ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

162 ಗ್ರಾ.ಪಂ.ಗಳಲ್ಲಿ ಬಿಜೆಪಿ ಪ್ರಾಬಲ್ಯ

ಜನಸೇವಕ ಸಮಾವೇಶ ನಾಳೆ: ಸಿದ್ದರಾಜ ಕಲಕೋಟಿ ಹೇಳಿಕೆ
Last Updated 9 ಜನವರಿ 2021, 15:18 IST
ಅಕ್ಷರ ಗಾತ್ರ

ಹಾವೇರಿ: ‘ಜಿಲ್ಲೆಯ 209 ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ 162 ಗ್ರಾಮ ಪಂಚಾಯಿತಿಗಳು ಬಿಜೆಪಿಯ ವಶವಾಗಲಿವೆ. 1930 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಜಿಲ್ಲೆಯ ನಾಲ್ಕು ಗ್ರಾಮ ಪಂಚಾಯಿತಿಗಳು ಸಮಬಲ ಇವೆ. ಇವೂ ಕೂಡ ಬಿಜೆಪಿಯ ವಶವಾಗಲಿವೆ. ರಾಜ್ಯದ 86,183 ಸ್ಥಾನಗಳಲ್ಲಿ 45,746 ಸ್ಥಾನಗಳನ್ನು (ಶೇ 53) ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ. 5670 ಗ್ರಾಮ ಪಂಚಾಯಿತಿಗಳಲ್ಲಿ 3142 ಗ್ರಾ.ಪಂ.ಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ’ ಎಂದರು.

‘ಕಳೆದ 6 ತಿಂಗಳಿಂದ ನಿರಂತರವಾಗಿ ಪಕ್ಷ ಸಂಘಟನೆ ಮತ್ತು ಗ್ರಾಮ ಸ್ವರಾಜ್ಯ ಸಮಾವೇಶಗಳನ್ನು ಮಾಡಿದ ಪರಿಣಾಮ ಬಿಜೆಪಿಗೆ ಅಭೂತಪೂರ್ವ ಗೆಲುವು ಸಿಕ್ಕಿದೆ. ಹಳ್ಳಿಯಿಂದ ದೆಹಲಿಯವರೆಗೆ ಬಿಜೆಪಿ ಛಾಪು ಮೂಡಿಸಿದೆ. ಮುಂದಿನ ಚುನಾವಣೆಗಳಲ್ಲೂ ಗೆಲುವಿನ ಓಟ ಮುಂದುವರಿಯಲಿದೆ’ ಎಂದರು.

ಜನಸೇವಕ‌ ಸಮಾವೇಶ

ಹಾವೇರಿ ನಗರದ ಮಾಗಾವಿ ಕಲ್ಯಾಣ ಮಂಟಪದಲ್ಲಿ ಜ.11ರಂದು ಬೆಳಿಗ್ಗೆ 11 ಗಂಟೆಗೆ ‘ಜನ ಸೇವಕ್‌ ಸಮಾವೇಶ’ ನಡೆಯಲಿದೆ. ಉಪಮುಖ್ಯಮಂತ್ರಿಗಳಾದ ಡಾ.ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೃಷಿ ಸಚಿವ ಬಿ.ಸಿ.ಪಾಟೀಲ, ಸಂಸದ, ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಮಾಜಿ ಶಾಸಕರು, ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ 1930 ಅಭ್ಯರ್ಥಿಗಳನ್ನು ಸನ್ಮಾನಿಸಲಾಗುವುದು. ತಾ.ಪಂ, ಜಿ.ಪಂ, ನಗರಸಭೆ ಸದಸ್ಯರು ಪಾಲ್ಗೊಲ್ಳಲಿದ್ದಾರೆ ಎಂದರು.

ಸ್ಥಳ ಬದಲಾವಣೆ ಇಲ್ಲ

ಶಾಸಕ ನೆಹರು ಓಲೇಕಾರ ಮಾತನಾಡಿ, ‘ಸರ್ಕಾರಿ ಮೆಡಿಕಲ್‌ ಕಾಲೇಜನ್ನು ಈಗಾಗಲೇ ಗುರುತಿಸಿರುವ ದೇವಗಿರಿ–ಯಲ್ಲಾಪುರದ ಜಾಗದಲ್ಲೇ ನಿರ್ಮಾಣ ಮಾಡಲಾಗುವುದು. ಸ್ಥಳ ಬದಲಾವಣೆ ಮಾಡಿದರೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಜಾಗ ಬದಲಾವಣೆ ಮಾಡುವುದಿಲ್ಲ’ ಎಂದು ಹೇಳಿದರು.

ಶೀಘ್ರ ಬಂಧಿಸಲು ಸೂಚನೆ

ನಗರದ ನೇತಾಜಿ ನಗರದಲ್ಲಿ ಈಚೆಗೆ ನಡೆದಿರುವ ಮನೆ ಕಳ್ಳತನ ಪ್ರಕರಣವನ್ನು ಶೀಘ್ರ ಬೇಧಿಸಿ, ಆರೋಪಿಗಳನ್ನು ಬಂಧಿಸಬೇಕು ಹಾಗೂ ಕಳವಾಗಿರುವ ವಸ್ತುಗಳನ್ನು ಮಾಲೀಕರಿಗೆ ಒಪ್ಪಿಸಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದೇನೆ. ನಗರದ ಜನರು ಕಳ್ಳತನ ಪ್ರಕರಣದಿಂದ ಭಯಭೀತರಾಗಿದ್ದಾರೆ. ಹೀಗಾಗಿ ತುರ್ತು ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದರು.

ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಸಿ,ಎಸ್‌ಟಿ) ಆಯೋಗದ ಅಧ್ಯಕ್ಷರನ್ನಾಗಿ ಓಲೇಕಾರ ಅವರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿರುವ ಬಗ್ಗೆ ಮಾತನಾಡಿದ ಶಾಸಕರು, ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಇವರು ಅಧ್ಯಕ್ಷರಾದರೆ ನಮ್ಮ ಆಟ ನಡೆಯುವುದಿಲ್ಲ ಎಂದು ಕೆಲವರು ಪಿಐಎಲ್‌ ಸಲ್ಲಿಸಿದ್ದಾರೆ. ಈ ಹಿಂದೆಯೂ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿದ್ದರು. ಅದು ಖುಲಾಸೆಯಾದಂತೆ ಇದು ಕೂಡ ಖುಲಾಸೆಯಾಗಲಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಶಶಿ ಹೊಸಳ್ಳಿ, ಕಿರಣ್‌ ಕೋಣನವರ್‌, ಸುನಿಲ್‌ ರಾಯ್ಕರ್‌, ಪ್ರದೀಪ ಮುಳ್ಳೂರ, ಪ್ರಭು ಹ್ನಿಟ್ನಳ್ಳಿ, ಬಸವರಾಜ ಕಳಸೂರ ಇದ್ದರು.

‘ಒತ್ತುವರಿ ತೆರವಿಗೆ ಲಮಾಣಿ ಮುಂದಾಗಲಿ’

‘ನಗರದ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಮಾಜಿ ಸಚಿವ ರುದ್ರಪ್ಪ ಲಮಾಣಿ ಮನೆ ಕಟ್ಟಿಕೊಂಡಿರುವ ಕಾರಣ, ನಗರದಲ್ಲಿ ಮಳೆ ನೀರು ತಗ್ಗಿನ ಪ್ರದೇಶಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗುತ್ತಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳುವ ಮುನ್ನ ಅವರೇ ಗೌರವಯುತವಾಗಿ ಒತ್ತುವರಿಯನ್ನು ತೆರವುಗೊಳಿಸಬೇಕು’ ಎಂದು ಶಾಸಕ ನೆಹರು ಓಲೇಕಾರ ಆಗ್ರಹಿಸಿದರು.

‘1.13 ಗುಂಟೆ ಜಾಗ ಹೊಂದಿರುವ ರುದ್ರಪ್ಪ ಲಮಾಣಿ ಅವರು 3 ಗುಂಟೆಯಲ್ಲಿ ಮನೆ ನಿರ್ಮಿಸಿದ್ದಾರೆ. ಮಂತ್ರಿಯಾಗಿದ್ದವರಿಗೆ ಅಷ್ಟು ಪರಿಜ್ಞಾನ ಬೇಡವಾ? ಆರ್‌ಎಸ್‌ಎಸ್‌ ಪ್ರಮುಖ್‌ ಹತ್ತಿಮತ್ತೂರ ಎಂಬುವರು ಮಳೆ ನೀರಿನಲ್ಲಿ ತೇಲಿಕೊಂಡು ಬಂದು ಗಟಾರಕ್ಕೆ ಬಿದ್ದು ಸತ್ತು ಹೋದರು. ಅವರ ಸಾವಿಗೆ ರುದ್ರಪ್ಪ ಲಮಾಣಿ ಅವರೇ ಕಾರಣ’ ಎಂದು ಗಂಭೀರ ಆರೋಪ ಮಾಡಿದರು.

ಆರ್‌.ಸಿ. ವಿರುದ್ಧ ಗರಂ

ರಾಜಕಾಲುವೆ ಒತ್ತುವರಿ ತೆರವು ಮಾಡುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಿದ್ದರು. ಪೌರಾಯುಕ್ತರ ನೋಟಿಸ್‌ಗೆ ಕಾಂಗ್ರೆಸ್‌ ಮುಖಂಡರು ಬೆಳಗಾವಿ ಪ್ರಾದೇಶಿಕ ಆಯುಕ್ತರಿಂದ ತಡೆಯಾಜ್ಞೆ ತಂದರು. ಸ್ಥಳಕ್ಕೆ ಬಂದು ಸಮಸ್ಯೆ ಅರ್ಥಮಾಡಿಕೊಳ್ಳದೆ, ಕಚೇರಿಯಲ್ಲೇ ಕುಳಿತು ತಡೆಯಾಜ್ಞೆ ನೀಡಿದ ಪ್ರಾದೇಶಿಕ ಆಯುಕ್ತರ ಕ್ರಮ ಜಾಣ ಕುರುಡೋ ಅಥವಾ ಸ್ವೇಚ್ಛಾಚಾರವೋ ಅರ್ಥವಾಗುತ್ತಿಲ್ಲ ಎಂದು ಟೀಕಿಸಿದರು.

ಪ್ರಾದೇಶಿಕ ಆಯುಕ್ತರು ಸ್ಥಳಕ್ಕೆ ಬಂದು ರಾಜಕಾಲುವೆ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಬೇಕು ಹಾಗೂ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT