ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಲಿಹಳ್ಳಿ ಬಳಿ ಮೆಗಾ ಮಾರ್ಕೆಟ್‌: ಮೆಣಸಿನಕಾಯಿ ವರ್ತಕರ ವಿರೋಧ

Published 22 ಫೆಬ್ರುವರಿ 2024, 5:06 IST
Last Updated 22 ಫೆಬ್ರುವರಿ 2024, 5:06 IST
ಅಕ್ಷರ ಗಾತ್ರ

ಬ್ಯಾಡಗಿ: ಪಟ್ಟಣದ ಹೊರವಲಯದಲ್ಲಿ ಮೆಣಸಿನಕಾಯಿ ಮಾರುಕಟ್ಟೆಗೆ ಸ್ಥಳಾವಕಾಶ ಮಾಡಿಕೊಡಲು ಮನವಿ ಮಾಡಲಾಗಿದ್ದು, ಹೂಲಿಹಳ್ಳಿ ಸಮೀಪದ ಮೆಗಾ ಮಾರ್ಕೆಟ್‌ನಲ್ಲಿ ಮೆಣಸಿನಕಾಯಿ ವಹಿವಾಟು ನಡೆಸಲು ಪರವಾನಗಿ ಪಡೆಯುವುದಿಲ್ಲ ಎಂದು ಇಲ್ಲಿನ ವರ್ತಕರ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.

ಬುಧವಾರ ನಡೆದ ತುರ್ತು ಸಭೆಯಲ್ಲಿ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ್ರ ಪಾಟೀಲ ಮಾತನಾಡಿ, ‘ಬ್ಯಾಡಗಿ ಮಾರುಕಟ್ಟೆಗೆ ನೂರಾರು ವರ್ಷಗಳ ಇತಿಹಾಸವಿದೆ. ವಿಶ್ವ ಮಾರುಕಟ್ಟೆಯಲ್ಲಿ ‘ಬ್ಯಾಡಗಿ ಮೆಣಸಿನಕಾಯಿ’ ಎಂದು ಪ್ರಸಿದ್ಧಿ ಪಡೆಯಲು ಇಲ್ಲಿನ ಲಕ್ಷಾಂತರ ಜನರ ಶ್ರಮ ಹಾಗೂ ರೈತರ ಸಹಕಾರವಿದೆ. ಮೂರು ದಶಕಗಳ ಹಿಂದೆ ಹತ್ತಿಪ್ಪತ್ತು ಸಾವಿರ ಚೀಲಗಳಷ್ಟು ಆವಕವಾಗುತ್ತಿದ್ದ ಮೆಣಸಿನಕಾಯಿ, ಈಗ ಒಂದೇ ದಿನದಲ್ಲಿ 4 ಲಕ್ಷ ಚೀಲಗಳಿಗೆ ತಲುಪಿದೆ. ವಾರ್ಷಿಕ ₹2 ಸಾವಿರ ಕೋಟಿ ವಹಿವಾಟು ನಡೆಸುತ್ತಿದ್ದು, ದೇಶದಲ್ಲಿ ಎರಡನೇ ಅತೀ ದೊಡ್ಡ ವ್ಯಾಪಾರಿ ಕೇಂದ್ರವಾಗಿದೆ’ ಎಂದರು.

‘ಮಾರುಕಟ್ಟೆ ಪ್ರಾಂಗಣದಲ್ಲಿ ಮೆಣಸಿನಕಾಯಿ ವಹಿವಾಟು ಮಾತ್ರ ನಡೆಯುತ್ತಿದ್ದು, ಇದನ್ನೇ ನೆಚ್ಚಿಕೊಂಡು ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ. ಸಾವಿರಾರು ಕೋಟಿ ಖರ್ಚು ಮಾಡಿ ಶೈತ್ಯಾಗಾರ, ಪೌಡರ್‌ ಫ್ಯಾಕ್ಟರಿ ಹಾಗೂ ಇನ್ನಿತರ ಉದ್ದಿಮೆಗಳನ್ನು ಸ್ಥಾಪಿಸಲಾಗಿದೆ. ಸುಮಾರು 6 ತಿಂಗಳು ನಡೆಯುವ ಮೆಣಸಿನಕಾಯಿ ವಹಿವಾಟಿನಲ್ಲಿ ಒಂದು ತಿಂಗಳು ಮಾತ್ರ ಸ್ಥಳಾವಕಾಶದ ಅಭಾವವಾಗುತ್ತದೆ. ಮಾರುಕಟ್ಟೆ ಪ್ರಾಂಗಣದಲ್ಲಿರುವ ಅನುಪಯುಕ್ತ ನಿವೇಶನ ಹಾಗೂ ಕಟ್ಟಡಗಳನ್ನು ತೆರವುಗೊಳಿಸಿ ದಲಾಲರಿಗೆ ಅನುಕೂಲ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.

ವರ್ತಕ ಬಸವಣ್ಣೆಪ್ಪ ಛತ್ರದ ಮಾತನಾಡಿ, ‘ಬ್ಯಾಡಗಿ ಮಾರುಕಟ್ಟೆ ಜೇನುಗೂಡಿದ್ದಂತೆ. ಅದಕ್ಕೆ ಕಲ್ಲು ಹೊಡೆಯುವ ಕೆಲಸ ಯಾರಿಂದಲೂ ಆಗಬಾರದು. ಮೆಗಾ ಮಾರುಕಟ್ಟೆಯಲ್ಲಿ ನಾವು ವಹಿವಾಟು ನಡೆಸುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೇವೆ’ ಎಂದರು.

ವರ್ತಕರ ಸಂಘದ ಗೌರವ ಕಾರ್ಯದರ್ಶಿ ವಿ.ಎಸ್‌.ಮೋರಿಗೇರಿ ಮಾತನಾಡಿ, ‘ಪ್ರಾಂಗಣದ ವ್ಯಾಪ್ತಿ ಹೆಚ್ಚಿಸುವಂತೆ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಬ್ಯಾಡಗಿ ಅಸ್ತಿತ್ವಕ್ಕೆ ಧಕ್ಕೆಯಾಗುವಂತಹ ಹೇಳಿಕೆ ನೀಡಿರುವುದು ಖಂಡನೀಯ’ ಎಂದು ಹೇಳಿದರು.

‘ಹೂಲಿಹಳ್ಳಿ ಬಳಿ ಮೆಗಾ ಮಾರುಕಟ್ಟೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವ ಕುರಿತು ಕೋರ್ಟ್‌ನಲ್ಲಿ ವ್ಯಾಜ್ಯೆ ನಡೆಯುತ್ತಿದೆ. ಆದರೆ, ರಾಣೆಬೆನ್ನೂರ ಎಪಿಎಂಸಿ ಕಾರ್ಯದರ್ಶಿ ತರಾತುರಿಯಲ್ಲಿ ಮೆಗಾ ಮಾರುಕಟ್ಟೆಯಲ್ಲಿ ನಿವೇಶನ ಹಂಚಿಕೆ ಮಾಡುವ ಮೂಲಕ ವರ್ತಕರ ದಾರಿ ತಪ್ಪಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ, ಕದರಮಂಡಲಗಿ ರಸ್ತೆಯಲ್ಲಿರುವ ನೂರು ಎಕರೆ ಸರ್ಕಾರಿ ಭೂಮಿಯನ್ನು ಮಾರುಕಟ್ಟೆಗೆ ಮಂಜೂರು ಮಾಡಿಸಲಿ’ ಎಂದು ವರ್ತಕ ಸುರೇಶ ಮೇಲಗಿರಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT