ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ನಂಟು: ಹಾವೇರಿಯಲ್ಲಿ ಮತ್ತಿಬ್ಬರಿಗೆ ಸೋಂಕು

ಜಿಲ್ಲೆಯಲ್ಲಿ 18ಕ್ಕೇರಿದ ಕೋವಿಡ್‌–19 ಪ್ರಕರಣಗಳು: ಆರು ಮಂದಿ ಗುಣಮುಖ
Last Updated 4 ಜೂನ್ 2020, 15:35 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಗುರುವಾರ ಮತ್ತಿಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಮುಂಬೈನಿಂದ ಪತಿ ಹಾಗೂ ಮಗಳೊಂದಿಗೆ ಆಗಮಿಸಿದ್ದ 46 ವರ್ಷದ ತಾಯಿಗೂ ಸೋಂಕು ದೃಢಗೊಂಡಿದೆ ಹಾಗೂ ಬಂಕಾಪುರ ಪಟ್ಟಣದ ಕಂಟೋನ್ಮೆಂಟ್ ಏರಿಯಾದ ಮತ್ತೊಬ್ಬ 63 ವರ್ಷದ ವ್ಯಕ್ತಿಗೂ ಸೋಂಕು ದೃಢ ಪಟ್ಟಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ತಿಳಿಸಿದ್ದಾರೆ.

ಮೂಲತಃ ಶಿಗ್ಗಾವಿ ಪಟ್ಟಣದ ನಿವಾಸಿಯಾದ 43 ವರ್ಷದ ಮಹಿಳೆ ತನ್ನ ಪತಿ ಹಾಗೂ ಮಗಳೊಂದಿಗೆ ಮುಂಬೈನಿಂದ ಆಗಮಿಸಿದ್ದರು. ಮೇ 31ರಂದು ಪತಿ (ಪಿ-3271) ಹಾಗೂ ಜೂನ್ 2ರಂದು ಮಗಳಿಗೆ (ಪಿ-3668) ಸೋಂಕು ದೃಢಪಟ್ಟಿತ್ತು. ಇದೀಗ ಮಹಿಳೆಗೂ ಸೋಂಕು ತಗಲಿರುವ ಹಿನ್ನೆಲೆಯಲ್ಲಿ ಮುಂಬೈನಿಂದ ಬಂದ ಕುಟುಂಬದ ಮೂವರು ಸೋಂಕಿತರಾಗಿದ್ದಾರೆ. ನಿಗದಿತ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬಂಕಾಪುರದ 63 ವರ್ಷದ ವ್ಯಕ್ತಿಗೂ ಇಂದು ಸೋಂಕು ದೃಢಪಟ್ಟಿದೆ. ಈ ವ್ಯಕ್ತಿಯೂ ಮೇ 22ರಂದು ಸೋಂಕು ದೃಢಪಟ್ಟ 22 ವರ್ಷದ ಅನಾನಸ್ ಹಣ್ಣನ್ನು ಮುಂಬೈ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿದ್ದ ವಾಹನ ಚಾಲಕ ಪಿ-1691ರ ವ್ಯಕ್ತಿಯ ಪ್ರಾಥಮಿಕ ಸಂಪರ್ಕದ ಓರ್ವ ವ್ಯಕ್ತಿಯ ಹತ್ತಿರದ ಸಂಬಂಧಿಯಾಗಿದ್ದು, ಬಂಕಾಪುರ ಪಟ್ಟಣದ ಕೊಟ್ಟಿಗೇರಿ ಕುರುಬರ ಕೇರಿ ನಿವಾಸಿಯಾಗಿದ್ದಾನೆ.

ಮುಂಬೈನ ಸಿದ್ದಿವಿನಾಯಕ ಚಾಳ ಸಾಂತಾಕ್ರೂಸ್‍ನಲ್ಲಿ ಪತಿ ಹಾಗೂ ಮಗಳೊಂದಿಗೆ ವಾಸವಾಗಿದ್ದ 46 ವರ್ಷದ ಇವರು ಓಲಾ ಕಂಪನಿಯ ಕಾರನ್ನು ಬಾಡಿಗೆಗೆ ಪಡೆದು ಮೇ 19ರಂದು ಮುಂಬೈನಿಂದ ಹೊರಟು ಪುಣೆ, ನಿಪ್ಪಾಣಿ, ಬೆಳಗಾವಿ, ಹುಬ್ಬಳ್ಳಿ ಮಾರ್ಗವಾಗಿ ತಡಸ ಚೆಕ್ ಪೋಸ್ಟ್‌ಗೆ ಅಂದು ರಾತ್ರಿ 9.30ಕ್ಕೆ ಆಗಮಿಸಿದ್ದರು. ಇವರನ್ನು ವೈದ್ಯಕೀಯ ತಪಾಸಣೆ ನಂತರ ಜಕ್ಕಿನಕಟ್ಟೆ ರಾಣಿ ಚನ್ನಮ್ಮ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಮೇ 24ರಂದು ಸ್ವಾಬ್ ಪರೀಕ್ಷೆಗೆ ಕಳಹಿಸಲಾಗಿತ್ತು. ಜೂನ್ 3ರಂದು ರಾತ್ರಿ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಕ್ಕಿನಕಟ್ಟೆ ರಾಣಿ ಚನ್ನಮ್ಮ ವಸತಿ ಶಾಲೆಯ 100 ಮೀಟರ್ ವ್ಯಾಪ್ತಿಯನ್ನು ಈಗಾಗಲೇ ‘ಕಂಟೈನ್‍ಮೆಂಟ್ ಜೋನ್’ ಎಂದು ಘೋಷಿಸಲಾಗಿದೆ ಹಾಗೂ ಜಕಿನಕಟ್ಟಿ ಗ್ರಾಮವನ್ನು ‘ಬಫರ್ ಜೋನ್’ ಎಂದು ಗುರುತಿಸಲಾಗಿದೆ. ಬಂಕಾಪುರ ಪಟ್ಟಣದಲ್ಲಿ ವ್ಯಕ್ತಿ ವಾಸಿಸುತ್ತಿರುವ ಬೀದಿಯನ್ನು ಕಂಟೈನ್‍ಮೆಂಟ್ ಜೋನ್ ಎಂದು ಘೋಷಿಸಲಾಗಿದೆ ಹಾಗೂ ಬಂಕಾಪುರ ಪಟ್ಟಣವನ್ನು ಬಫರ್ ಜೋನ್ ಎಂದು ಗುರುತಿಸಲಾಗಿದೆ. ಈ ಪ್ರದೇಶಗಳಿಗೆ ಶಿಗ್ಗಾವಿ ತಾಲ್ಲೂಕು ತಹಶೀಲ್ದಾರ್‌ ಅವರನ್ನು ಇನ್ಸಿಡೆಂಟ್‌ ಕಮಾಂಡರ್ ಎಂದು ನೇಮಿಸಲಾಗಿದೆ.

ಇಂದಿನ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಈವರೆಗೆ 18 ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಆರು ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಉಳಿದವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT