ಶುಕ್ರವಾರ, ಮೇ 27, 2022
29 °C
ಬೆಳೆಗಳಿಗೆ ವರವಾದ ಕೃಷಿ ಹೊಂಡ

ಸಮಗ್ರ ಕೃಷಿ ಪದ್ಧತಿಯಿಂದ ನಿರೀಕ್ಷಿತ ಆದಾಯ: ಕೃಷಿಯಲ್ಲಿ ಖುಷಿ ಕಂಡ ಸಹೋದರರು

ಪ್ರದೀಪ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ರಟ್ಟೀಹಳ್ಳಿ: ಇಚ್ಛಾಶಕ್ತಿ ಮತ್ತು ಶ್ರಮವಹಿಸಿ ದುಡಿಯುವ ಛಲವಿದ್ದರೆ ಕೃಷಿಯಲ್ಲಿ ಯಶಸ್ಸು ಕಾಣಬಹುದು ಎನ್ನುವುದಕ್ಕೆ ಕಡೂರ ಗ್ರಾಮದ ರೈತ ಸಹೋದರರು ನಿದರ್ಶನವಾಗಿದ್ದಾರೆ. 

ತಾಲ್ಲೂಕಿನ ಕಡೂರ ಗ್ರಾಮದ ರೈತರಾದ ಮಹದೇವಪ್ಪ ಹೊಸಮನಿ ಮತ್ತು ರಮೇಶ ಹೊಸಮನಿ ತಮ್ಮ ಎಂಟು ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿಯಿಂದ ಖುಷಿ ಕಂಡುಕೊಂಡಿದ್ದಾರೆ. 

ತಮ್ಮ ಜಮೀನಿನಲ್ಲಿ 6 ಎಕರೆ ಅಡಿಕೆ, 1 ಎಕರೆ ಬಾಳೆ, 1 ಎಕರೆಯಲ್ಲಿ ಜಾನುವಾರುಗಳಿಗಾಗಿ ಹುಲ್ಲು ಬೆಳೆದಿದ್ದಾರೆ. 12 ಮಾವಿನಗಿಡ, 14 ಬೆಟ್ಟದ ನೆಲ್ಲಿ, 10 ಪೇರಲ, 12 ಚಿಕ್ಕು, 50 ತೆಂಗಿನಮರ, 4 ಪಪ್ಪಾಯಿ, 20 ಕರಿಬೇವು, ಅರಿಸಿನ ಕೃಷಿ ಜೊತೆಗೆ ಹೈನುಗಾರಿಕೆ ಮಾಡಿಕೊಂಡು ಉತ್ತಮ ಆದಾಯ ಗಳಿಸುತ್ತಿದ್ದಾರೆ. ಜಮೀನಿನಲ್ಲಿ 4 ಕೊಳವೆಬಾವಿಯಿದ್ದು, ಒಂದು ಕೃಷಿ ಹೊಂಡ ನಿರ್ಮಿಸಲಾಗಿದೆ.

ಹೈನುಗಾರಿಕೆ: ಕೃಷಿಗೆ ಪೂರಕವಾಗಿ ಜಮೀನಿನಲ್ಲಿ 5 ಜವಾರಿ ಆಕಳು, ಒಂದು ಗೀರ್‌ ತಳಿಯ ಹೋರಿ, 2 ಎತ್ತುಗಳಿವೆ. ಇವುಗಳಿಂದ ತಯಾರಾದ ಗೊಬ್ಬರವನ್ನು ಬೆಳೆಗಳಿಗೆ ಹಾಕುತ್ತೇವೆ. 2 ಟ್ರ್ಯಾಕ್ಟರ್ ಹೊಂದಿದ್ದೇವೆ. ಕೃಷಿ ಇಲಾಖೆಯಿಂದ ಬಿತ್ತುವ ಕೂರಿಗೆ, ಸ್ಪಿಂಕ್ಲರ್ ಸೆಟ್ ಹಾಗೂ ಕೃಷಿ ಹೊಂಡಕ್ಕೆ ಸಹಾಯಧನ ಪಡೆದಿದ್ದೇವೆ ಎನ್ನುತ್ತಾರೆ ಇನ್ನೊಬ್ಬ ಸಹೋದರ ಮಹದೇವಪ್ಪ ಹೊಸಮನಿ.

‘ನಮ್ಮ 8 ಎಕರೆ ಜಮೀನು ನಮ್ಮ ಪ್ರಿತಾರ್ಜಿತ ಆಸ್ತಿಯಾಗಿದ್ದು, ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ನಮ್ಮ ನಂಬಿಕೆಯಿಂದ ಭೂತಾಯಿ ನಮಗೆ ಹೆಚ್ಚು ಸುಖ, ಸಮೃದ್ಧಿ ನೀಡಿದ್ದಾಳೆ. ಕೆಲಸದಲ್ಲಿ ಯಾವುದೇ ರಾಜಿಯಿಲ್ಲದೆ ಒಟ್ಟಾಗಿ ದುಡಿಯುತ್ತೇವೆ. ನಮ್ಮ ದುಡಿಮೆಯಿಂದ ಮತ್ತೆ ಎರಡೂವರೆ ಎಕರೆ ಜಮೀನು ಖರೀದಿಸಿದ್ದೇವೆ. ಅಲ್ಲಿ ಸಾಂಪ್ರದಾಯಿಕ ಬೆಳೆಗಳಾದ ಶೇಂಗಾ, ಗೋವಿನಜೋಳದ ಬೆಳೆ ಬೆಳೆಯಲಾಗಿದೆ. ಕಾಲ ಕಾಲಕ್ಕೆ ಮಳೆ, ನಿರಂತರ ಪರಿಶ್ರಮದಿಂದ ಕೃಷಿಯಲ್ಲಿ ಹೆಚ್ಚು ಪ್ರಗತಿ ಸಾಧಿಸಬಹುದು’ ಎನ್ನುವುದು ಸಹೋದರರ ಮನದಾಳದ ಮಾತು.

ದೇಶಕ್ಕೆ ಅನ್ನನೀಡುವ ರೈತನಿಗೆ ಸರ್ಕಾರ ಹೆಚ್ಚಿನ ನೆರವು ನೀಡಬೇಕು. ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ನಿಗದಿಪಡಿಸಬೇಕು ಎಂಬುದು ಸಹೋದರರ ಮನವಿ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು