ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಜಿಲ್ಲಾಸ್ಪತ್ರೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ ಭೇಟಿ

ಐಸೋಲೇಷನ್‌ ಕೊಠಡಿಗಳ ಪರಿಶೀಲನೆ
Last Updated 26 ಮಾರ್ಚ್ 2020, 12:50 IST
ಅಕ್ಷರ ಗಾತ್ರ

ಹಾವೇರಿ: ಕೊರೊನಾ ವೈರಸ್ ಹರಡದಂತೆ ಹಗಲಿರುಳು ಶ್ರಮಿಸುತ್ತಿರುವ ವೈದ್ಯರಿಗೆ ಹಾಗೂ ಅರೆವೈದ್ಯಕೀಯ ಸಿಬ್ಬಂದಿಗೆ ಕೈಮುಗಿದ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಕೃತಜ್ಞತೆ ಸಲ್ಲಿಸಿದ ಅಪರೂಪದ ಪ್ರಸಂಗ ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಗುರುವಾರ ನಡೆಯಿತು.

ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಬಿ.ಸಿ.ಪಾಟೀಲ ಅವರು ಕೊರೊನಾ ವೈರಸ್ ಶಂಕಿತರ ಚಿಕಿತ್ಸೆಗಾಗಿ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಸಿದ್ಧವಾಗಿರುವ 10 ಹಾಸಿಗೆಯ ವಿಶೇಷ ಐಸೋಲೇಷನ್ ಕೊಠಡಿಗಳಿಗೆ ಭೇಟಿ ನೀಡಿ ಗುರುವಾರ ಪರಿಶೀಲನೆ ನಡೆಸಿದರು.

ಆಸ್ಪತ್ರೆಯಿಂದ ತೆರಳುವ ಮುನ್ನ ಆಸ್ಪತ್ರೆ ಮುಂಬಾಗಿಲಿನಲ್ಲಿ ವೈದ್ಯಕೀಯ ಹಾಗೂ ಅರೆವೈದ್ಯಕೀಯ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿ, ‘ನಿಮ್ಮ ಸೇವೆ ಅನುಪಮವಾದದ್ದು. ಹಗಲಿರುಳು ಕೊರೊನಾದಂತಹ ಮಾರಕ ವೈರಸ್ಸಿನ ವಿರುದ್ಧ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ನಿಮಗೆ ನಮಸ್ಕಾರ ಎಂದು ಕೈಮುಗಿದರು. ನಿಮ್ಮೊಂದಿಗೆ ನಾನಿದ್ದೇನೆ, ಸರ್ಕಾರವಿದೆ. ಧೈರ್ಯವಾಗಿ ಕೆಲಸಮಾಡಿ. ನಿಮ್ಮ ಎಲ್ಲ ಕೆಲಸಗಳಿಗೆ ನಾವು ಬೆಂಬಲವಾಗಿರುತ್ತೇವೆ. ಸಮಾಜ ಬೆಂಬಲವಾಗಿರುತ್ತದೆ ಎಂದು ವೈದ್ಯ ವೃಂದಕ್ಕೆ ಆತ್ಮವಿಶ್ವಾಸ ತುಂಬಿದರು. ಈ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿ ಭಾವುಕವಾಗಿ ನೈತಿಕ ಬೆಂಬಲ ತುಂಬಿದ ಕೃಷಿ ಸಚಿವರಿಗೆ ಪ್ರತಿ ನಮಸ್ಕಾರ ಸಲ್ಲಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿ, ‘ರಾಜ್ಯದ ಸಚಿವನಾಗಿರುವ ನಾನು ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ಟಾಸ್ಕಫೋರ್ಸ್ ಕಾರ್ಯಾಚರಣೆ, ವೈದ್ಯಕೀಯ ಸಿಬ್ಬಂದಿಯ ಸೇವಾ ನಿರ್ವಹಣೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಿದ್ದೆ. ಅದರಂತೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಇಂದು ಭೇಟಿ ನೀಡಿ, ವೈದ್ಯಕೀಯ ಸೌಲಭ್ಯ ಹಾಗೂ ವೈದ್ಯರು, ಸ್ವಚ್ಛತಾ ಸಿಬ್ಬಂದಿ ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಿದೆ. ವೈದ್ಯರು, ದಾದಿಯರು ಹಾಗೂ ಸ್ವಚ್ಛತಾ ಸಿಬ್ಬಂದಿ ಬಹಳ ಉತ್ಸುಕತೆಯಿಂದ ಕೆಲಸ ಮಾಡುತ್ತಿರುವುದು ಕಂಡು ತಮಗೆ ಸಂತಸವಾಗಿದೆ ಎಂದರು.

ಕೊರೊನಾ ಸೋಂಕು ಪಸರಿಸದಂತೆ ತಡೆಯುವಲ್ಲಿ ಹಾಗೂ ಆಸ್ಪತ್ರೆಯಲ್ಲಿ ಶಂಕಿತರನ್ನು ನೋಡಿಕೊಳ್ಳುತ್ತಿರುವುದಕ್ಕೆ ಕೋಟಿ ನಮನಗಳನ್ನು ಸಲ್ಲಿಸುತ್ತೇನೆ. ಕೊರೋನಾದಂತಹ ಮಹಾಮಾರಿ ರಾಜ್ಯ ಸೇರಿದಂತೆ ರಾಷ್ಟ್ರವನ್ನೇ ತಲ್ಲಣಗೊಳಿಸಿದೆ. ದೇಶವನ್ನು ಲಾಕ್‍ಡೌನ್‍ಗೊಳಿಸಿರುವುದು ಒಳ್ಳೆಯ ಸಂಗತಿ. ಲಾಕ್‍ಡೌನ್ ಇನ್ನಷ್ಟು ಪರಿಣಾಮಕಾರಿಯಾಗಿಬೇಕು. ಈ ನಿಟ್ಟಿನಲ್ಲಿ ಕ್ಷೇತ್ರ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಸರ್ಕಾರ ಮತ್ತು ಜಿಲ್ಲಾಡಳಿತದೊಂದಿಗೆ ಜನರು ಸಹಕರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇದು ಕೇವಲ ಪೊಲೀಸ್ ಹಾಗೂ ಅಧಿಕಾರಿಗಳ ಕೆಲಸ ಎಂದು ಭಾವಿಸಬಾರದು. ಕೊರೊನಾ ನಿರ್ಬಂಧಕ್ಕೆ ಮನೆಯಿಂದ ಹೊರಬರದ ರೀತಿಯಲ್ಲಿ ಜನರು ತಮ್ಮನ್ನು ತಾವು ನಿರ್ಬಂಧಿಸಬೇಕು. ಯಾರೂ ಎದೆಗುಂದದೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದಂತೆ ಏಪ್ರಿಲ್‌ 14ರವರೆಗೆ ಲಾಕ್‍ಡೌನ್‍ಗೆ ಸಹಕರಿಸಬೇಕು ಎಂದು ಮಾಧ್ಯಮಗಳ ಮೂಲಕ ಜನರಿಗೆ ಮನವಿ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT