಯ ದೇಶದಾದ್ಯಂತ ಗೂಂಡಾ ರಾಜ್ಯವೆಂದು ಕುಖ್ಯಾತಿ ಪಡೆಯತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯ ಉಪಾಧ್ಯಕ್ಷ ಬಸವರಾಜ ಕೇಲಗಾರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಕೊಲೆ, ಸುಲಿಗೆ, ದರೋಡೆ ಮಾಡುವವರಿಗೆ, ಭ್ರಷ್ಟಾಚಾರಿಗಳಿಗೆ ಪುಷ್ಟಿ ಸಿಕ್ಕಂತಾಗಿದೆ. ಮಹಿಳೆಯರ ಮೇಲೆ ಸಾಲು– ಸಾಲು ಅತ್ಯಾಚಾರ ನಡೆದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಅಂಜಲಿ ಅಂಬಿಗೇರ ಹತ್ಯೆ ನಡೆದಿರುವುದು ಈ ನೆಲದ ಕಾನೂನು ಸುವ್ಯವಸ್ಥೆ ಹಾಳಾಗಿರುವುದಕ್ಕೆ ಸಾಕ್ಷಿ. ಪೊಲೀಸ್ ಇಲಾಖೆಯನ್ನು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಬಿಡದೇ ಇಲಾಖೆಯನ್ನು ದುರಪಯೋಗ ಪಡಿಸಿಕೊಳ್ಳುತ್ತಿದೆ. ರಾಜ್ಯ ಸರ್ಕಾರ ಸಮಾಜದಲ್ಲಿ ಮಹಿಳೆಯರ ರಕ್ಷಣೆ ಮಾಡುವುದರಲ್ಲಿ ವಿಫಲವಾಗಿದೆ. ಇದೇ ರೀತಿ ಅವ್ಯವಸ್ಥೆ ಮುಂದುವರಿದರೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣವಾಗಿ ನೆಲಕಚ್ಚಿ ರಾಜ್ಯದಲ್ಲಿ ಅರಾಜಕೀಯತೆ ಉಂಟಾಗುತ್ತದೆ ಎಂದರು.

ಮಹಿಳೆಯರಿಗೆ ರಕ್ಷಣೆ ಇಲ್ಲ: ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿದ್ಯಾ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಇಂದು ಮಹಿಳೆಯರಿಗೆ ರಕ್ಷಣೆ ಇಲ್ಲದಾಗಿದೆ. ಪ್ರತಿನಿತ್ಯ ಮಾಧ್ಯಮದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರದ ಪ್ರಕರಣಗಳೇ ವರದಿಯಾಗುತ್ತಿವೆ. ಮಹಿಳೆಯರ ರಕ್ಷಣೆ ಮಾಡುವುದರಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಇದ್ದರೆ ಅಧಿಕಾರದಿಂದ ಕೆಳಗೆ ಇಳಿಯಬೇಕು. ಇಲ್ಲದಿದ್ದರೆ ಮುಂದೆ ರಾಜ್ಯದ ಮಹಿಳೆಯರು ಸರ್ಕಾರದ ವಿರುದ್ಧ ಧಂಗೆ ಏಳಬೇಕಾಗುತ್ತದೆ ಎಂದು ಎಚ್ಚರಿಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಉಪಾಧ್ಯಕ್ಷ ಸುರೇಶ ಹೋಸಮನಿ, ಬಸವರಾಜ ಹಾದಿಮನಿ, ಕಿರಣ ಕೋಣನವರ, ಪ್ರಭು ಹಿಟ್ನಳ್ಳಿ, ನಿರಂಜನ ಹೇರೂರ, ರುದ್ರೇಶ ಚಿನ್ನಣ್ಣನವರ, ಶಿವಕುಮಾರ ತಿಪ್ಪಶೆಟ್ಟಿ, ಶಿವಯೋಗಿ ಶಿರೂರ, ರಾಜಶೇಖರ ಬಳ್ಳಾರಿ, ಬಿ.ಎನ್. ಮತ್ತೂರ, ರವೀಂದ್ರ ಅಂಗಡಿ, ವಿಜಯಕುಮಾರ ಚಿನ್ನಿಕಟ್ಟಿ, ರತ್ನ ಭೀಮಕ್ಕನವರ, ಶ್ರೀದೇವಿ ರೆಡ್ಡಿ, ಸುಜಾತಾ ಆರಾದ್ಯಮಠ, ಸರೋಜ ಉಳ್ಳಾಗಡ್ಡಿ, ಕಲಾವತಿ ಬಡಿಗೇರ, ಅಕ್ಕಮಹಾದೇವಿ ಹರ್ತಿ, ರೇಣುಕಾ ಪಾಟೀಲ, ಇಂದ್ರಾ ಮಲ್ಲನಗೌಡ್ರ, ಭಾಗ್ಯಶ್ರೀ ಮೋರೆ, ಚದ್ರಕಲಾ ಕೊಟಗಿ, ಅನೀತಾ ಹಬೀಬ, ಸುಮಂಗಲ ಚನ್ನವೀರಗೌಡ್ರ, ಪುರ್ಣಿಮಾ ನಿಡಗುಂದಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಅತ್ಯಾಚಾರಿಗಳ ಹಾಗೂ ದರೋಡೆಕೋರರಿಗೆ ಕರ್ನಾಟಕ ತವರು ಮನೆಯಾಗಿದೆ. ಸರ್ಕಾರ ಆರೋಪಿಗಳನ್ನು ಮನೆಯ ಮಕ್ಕಳಂತೆ ಪೋಷಿಸುತ್ತಿದೆ. ಸಿದ್ದರಾಮಯ್ಯ ಮತ್ತು ಪರಮೇಶ್ವರ್‌ ಇಬ್ಬರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು 

- ಗವಿಸಿದ್ದಪ್ಪ ದ್ಯಾಮಣ್ಣವರ ಬಿಜೆಪಿ ಮುಖಂಡ

‘ನಾಲ್ಕು ತಿಂಗಳಲ್ಲಿ 430 ಕೊಲೆ’

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂತೋಷ ಆಲದಕಟ್ಟಿ ಮಾತನಾಡಿ ‘ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಕಳೆದ ನಾಲ್ಕು ತಿಂಗಳಲ್ಲಿ 430 ಕೊಲೆ ನಡೆದಿವೆ. ಅಲ್ಲದೆ 198 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಈ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ರಾಜ್ಯದಲ್ಲಿ ಮನೆಯಿಂದ ಹೊರಬಂದ ಮಹಿಳೆ ಸುರಕ್ಷಿತವಾಗಿ ಮನೆ ಸೇರುತ್ತಾರೆ ಎಂಬ ನಂಬಿಕೆ ಇಲ್ಲ. ಎರಡು ತಿಂಗಳ ಹಿಂದೆ ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರ ನಡೆದರೆ ಜಿಲ್ಲೆಯಲ್ಲಿರುವ ಯಾವೊಬ್ಬ ಕಾಂಗ್ರೆಸ್ ಸಚಿವರು ಶಾಸಕರು ಹಾಗೂ ಮುಖಂಡರು ಅತ್ಯಾಚಾರವನ್ನು ಖಂಡಿಸಿ ಮಾತನಾಡಲಿಲ್ಲ. ಅಂಜಲಿ ಅಂಬಿಗೇರ ಹತ್ಯೆ ನಡೆದಾಗಲೂ ಪೋಲಿಸ್ ಇಲಾಖೆ ಆರೋಪಿಯನ್ನು ತಕ್ಷಣವೇ ಬಂಧಿಸಲು ವಿಫಲವಾಗಿದ್ದು ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹಾಳಗಿರುವುದಕ್ಕೆ ಹಿಡಿದ ಕೈಗನ್ನಡಿಯಾಗಿದೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT