ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಕೊರತೆ; ವಿದ್ಯಾರ್ಥಿಗಳ ವ್ಯಥೆ!

’ಬಸ್‌ಪಾಸ್‌’ ಸ್ಟೂಡೆಂಟ್ಸ್‌ಗಳನ್ನು ಕಡೆಗಣಿಸುವ ಸಾರಿಗೆ ಸಿಬ್ಬಂದಿ; ವಾಹನ ಹತ್ತಲು ಯುವತಿಯರ ಪರದಾಟ
Last Updated 7 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಹಾವೇರಿ: ಅಪಾಯವನ್ನೂ ಲೆಕ್ಕಿಸದೆ ಬಸ್‌ ಬಾಗಿಲಿನಲ್ಲಿ ಜೋತು ಬೀಳುವ ಯುವಕರು, ಹತ್ತಲು ಸಾಧ್ಯವಾಗದೆ ಪರದಾಡುವ ಯುವತಿಯರು, ವಿದ್ಯಾರ್ಥಿಗಳು ಕೈ ಬೀಸಿದರೂ ಬಸ್‌ ನಿಲ್ಲಿಸದೇ ಹೋಗುವ ಸಾರಿಗೆ ಸಿಬ್ಬಂದಿ...

ಈ ದೃಶ್ಯಗಳು ತಾಲ್ಲೂಕಿನ ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂಭಾಗ ನಿತ್ಯ ಕಂಡುಬರುತ್ತವೆ.ಹೌದು, ಬಸ್‌ಗಳ ಕೊರತೆಯಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಮತ್ತು ಮನೆ ತಲುಪಲು ಇಲ್ಲಿ ಅಕ್ಷರಶಃ ಪರದಾಡುತ್ತಿದ್ದಾರೆ.

ತಾಲ್ಲೂಕು ಕೇಂದ್ರದಿಂದ 6 ಕಿ.ಮೀ ದೂರದಲ್ಲಿರುವ ಈ ಕಾಲೇಜಿನಲ್ಲಿಬಿ.ಎ., ಬಿ.ಕಾಂ., ಬಿ.ಎಸ್ಸಿ. ಹಾಗೂ ಎಂ.ಎ ಸ್ನಾತಕೋತ್ತರ ಪದವಿಯಲ್ಲಿ 2,569 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಾಗಿ ಇರುವುದರಿಂದ ಇವರ ಸಂಚಾರಕ್ಕೆ ಈ ಮಾರ್ಗದಲ್ಲಿ ಓಡಾಡುವ 14 ಸಾರಿಗೆ ಬಸ್ಸುಗಳೇ ಆಧಾರ.ಬೆಳಿಗ್ಗೆ 8.30ರಿಂದ 11.50ರವರೆಗೆ ಪ್ರಥಮ ಹಾಗೂ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಗಳಿಗೆ ತರಗತಿಗಳು ನಡೆಯುತ್ತವೆ. ಮಧ್ಯಾಹ್ನ 12ರಿಂದ ಸಂಜೆ 4.30ರವರೆಗೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತರಗತಿ ನಡೆಯುತ್ತವೆ.

ಬಹುತೇಕ ಬಸ್‌ಗಳು ಭರ್ತಿ!

ಶಿಗ್ಗಾವಿ, ಹಾನಗಲ್‌, ಸವಣೂರು, ಬ್ಯಾಡಗಿ ತಾಲ್ಲೂಕುಗಳಿಂದ ಬರುವ ಗ್ರಾಮೀಣ ವಿದ್ಯಾರ್ಥಿಗಳು ಹಾವೇರಿ ನಗರಕ್ಕೆ ಬಂದು ಬಸ್‌ ಬದಲಿಸಿ, ಕಾಲೇಜಿಗೆ ಹೋಗುತ್ತಾರೆ. ಕಾಲೇಜು ಮುಗಿಸಿಕೊಂಡು ಮಧ್ಯಾಹ್ನ ಮತ್ತು ಸಂಜೆ ಗಾಂಧಿಪುರದಿಂದ ಹಾವೇರಿ ತಲುಪುವುದೇ ದುಸ್ತರವಾಗಿದೆ. ಕಾರಣ ಗುತ್ತಲ, ಅಗಡಿ, ಹೊಸರಿತ್ತಿ, ಯಲಗಚ್ಚ, ಹಾವನೂರು ಗ್ರಾಮಗಳಿಂದ ಹಾವೇರಿ ನಗರಕ್ಕೆ ಬರುವ ಬಹುತೇಕ ಬಸ್ಸುಗಳು ಭರ್ತಿಯಾಗಿ ಬರುತ್ತವೆ.

ಕೆಲವು ಬಸ್‌ ಚಾಲಕರು ಕಾಲೇಜು ನಿಲ್ದಾಣದಲ್ಲಿ ನಿಲ್ಲಿಸಿದರೆ, ಮತ್ತೆ ಕೆಲವರು ನಿಲ್ಲಿಸದೇ ಹೋಗುತ್ತಾರೆ. ಇದರಿಂದ ಸಿಕ್ಕ ಬಸ್‌ ಅನ್ನು ಏರಲು ವಿದ್ಯಾರ್ಥಿಗಳು ಅಪಾಯವನ್ನೂ ಲೆಕ್ಕಿಸದೇ ಬಾಗಿಲುಗಳಲ್ಲಿ ಜೋತು ಬೀಳುತ್ತಾ ನಿಲ್ಲುತ್ತಾರೆ. ಸಂಜೆ ವೇಳೆ ಬಸ್‌ಗಾಗಿ ಗಂಟೆಗಟ್ಟಲೆ ಕಾದು ನಿಲ್ಲುವುದರಿಂದ ದೂರದ ಹಳ್ಳಿಗಳಿಗೆ ಹೋಗುವ ವೇಳೆಗೆ ಕತ್ತಲಾಗುತ್ತದೆ. ಇದರಿಂದ ಕೊನೆಯ ತರಗತಿಗೆ ಗೈರು ಹಾಜರಾಗಿ ಬಸ್‌ ಹಿಡಿಯುವ ಸರ್ಕಸ್‌ ಮಾಡಬೇಕಿದೆ ಎನ್ನುತ್ತಾರೆ ವಿದ್ಯಾರ್ಥಿನಿಯರು.

‘ಬ್ಯಾಗ್‌ ಹಾಕಿಕೊಂಡು ವಿದ್ಯಾರ್ಥಿಗಳು ನಿಂತರೆ ಚಾಲಕರು ಬಸ್ಸನ್ನು ನಿಲ್ಲಿಸುವುದಿಲ್ಲ. ಟಿಕೆಟ್ ಪಡೆಯುವ ಪ್ರಯಾಣಿಕರಿದ್ದರೆ ತಕ್ಷಣ ನಿಲ್ಲಿಸಿ ಹತ್ತಿಸಿಕೊಂಡು ಹೋಗುತ್ತಾರೆ. ಇದರಿಂದ ಬಸ್‌ಪಾಸ್‌ ಇದ್ದರೂ ಖಾಸಗಿ ವಾಹನಗಳಲ್ಲಿ ದುಡ್ಡು ಕೊಟ್ಟು ಕೆಲವೊಮ್ಮೆ ಸಂಚರಿಸಬೇಕು. ಈ ಬಗ್ಗೆಸಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದುವಿದ್ಯಾರ್ಥಿ ಭರಮಗೌಡ ಉಂಬಳಗೌಡ್ರ ದೂರಿದರು.

ಇಂದಿರಾ ಕ್ಯಾಂಟಿನ್‌ ಸ್ಥಾಪಿಸಿ

ರೈತರ ಮಕ್ಕಳೇ ಹೆಚ್ಚಾಗಿ ಇಲ್ಲಿ ವ್ಯಾಸಂಗಕ್ಕೆ ಬರುತ್ತಾರೆ. ಬೆಳಿಗ್ಗೆ ಬೇಗನೆ ಮನೆ ಬಿಡುವುದರಿಂದ ಊಟ ತಿಂಡಿ ಸರಿಯಾಗಿ ಆಗುವುದಿಲ್ಲ. ಕೆಲವು ಬಾರಿ ಊಟ ಕಟ್ಟಿಕೊಂಡು ಬಂದರೆ ಮಧ್ಯಾಹ್ನದ ಹೊತ್ತಿಗೆ ಹಳಸಿ ಹೋಗುತ್ತದೆ. ಅದಕ್ಕಾಗಿ ಕಾಲೇಜು ಆವರಣದಲ್ಲಿ ‘ಇಂದಿರಾ ಕ್ಯಾಂಟಿನ್‌’‍ ಸ್ಥಾಪನೆ ಮಾಡಿದರೆ ಹಸಿದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ವಿದ್ಯಾರ್ಥಿನಿ ಯಲ್ಲಮ್ಮ ಬಂಡೆಪ್ಪನವರ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT