ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಂಗ್ರೆಸ್‌ನ ಗೂಂಡಾಗಿರಿ ರಾಜಕಾರಣದ ಬಗ್ಗೆ ಚರ್ಚೆಯಾಗಲಿ’

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಹೇಳಿಕೆ
Last Updated 17 ಡಿಸೆಂಬರ್ 2020, 12:51 IST
ಅಕ್ಷರ ಗಾತ್ರ

ಹಾವೇರಿ: ‘ವಿಧಾನ ಪರಿಷತ್‌ಗೆ ಐತಿಹಾಸಿಕ ಹಿನ್ನೆಲೆಯಿದ್ದು, ಅದರ ಗೌರವವನ್ನು ಕಾಂಗ್ರೆಸ್‌ ಮಣ್ಣುಪಾಲು ಮಾಡಿದೆ. ಕಾಂಗ್ರೆಸ್‌ನ ಗೂಂಡಾಗಿರಿ ರಾಜಕಾರಣದ ಬಗ್ಗೆ ಚರ್ಚೆಯಾಗಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ತಿಳಿಸಿದರು.

ನಗರದಲ್ಲಿ ಗುರುವಾರ ಬಿಜೆಪಿ ಜಿಲ್ಲಾ ಕಾರ್ಯಾಲಯದ ಶಿಲಾಫಲಕ ಅನಾವರಣ ಮಾಡಿ ಅವರು ಮಾತನಾಡಿದರು.

‘ಇಂದಿರಾಗಾಂಧಿ ಅವರ ಕಾಲದಲ್ಲಿ ಚುನಾವಣೆಗೆ ಲೈಟ್‌ಕಂಬ ನಿಲ್ಲಿಸಿದರೂ ಕಾಂಗ್ರೆಸ್‌ ಗೆಲ್ಲುತ್ತೆ ಎಂಬ ಮಾತಿತ್ತು. ಆ ಕಾಲಘಟ್ಟದಲ್ಲಿ ಪಂಚಾಯ್ತಿಯಿಂದ ಪಾರ್ಲಿಮೆಂಟ್‌ವರೆಗೂ ಕಾಂಗ್ರೆಸ್‌ ಇತ್ತು. ಇತ್ತೀಚೆಗೆ ಕಾಂಗ್ರೆಸ್‌ ಪರಿಸ್ಥಿತಿ ಏನಾಗಿದೆಯೆಂದರೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರೇ ಸೋಲುವ ಭೀತಿಯಿಂದ ಸ್ವಕ್ಷೇತ್ರ ತೊರೆದು ಕೇರಳಕ್ಕೆ ಓಡಿ ಬರಬೇಕಾಯಿತು. ಸೋನಿಯಾಗಾಂಧಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾದ ದುಸ್ಥಿತಿ ಎದುರಾಯಿತು’ ಎಂದು ಟೀಕಿಸಿದರು.

ಸಮಾಜದ ಚಿಂತನೆ ಮರೆತ ಕಾಂಗ್ರೆಸ್‌:

‘ಬಿಜೆಪಿಗೆ ಅಧಿಕಾರ ಸಿಕ್ಕಾಗ ಸಮಾಜದ ಚಿಂತನೆ ಮತ್ತು ಸಾಮಾಜಿಕ ಕಾರ್ಯವನ್ನು ಮರೆಯಲಿಲ್ಲ. ಕಾರ್ಯಕರ್ತರನ್ನು ಬೆಳೆಸುತ್ತಾ, ಪಕ್ಷವೂ ಬೆಳೆಯಿತು. ಹೀಗಾಗಿಯೇ ದೇಶದಲ್ಲೇ ಅತಿ ಹೆಚ್ಚು ಸಂಸದರನ್ನು ಮತ್ತು ಜಗತ್ತಿನಲ್ಲೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ದೊಡ್ಡ ಪಕ್ಷವಾಗಿದೆ.ಆದರೆ, 150 ವರ್ಷ ಸುದೀರ್ಘ ಇತಿಹಾಸ ಹೊಂದಿರುವ ಕಾಂಗ್ರೆಸ್‌ನಲ್ಲಿ ಈಗ ಅಧ್ಯಕ್ಷರಿಲ್ಲದ ಸ್ಥಿತಿಯಿದೆ. ಸ್ವಂತ ಕಾರ್ಯಾಲಯಗಳಿಲ್ಲದ ಕಾಂಗ್ರೆಸ್‌ ಆಗಿದೆ’ ಎಂದು ವ್ಯಂಗ್ಯವಾಡಿದರು.

‘ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರದಲ್ಲಿ ಮುಳುಗೆದ್ದ ಕಾಂಗ್ರೆಸ್‌ ನಾಯಕರು, ಸಮಾಜದ ಚಿಂತನೆ ಮರೆತು ತಮ್ಮ ಮನೆ–ಮಠಗಳನ್ನು ಕಟ್ಟಿಕೊಂಡರು. ಪಕ್ಷದ ಕಾರ್ಯಾಲಯಗಳನ್ನು ಕಟ್ಟುವುದನ್ನು ಮರೆತರು. ಹೀಗಾಗಿಯೇ ಅದಕ್ಕೆ ಇಂಥ ಹೀನಾಯ ಸ್ಥಿತಿ ಬಂದಿದೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT