ಹಾವೇರಿ: ಎಲ್ಲೆಂದರಲ್ಲಿ ಕಸ–ಪ್ಲಾಸ್ಟಿಕ್, ಅಡಿಕೆ–ಎಲೆ–ಗುಟ್ಕಾ ತಿಂದು ಉಗುಳಿದವರಿಂದ ಉಂಟಾದ ಕಲೆಗಳು, ದುರ್ವಾಸನೆ ಬೀರುವ ಶೌಚಾಲಯಗಳು, ಸುರಕ್ಷತೆ ಇಲ್ಲದ ಮಹಿಳಾ ಕೊಠಡಿಗಳು, ಬೇಕಾಬಿಟ್ಟಿ ದರ ವಸೂಲಿ ಮಾಡುವ ಮಳಿಗೆ ವ್ಯಾಪಾರಿಗಳು, ಅಮಲಿನಲ್ಲಿ ಎಲ್ಲೆಂದರಲ್ಲಿ ಮಲಗುವ ಮದ್ಯವ್ಯಸನಿಗಳು...
ಜಿಲ್ಲೆಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಗಳ ಅವ್ಯವಸ್ಥೆ ಇದು. ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ. ಮೂಲ ಸೌಕರ್ಯಗಳ ಕೊರತೆಯಿಂದಾಗಿ ಪ್ರಯಾಣಿಕರು ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ. ಕೆಲ ನಿಲ್ದಾಣಗಳು, ಕಸದ ರಾಶಿ ಸುರಿಯುವ ಡಂಪಿಂಗ್ ಯಾರ್ಡ್‌ಗಳಂತಾಗಿವೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ‘ಶಕ್ತಿ’ ಜಾರಿಯಾದಾಗಿನಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರು ಕುಳಿತುಕೊಳ್ಳಲು ಪ್ರತ್ಯೇಕ ಕೊಠಡಿಗಳಿವೆ. ಕೆಲ ಕಿಡಿಗೇಡಿಗಳು ಕೊಠಡಿಗೆ ನುಗ್ಗಿ, ಮಹಿಳೆಯರನ್ನು ಚುಡಾಯಿಸಿದ ಘಟನೆಗಳು ನಡೆದಿವೆ. ಮರ್ಯಾದೆಗೆ ಅಂಜಿ ಮಹಿಳೆಯರು, ಯಾವುದೇ ದೂರು ನೀಡಿಲ್ಲವೆಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಆಗಾಗ ಕಳ್ಳತನಗಳೂ ನಡೆಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ.
ನಿಲ್ದಾಣಗಳಲ್ಲಿರುವ ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ನೀಡಲಾಗಿದೆ. ತಿಂಡಿ–ತಿನಿಸು ಹಾಗೂ ಇತರೆ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು, ನಿಗದಿತ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ, ‘ನಮ್ಮ ಬಾಡಿಗೆ ಹೆಚ್ಚು. ಅದಕ್ಕೆ ದರವೂ ಹೆಚ್ಚು. ಸಂಸ್ಥೆಯ ಅಧಿಕಾರಿಗಳಿಗೆ ದೂರು ಕೊಡುವುದಿದ್ದರೆ ಕೊಡಿ’ ಎಂದು ಉಡಾಫೆ ಉತ್ತರ ನೀಡುತ್ತಾರೆ. ಹೆಚ್ಚಿನ ದರ ವಸೂಲಿ ಮಾಡುವ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನರೂ ಒತ್ತಾಯಿಸುತ್ತಾರೆ.
ಕಿರಿದಾದ ಜಾಗದಲ್ಲಿ ರಾಣೆಬೆನ್ನೂರು ನಿಲ್ದಾಣ: 100ಕ್ಕೂ ಹೆಚ್ಚು ಗ್ರಾಮಗಳನ್ನು ಹೊಂದಿರುವ ರಾಣೆಬೆನ್ನೂರು, ದಕ್ಷಿಣ ಹಾಗೂ ಉತ್ತರ ಕರ್ನಾಟಕದ ಹೆಬ್ಬಾಗಿಲು. ಇಲ್ಲಿನ ಬಸ್ ನಿಲ್ದಾಣ ಕಿರಿದಾದ ಜಾಗದಲ್ಲಿದೆ.
ಹಾವೇರಿ, ಬ್ಯಾಡಗಿ, ಹಾನಗಲ್, ರಟ್ಟೀಹಳ್ಳಿ, ಹಿರೇಕೆರೂರು, ಶಿಕಾರಿಪುರ, ಹರಿಹರ, ದಾವಣಗೆರೆ, ಗದಗ ಜಿಲ್ಲೆಗಳಿಂದ ರೈತರು ಹಾಗೂ ವ್ಯಾಪಾರಸ್ಥರು ನಗರಕ್ಕೆ ಬರುತ್ತಾರೆ. ನಿಲ್ದಾಣದ ಜಾಗ ಚಿಕ್ಕದಾಗಿರುವುದರಿಂದ, ಬಸ್ ಹತ್ತಲು ಹಾಗೂ ಇಳಿಯಲು ತೊಂದರೆಯಾಗುತ್ತಿದೆ.
‘ಬಸ್ ನಿಲ್ದಾಣದ ಎದುರು ವಿವಿಧ ಸಂಘಟನೆಗಳು ವಾರದಲ್ಲಿ ಎರಡ್ಮೂರು ಪ್ರತಿಭಟನೆ ನಡೆಸುತ್ತವೆ. ಪ್ರತಿಭಟನೆ ಮುಗಿಯುವವರೆಗೂ ಸಮಯಕ್ಕೆ ಸರಿಯಾಗಿ ಬಸ್ ಸಂಚರಿಸಲು ಆಗುವುದಿಲ್ಲ. ನಿಲ್ದಾಣದ ಬಳಿಯೇ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದ್ದು, ಇದರಿಂದಲೂ ಬಸ್ ಸಂಚಾರಕ್ಕೆ ತೊಂದರೆಯಾಗುತ್ತಿದೆ’ ಎಂದು ನಾಗೇನಹಳ್ಳಿಯ ಹನುಮಂತಗೌಡ ಪೊಲೀಸಗೌಡ್ರ ದೂರಿದರು.
ಗ್ರಾಮೀಣ ಭಾಗದ ಪ್ರಯಾಣಿಕರು, ಶಾಲಾ–ಕಾಲೇಜು ವಿದ್ಯಾರ್ಥಿಗಳು, ವೃದ್ದರು ನಿತ್ಯವೂ ಯಾತನೆ ಅನುಭವಿಸುತ್ತಿದ್ದಾರೆ.
‘ನಿಲ್ದಾಣದ ಒಳಗೆ ಮಹಿಳೆಯರು ಮತ್ತು ಪುರುಷರ ಶೌಚಾಲಯಗಳಿವೆ. ಅವುಗಳೂ ಕಿರಿದಾಗಿವೆ. ದುರ್ವಾಸನೆಯೂ ಹೆಚ್ಚಾಗಿದೆ. ಪ್ರಯಾಣಿಕರು ಅಡಿಕೆ, ಎಲೆ, ಗುಟ್ಕಾ ತಿಂದು ಎಲ್ಲೆಂದರಲ್ಲಿ ಉಗುಳುತ್ತಾರೆ. ಉಗುಳುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಜನರದ್ದಾಗಿದೆ. ನಿಲ್ದಾಣವನ್ನು ವಿಸ್ತರಣೆ ಮಾಡಬೇಕು ಎಂದೂ ಒತ್ತಾಯಿಸುತ್ತಾರೆ.
ಪ್ರಯಾಣಿಕರ ಪರದಾಟ: ಹಿರೇಕೆರೂರಿನಲ್ಲಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಕುಡಿಯಲು ನೀರಿಲ್ಲ. ಕುಳಿತುಕೊಳ್ಳಲು ಆಸನಗಳ ಕೊರತೆ ಎದ್ದು ಕಾಣುತ್ತಿದೆ. ಶೌಚಾಲಯ ಕೊರತೆಯೂ ಪ್ರಯಾಣಿಕರನ್ನು ಪರದಾಡುವಂತೆ ಮಾಡಿದೆ.
ಈಗಿರುವ ನಿಲ್ದಾಣ ಹಳೆಯದು ಹಾಗೂ ಚಿಕ್ಕದಾಗಿದೆ. ಬಸ್‌ಗಳ ಸಂಖ್ಯೆ ಹೆಚ್ಚಾಗಿದೆ. ಬಸ್ ನಿಲ್ಲಿಸಲು ಜಾಗ ಸಾಲುತ್ತಿಲ್ಲ. ನಿಲ್ದಾಣಕ್ಕೆ ನಿತ್ಯ ಸಾವಿರಾರು ಪ್ರಯಾಣಿಕರು ಆಗಮಿಸುತ್ತಾರೆ. ಡಿಪೊದಲ್ಲಿ ಸದ್ಯ 94 ಬಸ್‌ಗಳಿದ್ದು, ಒಟ್ಟು 87 ಮಾರ್ಗಗಳಿವೆ. ಅದರಲ್ಲಿ 2 ಸ್ಲೀಪರ್ ಕೋಚ್ ಬಸ್‌ಗಳಿವೆ. ಮಣಿಪಾಲ, ಬೆಂಗಳೂರು, ಭಟ್ಕಳ, ಮಂಗಳೂರು, ಮೈಸೂರು, ಬೆಳಗಾವಿ, ಮುಂಬೈ, ಗೋವಾ, ಶಿರಾಳಕೊಪ್ಪ, ರಾಣೆಬೆನ್ನೂರ, ಹಾವೇರಿ ಸೇರಿ ವಿವಿಧ ಮಾರ್ಗಗಳಲ್ಲಿ ಸಾವಿರಾರು ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ.
ಆದರೆ, ನಿಲ್ದಾಣದಲ್ಲಿ ಮೂಲ ಸೌಕರ್ಯಗಳ ಕೊರತೆ ಸಾಕಷ್ಟಿದೆ. ದ್ವಿಚಕ್ರ ನಿಲುಗಡೆಗೆ ಜಾಗವಿಲ್ಲ. ನಿಲ್ದಾಣದಲ್ಲಿಯೇ ಜನರು ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುತ್ತಾರೆ. ಖಾಸಗಿ ವಾಹನಗಳೂ ನಿಲ್ದಾಣದಲ್ಲೇ ನಿಲ್ಲುತ್ತಿವೆ.
ನಿಲ್ದಾಣ ಸುತ್ತ ಗಿಡಗಂಟಿ: ರಟ್ಟೀಹಳ್ಳಿ ಪಟ್ಟಣದ ಬಸ್ ನಿಲ್ದಾಣದ ಸುತ್ತ ಗಿಡಗಂಟಿ ಬೆಳೆದಿದ್ದು, ವಿಷಜಂತುಗಳು ವಾಸಿಸುವ ಸ್ಥಳವಾಗಿ ಮಾರ್ಪಟ್ಟಿದೆ. ಶೌಚಾಲಯಗಳಿಗೆ ಹೋಗುವ ಮಾರ್ಗದಲ್ಲೇ ಗಿಡಗಂಟಿಗಳಿದ್ದು, ಜನರು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.
ಶೌಚಾಲಯದಲ್ಲಿರುವ ನೀರಿನ ತೊಟ್ಟೆಗಳನ್ನು ಸ್ವಚ್ಛಗೊಳಿಸಿಲ್ಲ. ದುರ್ವಾಸನೆ ಬೀರುತ್ತಿವೆ. ಕುಡಿಯುವ ನೀರಿನ ನಳಗಳು ಹಾಳಾಗಿವೆ. ಮಹಿಳಾ ವಿಶ್ರಾಂತಿ ಕೊಠಡಿಯು ನಿಲ್ದಾಣ ಸ್ವಚ್ಚಗೊಳಿಸುವ ವಸ್ತುಗಳ ಸಂಗ್ರಹ ಕೊಠಡಿಯಾಗಿ ಮಾರ್ಪಟ್ಟಿದೆ.
‘ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್ ನಿಲ್ದಾಣ ಸ್ವಚ್ಛವಾಗಿಟ್ಟುಕೊಳ್ಳುವುದು ನಿಲ್ದಾಣಾಧಿಕಾರಿ ಕರ್ತವ್ಯ. ಕುಡಿಯುವ ನೀರಿನ ಅರವಟಿಗೆ ಹಾಳಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ನಿಲ್ದಾಣದ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು. ಮೂಲ ಸೌಕರ್ಯ ಕಲ್ಪಿಸಬೇಕು’ ಎಂದು ಸ್ಥಳೀಯ ನಿವಾಸಿ ಕೃಷ್ಣರಾಜ ವೇರ್ಣೇಕರ ಆಗ್ರಹಿಸಿದರು.
ಶೌಚಾಲಯ ಅವ್ಯವಸ್ಥೆ: ಶಿಗ್ಗಾವಿ ಹೊಸ ಬಸ್ ನಿಲ್ದಾಣದಲ್ಲಿ ಅಂಗವಿಕಲ ಪ್ರಯಾಣಿಕರಿಗಾಗಿ ನಿರ್ಮಾಣವಾದ ಶೌಚಾಲಯವು ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದೆ.
ಹೊಸ ಬಸ್ ನಿಲ್ದಾಣದಲ್ಲಿ ಸುತ್ತಲಿನ ಕಾಂಪೌಂಡಿಗೆ ಹತ್ತಿರದಲ್ಲಿ ಕೆಲವರು ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಇಡೀ ನಿಲ್ದಾಣದಲ್ಲಿ ದುರ್ವಾಸನೆ ಹರಡುತ್ತದೆ. ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ.
ಬಸ್ ನಿಲ್ದಾಣದ ಸುತ್ತ ಗಿಡಗಂಟಿ ಬೆಳೆದಿದ್ದು, ಸ್ವಚ್ಛತೆ ಕುರಿತು ಸಾರ್ವಜನಿಕರು ಹಲವು ಬಾರಿ ದೂರು ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಅಂಗವಿಕಲರ ಶೌಚಾಲಯವನ್ನು ಕೂಡಲೇ ಸ್ವಚ್ಛಗೊಳಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಮೂಲಸೌಕರ್ಯ ಕೊರತೆ: ಬ್ಯಾಡಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಸಮರ್ಪಕ ಆಸನಗಳಿಲ್ಲ. ನಿಲ್ದಾಣದ ಜಾಗ ಇಕ್ಕಟ್ಟಾಗಿದ್ದು, ರಕ್ಷಣೆಗೆ ಕಾಂಪೌಂಡ್ ಸಹ ಇಲ್ಲ. ನಿಲ್ದಾಣದ ಆವರಣದಲ್ಲಿ ಕಸವೇ ಹೆಚ್ಚಾಗಿದೆ.
ಬ್ಯಾಡಗಿ ಜನಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕೆ ತಕ್ಕಂತೆ ನಿಲ್ದಾಣದ ಅಭಿವೃದ್ಧಿ ಮಾಡಿಲ್ಲವೆಂಬ ಆರೋಪವಿದೆ. ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳಲು ಜಾಗವಿಲ್ಲದ ಕಾರಣ, ಪ್ರಯಾಣಿಕರು ಬಿಸಿಲಿನಲ್ಲಿ ನಿಂತು ಬಸ್‌ಗಾಗಿ ಕಾಯುವ ಸ್ಥಿತಿ ಇದೆ. ನಿಲ್ದಾಣದ ಚರಂಡಿ ಕಸ ಕಡ್ಡಿಗಳಿಂದ ತುಂಬಿದೆ. ಸಂಜೆ ಹೊತ್ತು ಹಾವೇರಿ ಮಾರ್ಗದಲ್ಲಿ ಬಸ್‌ಗಳ ಕೊರತೆ ಇದೆ ಎಂದು ಪ್ರಯಾಣಿಕರು ದೂರಿದರು.
ಅಧ್ಯಕ್ಷರ ಭೇಟಿ ನಂತರ ಸುಧಾರಣೆ
ಹಾವೇರಿ: ಇಲ್ಲಿನ ಕೇಂದ್ರ ಬಸ್ ನಿಲ್ದಾಣ ಸದ್ಯದ ಮಟ್ಟಿಗೆ ಸುಧಾರಣೆ ಕಂಡಿದೆ. ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್ ಅವರು ಇತ್ತೀಚೆಗೆ ನಿಲ್ದಾಣಕ್ಕೆ ಭೇಟಿ ನೀಡಿ ಅವ್ಯವಸ್ಥೆ ಬಗ್ಗೆ ಗರಂ ಆಗಿದ್ದರು. ಸ್ವಚ್ಛತೆ ಕಾಪಾಡುವಂತೆ ಹಾಗೂ ಮೂಲಸೌಕರ್ಯ ಕಲ್ಪಿಸುವಂತೆ ತಾಕೀತು ಮಾಡಿದ್ದರು. ಇದಾದ ಮರುದಿನದಿಂದಲೇ ನಿಲ್ದಾಣದ ಸ್ವಚ್ಛತೆ ಆದ್ಯತೆ ನೀಡಲಾಗಿದೆ. ಬಂದ್ ಆಗಿದ್ದ ಶುದ್ಧ ಕುಡಿಯುವ ನೀರಿನ ಘಟಕವನ್ನು ಮರು ಆರಂಭಿಸಲಾಗಿದೆ. ನಿಲ್ದಾಣದಲ್ಲಿ ಎರಡು ಶೌಚಾಲಯಗಳಿದ್ದು ಸ್ವಚ್ಛವಾಗಿಟ್ಟುಕೊಳ್ಳಲಾಗಿದೆ. ಆದರೆ ದುರ್ವಾಸನೆ ಮಾತ್ರ ಕಡಿಮೆಯಾಗಿಲ್ಲ. ಮಲ ವಿಸರ್ಜನೆಗೆ ₹ 5 ಪಡೆಯುವ ಬದಲು ₹ 10 ಪಡೆಯುತ್ತಿರುವುದು ಅಕ್ರಮ ವಸೂಲಿ ಎಂದು ಜನರು ದೂರುತ್ತಿದ್ದಾರೆ. ಸಾರಿಗೆ ಸಂಸ್ಥೆ ಸಿಬ್ಬಂದಿ ನಿಲ್ದಾಣದಲ್ಲಿ ಕಸಗೂಡಿಸಿ ಸ್ವಚ್ಛ ಮಾಡುತ್ತಿದ್ದಾರೆ. ಆದರೆ ಜನರು ತಿಂಡಿ–ತಿನಿಸು ತಿಂದು ಅದರ ಪೊಟ್ಟಣಗಳನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ‘ದಿನಕ್ಕೆ ಎರಡ್ಮೂರು ಬಾರಿ ನಿಲ್ದಾಣ ಸ್ವಚ್ಛ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಹಾಗೂ ಕಸ ಹಾಕಲು ಪ್ರತ್ಯೇಕ ಡಬ್ಬಿಗಳನ್ನು ಇರಿಸಲಾಗಿದೆ. ಆದರೂ ಜನ ಎಲ್ಲೆಂದರಲ್ಲಿ ಕಸ ಬಿಸಾಕುತ್ತಿದ್ದಾರೆ ಉಗಳುತ್ತಿದ್ದಾರೆ. ಇದರಿಂದ ನಿಲ್ದಾಣ ಗಲೀಜಾಗುತ್ತಿದೆ. ಜನರ ಸಹಕಾರವಿದ್ದರೆ ಮಾತ್ರ ನಿಲ್ದಾಣ ಸ್ವಚ್ಛವಾಗಿಟ್ಟುಕೊಳ್ಳಬಹುದು’ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ಹೇಳಿದರು.
ಥಿಲಗೊಂಡ ಬಸ್ ನಿಲ್ದಾಣ
ಹಂಸಬಾವಿ: ಸಮೀಪದ ಸಾತೇನಹಳ್ಳಿಯ ದರ್ಗಾ ಸಮೀಪವಿರುವ ಬಸ್ ನಿಲ್ದಾಣವು ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ‘ನಮ್ಮೂರಿನ ಶಾಂತೇಶ ಹಾಗೂ ಶಿವಾಲಿ ಬಸವೇಶ್ವರ ದೇವಸ್ಥಾನಗಳಿಗೆ ಭಕ್ತರು ನಿತ್ಯ ಬಂರುತ್ತಾರೆ. ಇಲ್ಲಿನ ಬಸ್ ನಿಲ್ದಾಣ ತೀರಾ ಹದಗೆಟ್ಟಿದ್ದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಬಸ್ ನಿಲ್ದಾಣ ದುರಸ್ತಿಗೆ ಕ್ರಮ ವಹಿಸಬೇಕು’ ಎಂದು ಸಾತೇನಹಳ್ಳಿಯ ಸೋಮು ಕರಡೇರ ಆಗ್ರಹಿಸಿದರು. ಸಮೀಪದ ಮಡ್ಲೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿರುವ ಬಸ್ ನಿಲ್ದಾಣವೂ ಶಿಥಿಲಾವಸ್ಥೆಯಲ್ಲಿದೆ. ನಿಲ್ದಾಣದ ಎದುರು ಕಸ ತುಂಬಿದೆ. ‘ಈ ನಿಲ್ದಾಣವು ಆಸ್ಪತ್ರೆಗೆ ಬರುವ ಜನರಿಗಾಗಿ ನಿರ್ಮಾಣ ಮಾಡಿದ್ದು ಈಗ ಕಸದ ತೊಟ್ಟಿಯಂತಾಗಿದೆ. ಐದಾರು ವರ್ಷದಿಂದಲೂ ಇದೇ ಸ್ಥಿತಿ ಇದ್ದು ಕೂಡಲೇ ಸರಿಪಡಿಸಬೇಕು’ ಎಂದು ಮಡ್ಲೂರಿನ ಮಹಾರುದ್ರಪ್ಪ ಇಟಗಿ ಆಗ್ರಹಿಸಿದ್ದಾರೆ.
ಅಪರಾಧ ತಡೆಗಿಲ್ಲ ಕ್ರಮ
ಹಾನಗಲ್: ಕೇಂದ್ರ ಬಸ್ ನಿಲ್ದಾಣದಲ್ಲಿ ಆಗಾಗ್ಗೆ ಅಪರಾಧ ಕೃತ್ಯಗಳು ನಡೆಯುತ್ತಿದ್ದರೂ ಸುರಕ್ಷತಾ ಕ್ರಮಕ್ಕೆ ಆದ್ಯತೆ ನೀಡಿಲ್ಲ. ನಿಲ್ದಾಣದಲ್ಲಿ ಪೊಲೀಸ್ ಚೌಕಿ ಇದೆ. ಆದರೆ ಪೊಲೀಸರ ನಿಯೋಜನೆ ಆಗಿಲ್ಲ. ಸಿಸಿ ಟಿವಿ ಕ್ಯಾಮೆರಾ ವ್ಯವಸ್ಥೆಯೂ ಇಲ್ಲ. ಶಾಲಾ–ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುವ ಘಟನೆಗಳು ನಡೆದಿವೆ. ವೃದ್ಧರನ್ನು ಯಾಮಾರಿಸಿ ಹಣ ಒಡವೆ ಕಳವು ಮಾಡಿದ ನಿದರ್ಶನಗಳೂ ಇವೆ. ಸ್ವಚ್ಛತೆಯೂ ಅಷ್ಟಕಷ್ಟೇ ಇದ್ದು ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂಬುದು ಪ್ರಯಾಣಿಕರ ಆರೋಪ.
ಹಿರೇಕೆರೂರು ಬಸ್ ನಿಲ್ದಾಣದಲ್ಲಿ ಮೂಲ ಸೌಕರ್ಯ ಇಲ್ಲ. ಶಕ್ತಿ ಯೋಜನೆಯಿಂದಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಸೌಕರ್ಯ ಕಲ್ಪಿಸಲು ಅಧಿಕಾರಿಗಳು ಗಮನಹರಿಸಬೇಕು–ಮಹೇಶ ಕೊರವರ, ಪ್ರಯಾಣಿಕ
ರಾಣೆಬೆನ್ನೂರು ಬಸ್ ನಿಲ್ದಾಣ ಬಳಿಯೇ ಸಂಚಾರ ಸಿಗ್ನಲ್ ಇದ್ದು ನಿತ್ಯವೂ ದಟ್ಟಣೆ ಉಂಟಾಗುತ್ತಿದೆ. ನಿಲ್ದಾಣಕ್ಕೆ ಹೋಗುವ– ಬರುವ ಬಸ್‌ಗಳಿಗೆ ಅಡ್ಡಿಯಾಗುತ್ತಿದೆ–ನಿತ್ಯಾನಂದ ಕುಂದಾಪುರ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ
(ಪೂರಕ ಮಾಹಿತಿ: ಮುಕ್ತೇಶ ಕೂರಗುಂದಮಠ, ಶಂಕರ ಕೊಪ್ಪದ, ಪ್ರದೀಪ ಕುಲಕರ್ಣಿ, ಎಂ.ವಿ. ಗಡಾದ, ಪ್ರಮೀಳಾ ಹುನಗುಂದ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.