ಬ್ಯಾಡಗಿ: ‘ಮಾನವ ಕಳ್ಳಸಾಗಣೆಕೆ ತಡೆಗೆ ಎಲ್ಲಾ ಇಲಾಖೆಗಳ ಸಹಕಾರ ಅಗತ್ಯವಾಗಿದೆ’ ಎಂದು ಹಿರಿಯ ನ್ಯಾಯಾಧೀಶ ಅಮೋಲ್ ಹಿರಿಕುಡೆ ಹೇಳಿದರು.
ತಾಲ್ಲೂಕಿನ ಛತ್ರ ಗ್ರಾಮದ ನಿಂಗಮ್ಮ ಕಳಸೂರಮಠ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಆರಕ್ಷಕ ಇಲಾಖೆಗಳ ಸಹಯೋಗದಲ್ಲಿ ಈಚೆಗೆ ನಡೆದ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಅಂಗಾಂಗಗಳ ಮಾರಾಟ, ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಗಳಿಗೆ ಮಾನವ ಕಳ್ಳಸಾಗಾಣಿಕೆ ನಡೆಯುತ್ತದೆ. ಜನರು ಜವಾಬ್ದಾರಿಯುತವಾಗಿ ತಡೆಗಟ್ಟಲು ಕೆಲಸ ಮಾಡಬೇಕಾಗಿದೆ’ ಎಂದರು.
ಕಿರಿಯ ನ್ಯಾಯಾಧೀಶ ಸುರೇಶ ವಗ್ಗನವರ ಮಾತನಾಡಿ, ‘ಹೆಂಗಸರು ಆಮಿಷಗಳಿಗೆ ಬಲಿಯಾಗಿ ಮೋಸ ಹೋಗುವುದನ್ನು ತಡೆಯಬೇಕು, ಮಕ್ಕಳಿಗೆ ಸರಿ, ತಪ್ಪುಗಳ ಮಾಹಿತಿ ನೀಡಬೇಕು’ ಎಂದರು.
ಪಿಎಸ್‌ಐ ಬಿ.ಎಸ್.ಅರವಿಂದ ಮಾತನಾಡಿ, ‘ಮಾನವ ಕಳ್ಳ ಸಾಗಾಣಿಕೆಯ ಕಾಯ್ದೆ ಕುರಿತು ಎಲ್ಲರಲ್ಲಿಯೂ ಅರಿವು ಮೂಡಿಸಬೇಕು. ಅವಿದ್ಯಾವಂತರು ಮೋಸ ಹೋಗುವ ಸಂಭವ ಹೆಚ್ಚಿದೆ. ಈ ಕುರಿತು ಅವರಲ್ಲಿ ಜಾಗೃತಿ ಮೂಡಿಸಬೇಕು’ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಸ್.ಎನ್.ಬಾರ್ಕಿ, ಕಾರ್ಯದರ್ಶಿ ಎಂ.ಪಿ.ಹಂಜಿಗಿ, ಮುಖ್ಯಶಿಕ್ಷಕ ಬಿ.ರಾಜಶೇಖರಪ್ಪ, ಶಾಲಾ ಸಿಬ್ಬಂದಿ ಹಾಗೂ ಮಕ್ಕಳು ಪಾಲ್ಗೊಂಡಿದ್ದರು.