ಮಂಗಳವಾರ, ಅಕ್ಟೋಬರ್ 27, 2020
22 °C
ಹೂಡಿಕೆದಾರರ ಅಸಮಾಧಾನ

ದಕ್ಷಿಣಕ್ಕೆ ಬೆಣ್ಣೆ, ಉತ್ತರಕ್ಕೆ ಸುಣ್ಣ: ಪ್ರವಾಸೋದ್ಯಮ ನೀತಿಯಲ್ಲಿ ತಾರತಮ್ಯ

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ರಾಜ್ಯ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದ ಪ್ರವಾಸೋದ್ಯಮ ನೀತಿ 2020–2025ರಲ್ಲಿ ದಕ್ಷಿಣ ಕರ್ನಾಟಕದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ, ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ ಎಂಬ ಅಪಸ್ವರ ಕೇಳಿ ಬಂದಿದೆ.

ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಶಿವಮೊಗ್ಗ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಎಲ್ಲ ಪ್ರವಾಸಿ ಸ್ಥಳಗಳನ್ನು (ಜಿಲ್ಲೆಯಾದ್ಯಂತ) ‘ಆದ್ಯತಾ ಪ್ರವಾಸಿ ತಾಣಗಳು’ ಎಂದು ಪರಿಗಣಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆ ಹೊರತುಪಡಿಸಿದರೆ ಉಳಿದ 7 ಜಿಲ್ಲೆಗಳು ದಕ್ಷಿಣ ಕರ್ನಾಟಕಕ್ಕೆ ಸೇರಿವೆ. ಆದರೆ, ‘ಮುಂಬೈ ಕರ್ನಾಟಕ’ ಮತ್ತು ‘ಕಲ್ಯಾಣ ಕರ್ನಾಟಕದ’ ಜಿಲ್ಲೆಗಳಲ್ಲಿ ಕೆಲವೇ ಪ್ರವಾಸಿ ತಾಣಗಳನ್ನು ಮಾತ್ರ ಪರಿಗಣಿಸಿರುವುದು ಪ್ರವಾಸಿ ಪ್ರಿಯರ ಬೇಸರಕ್ಕೆ ಕಾರಣವಾಗಿದೆ.

ಹಿಂದಿನ ಪ್ರವಾಸೋದ್ಯಮ ನೀತಿ 2015–2020ರಲ್ಲಿ ರಾಜ್ಯದ ಎಲ್ಲ ತಾಲ್ಲೂಕುಗಳಿಗೆ ಆದ್ಯತೆ ನೀಡಿ, 319 ಪ್ರವಾಸಿ ತಾಣಗಳನ್ನು ನಾಲ್ಕು ಪ್ರವರ್ಗಗಳಲ್ಲಿ ವಿಂಗಡಿಸಲಾಗಿತ್ತು. ಡಾ.ನಂಜುಂಡಪ್ಪ ಸಮಿತಿ ವರದಿ ಪ್ರಕಾರ 1,2,3 ಪ್ರವರ್ಗಗಳನ್ನು ವಿಂಗಡಿಸಿ, ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಬರುವ ತಾಲ್ಲೂಕುಗಳನ್ನು ಪ್ರತ್ಯೇಕವಾಗಿ ಗುರುತಿಸಲಾಗಿತ್ತು. ಈ ಬಾರಿ 270 ತಾಣಗಳಿಗೆ ಮಾತ್ರ ಮಾನ್ಯತೆ ಸಿಕ್ಕಿದೆ. ಜತೆಗೆ ಹೈ.ಕ.ಪ್ರದೇಶಗಳನ್ನು ಪ್ರತ್ಯೇಕವಾಗಿ ಗುರುತಿಸಿಲ್ಲ.  

ಅಭಿವೃದ್ಧಿ ಕುಂಠಿತ: ‘ಹೋಟೆಲ್‌, ಹೌಸ್‌ ಬೋಟ್‌, ವಸ್ತುಸಂಗ್ರಹಾಲಯ, ಮನರಂಜನಾ ಉದ್ಯಾನ, ಸಾಂಸ್ಕೃತಿಕ ಗ್ರಾಮ... ಮುಂತಾದ
ಪ್ರವಾಸೋದ್ಯಮ ಯೋಜನೆಗಳಡಿ ನೀಡುವ ಪ್ರೋತ್ಸಾಹಕಗಳು, ಸಹಾಯಧನ ಮತ್ತು →ರಿಯಾಯಿತಿಗಳು→ ‘ಆದ್ಯತಾ ಪ್ರವಾಸಿ ತಾಣಗಳಿಗೆ’ ಮಾತ್ರ ಅನ್ವಯಿಸುತ್ತವೆ. ಹೀಗಾಗಿ ಇಡೀ ಜಿಲ್ಲೆಯೇ ‘ಆದ್ಯತಾ ಪ್ರವಾಸಿ ತಾಣ’ ಎಂದು ಪರಿಗಣಿಸಿರುವ ಜಿಲ್ಲೆಗಳು ಹೆಚ್ಚು ಲಾಭ ಪಡೆಯುತ್ತವೆ. ಉಳಿದ 22 ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕುಂಠಿತವಾಗಲಿದೆ’ ಎನ್ನುತ್ತಾರೆ ಬಂಡವಾಳ ಹೂಡಿಕೆದಾರರು. 

ಹೂಡಿಕೆಗೆ ಹಿಂದೇಟು: ಹಾವೇರಿ ಜಿಲ್ಲೆಯ ಕಾಗಿನೆಲೆ, ಬಾಡ, ಶಿಶುನಾಳ‌, ಅಬಲೂರು; ಧಾರವಾಡ ಜಿಲ್ಲೆಯ ಕಲಘಟಗಿ, ಅಳ್ನಾವರ; ಬಾಗಲಕೋಟೆ ಜಿಲ್ಲೆಯ ಮಹಾಕೂಟ, ಶಿವಯೋಗ ಮಂದಿರ; ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಜಲಪಾತಗಳು, ಕಣಕುಂಬಿ; ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಕರಡಿಧಾಮ, ಮೈಲಾರ ದೇಗುಲ; ಕಲಬುರ್ಗಿ ಜಿಲ್ಲೆಯ ಗಾಣಿಗಪುರ, ಚಿತ್ತಾಪುರದ ಹಝರತ್ ಚಿತಾ ಶಾ ವಾಲಿ‌‌ ದರ್ಗಾ ಸೇರಿದಂತೆ ಹಲವಾರು ಪ್ರವಾಸಿ ತಾಣಗಳು ‘ಆದ್ಯತಾ ತಾಣ’ಗಳ ಪಟ್ಟಿಯಲ್ಲಿ ಸೇರಿಲ್ಲ. ಹೀಗಾಗಿ, ಇಂಥ ಸ್ಥಳಗಳಲ್ಲಿ ಹೂಡಿಕೆ ಮಾಡಲು ಖಾಸಗಿ ಬಂಡವಾಳದಾರರು ಹಿಂದೇಟು ಹಾಕುತ್ತಿದ್ದಾರೆ. 

ಜಿಲ್ಲಾಧಿಕಾರಿ ಪತ್ರ: ‘ಹಾವೇರಿ ಜಿಲ್ಲೆಯಲ್ಲಿ ಹಾವೇರಿ ಮತ್ತು ರಾಣೆಬೆನ್ನೂರು ತಾಲ್ಲೂಕುಗಳನ್ನು ಮಾತ್ರ ‘ಆದ್ಯತಾ ಪ್ರವಾಸಿ ತಾಣ’ಗಳ ಪಟ್ಟಿಗೆ ಸೇರಿಸಲಾಗಿದೆ. ಇದರಿಂದ ಉಳಿದ ತಾಲ್ಲೂಕುಗಳಲ್ಲಿ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗಲಿದೆ. ಹೀಗಾಗಿ ಇಡೀ ಜಿಲ್ಲೆಯನ್ನು
ಪ್ರವಾಸಿ ನೀತಿಯಡಿ ಸೇರ್ಪಡೆ ಮಾಡಬೇಕು’ ಎಂದು ಹಾವೇರಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಪ್ರವಾಸೋದ್ಯಮ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು