ಶಿಗ್ಗಾವಿ (ಹಾವೇರಿ): ‘ಚುನಾವಣಾ ಲಾಭಕ್ಕಾಗಿ ನಾನು ರಾಜಕಾರಣ ಮಾಡುವುದಿಲ್ಲ. ಸಣ್ಣತನದ ರಾಜಕಾರಣ ನನ್ನ ಡಿಕ್ಷನರಿಯಲ್ಲೇ ಇಲ್ಲ. ಪ್ರತಿಫಲದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸರ್ವ ಸಮುದಾಯಗಳಿಗೂ ಮೀಸಲಾತಿಯ ನ್ಯಾಯವನ್ನು ಕೊಟ್ಟಿದ್ದೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶಿಗ್ಗಾವಿಯಲ್ಲಿ ಭಾನುವಾರ ಆಯೋಜಿಸಿದ್ದ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯ ಭವನ ಉದ್ಘಾಟನೆ ಹಾಗೂ ಹರಧ್ಯಾನ ಮಂದಿರದ ಶಂಕುಸ್ಥಾಪನಾ ಕಾರ್ಯವನ್ನು ನೆರವೇರಿಸಿ ಅವರು ಮಾತನಾಡಿದರು.
‘ಪಂಚಮಸಾಲಿ ಗುರುಗಳ ಮೇಲೆ ಒತ್ತಡ ತಂದಿದ್ದೇನೆ ಎಂದು ವಿರೋಧ ಪಕ್ಷದ ನಾಯಕರೊಬ್ಬರು ದೂರಿದ್ದಾರೆ. ಪ್ರಮಾಣ ಮಾಡಿ ಹೇಳುತ್ತೇನೆ, ನಾನು ಯಾವುದೇ ಸ್ವಾಮೀಜಿಯ ಮೇಲೆ ಒತ್ತಡ ತಂದಿಲ್ಲ. ಮೀಸಲಾತಿ ಕೊಟ್ಟರೆ ಒಪ್ಪಿಕೊಳ್ಳಬೇಡಿ ಎಂದು ಸ್ವಾಮೀಜಿಯವರ ಮೇಲೆ ಕೆಲವರು ಒತ್ತಡ ಹೇರಿದ್ದರು. ಇದರಿಂದಲೇ ಮೀಸಲಾತಿ ಕಲ್ಪಿಸುವುದು ತಡವಾಯಿತು’ ಎಂದ ಬೊಮ್ಮಾಯಿ ಅವರು ಡಿ.ಕೆ.ಶಿವಕುಮಾರ್ ಅವರ ಆರೋಪಕ್ಕೆ ತಿರುಗೇಟು ನೀಡಿದರು.
ಆತ್ಮಸಾಕ್ಷಿಯಾಗಿ ಕೆಲಸ ಮಾಡುವಾಗ ಯಾರಿಗೂ ಹೆದರುವ ಅಗತ್ಯವಿಲ್ಲ. ಸಾಧ್ಯವಿಲ್ಲ ಎಂಬುದನ್ನು ಸಾಧಿಸಿ ತೋರಿದಾಗ ಬೇರೆಯವರಿಗೆ ಅದನ್ನು ಜೀರ್ಣಿಸಿಕೊಳ್ಳಲು ಆಗುವುದಿಲ್ಲ. ಕೂಡಲಸಂಗದಮ ಬಸವಜಯ ಮೃತ್ಯುಂಜಯ ಶ್ರೀಗಳ ದಿಟ್ಟ ಹೋರಾಟ ಮತ್ತು ಹರಿಹರ ಪೀಠದ ವಚನಾನಂದ ಶ್ರೀಗಳ ಮಾರ್ಗದರ್ಶನದಿಂದ ‘2ಡಿ’ ಮೀಸಲಾತಿ ಕಲ್ಪಿಸಲು ಸಾಧ್ಯವಾಯಿತು ಎಂದರು.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಬೇಕು ಎಂದು 1994ರಿಂದಲೂ ಬೇಡಿಕೆ ಇತ್ತು. ಎಲ್ಲರೂ ಮುಂದೆ ಹಾಕಿಕೊಂಡು ಬಂದರು. 2016ರಲ್ಲಿ ಮೀಸಲಾತಿ ಬೇಡಿಕೆಯ ಅರ್ಜಿಯನ್ನು ತಿರಸ್ಕರಿಸಲಾಯಿತು. ಅಂದು ಯಾವ ಸರ್ಕಾರವಿತ್ತು? ಯಾರು ಸಿಎಂ ಆಗಿದ್ದರು? ಏಕೆ ತಿರಸ್ಕರಿಸಿದರು? ಬಾಯಿಯಲ್ಲಿ ಕಡುಬು ಇಟ್ಟುಕೊಂಡು ಕೂತಿದ್ರಾ... ಎಂದು ಆಕ್ರೋಶ ಭರಿತರಾಗಿ ಪ್ರಶ್ನಿಸಿದರು.
ಹರಿಹರ ಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ, ‘ಪಂಚಮಸಾಲಿ ಸಮುದಾಯದ ಮುಖ್ಯಮಂತ್ರಿಯೇ ಇದ್ದರೂ ಮೀಸಲಾತಿ ಕಲ್ಪಿಸಲು ಸಾಧ್ಯವಾಗುತ್ತಿರಲಿಲ್ಲ. ಬೊಮ್ಮಾಯಿ ನುಡಿದಂತೆ ನಡೆದಿದ್ದಾರೆ. ಮೀಸಲಾತಿ ಎಂಬ ಜೇನುಗೂಡಿಗೆ ಕೈ ಹಾಕಿ, ಎಲ್ಲ ಸಮುದಾಯಕ್ಕೂ ಜೇನಿನ ಸವಿ ನೀಡಿದ್ದಾರೆ. ನಮ್ಮ ಸಮುದಾಯ ಬೊಮ್ಮಾಯಿ ಅವರಿಗೆ ಸದಾ ಕೃತಜ್ಞರಾಗಿರಬೇಕು. ಅವರ ಜೊತೆ ಗಟ್ಟಿಯಾಗಿ ಸದಾ ನಿಲ್ಲಬೇಕು’ ಎಂದು ಕರೆ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.