ಗುರುವಾರ , ಫೆಬ್ರವರಿ 25, 2021
29 °C
ಬಿಡಾಡಿ ದನ, ಕುದುರೆಗಳ ಹಾವಳಿಗೆ ಜನ ಕಂಗಾಲು; ಇಂದಿನಿಂದ ವಿಶೇಷ ಕಾರ್ಯಾಚರಣೆ ಭರವಸೆ

ಸಂಚಾರಕ್ಕೆ ಸಂಚಕಾರ, ಕೊಟ್ಟಿಗೆಯಾದ ಹೆದ್ದಾರಿ!

ಎಂ.ಸಿ.ಮಂಜುನಾಥ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಸತತ ಮಳೆಯಿಂದ ನಗರದ ರಸ್ತೆಗಳು ರಾಡಿ ಆಗಿರುವುದು ಒಂದೆಡೆಯಾದರೆ, ಹಿಂಡು ಹಿಂಡಾಗಿ ರಸ್ತೆ ಮಧ್ಯದಲ್ಲಿ ಮಲಗುತ್ತಿರುವ ಬಿಡಾಡಿ ದನಗಳು ವಾಹನಗಳ ಸಂಚಾರಕ್ಕೆ ಸಂಚಕಾರ ಒಡ್ಡುತ್ತಿವೆ. ಇನ್ನು ಹೆದ್ದಾರಿಗಳಲ್ಲಿ ಅಲೆಮಾರಿಗಳಂತೆ ತಿರುಗುತ್ತಿರುವ ಕುದುರೆಗಳು, ಒಮ್ಮೊಮ್ಮೆ ಅಮಲು ಬಂದಂತೆ ವರ್ತಿಸಿ ಸವಾರರ ಮೇಲೆಯೇ ಎರಗುತ್ತಿವೆ. ಇದೆಲ್ಲ ಗೊತ್ತಿದ್ದರೂ ನಗರಸಭೆ ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದೆ.

ಐದು ವರ್ಷಗಳಿಂದ ನಗರಸಭೆ ಅಧಿಕಾರಿಗಳು ಕಾರ್ಯಾಚರಣೆ ನಡೆಸದ ಕಾರಣ ಹಾವೇರಿ ನಗರದಲ್ಲಿ ಬಿಡಾಡಿ ದನಗಳ ಸಂಖ್ಯೆ 200 ದಾಟಿದೆ. ಸಂಚಾರ ಪೊಲೀಸರ ಮಾಹಿತಿ ಪ್ರಕಾರ 40ಕ್ಕೂ ಹೆಚ್ಚು ಕುದುರೆಗಳು ಬೀದಿಗೆ ಬಿದ್ದಿವೆ. ಸವಾರರ ಸುರಕ್ಷತೆ ದೃಷ್ಟಿಯಿಂದ ಅವುಗಳನ್ನು ಹಿಡಿಸುವಂತೆ ಪೊಲೀಸ್ ಇಲಾಖೆ ಹತ್ತಾರು ಪತ್ರಗಳನ್ನು ಬರೆದರೂ, ನಗರಸಭೆ ಇಷ್ಟು ದಿನ ಕಿವಿ ಮೇಲೆ ಹಾಕಿಕೊಂಡಿಲ್ಲ ಎಂಬ ಆರೋಪವಿದೆ.

ಮಾರುಕಟ್ಟೆ ಪ್ರದೇಶದಲ್ಲಿ ಹಾಗೂ ರಸ್ತೆ ಬದಿಗಳಲ್ಲಿ ಸಿಗುವ ತ್ಯಾಜ್ಯ, ಪ್ಲಾಸ್ಲಿಕ್, ಇನ್ನಿತರ ತರಕಾರಿ ತಿನ್ನುವ ದನಗಳು,  ಫುಟ್‌ಪಾತ್‌ನಲ್ಲೇ ಮೂತ್ರ ಹಾಗೂ ಸಗಣಿ ಹಾಕುತ್ತಿವೆ. ಇದರಿಂದ ಪಾದಚಾರಿಗಳು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಅವು ಯಾವುದೇ ಆತಂಕವಿಲ್ಲದೆ ಒಂದು ಬದಿಯಿಂದ ಮತ್ತೊಂದು ಬದಿಗೆ ರಸ್ತೆ ದಾಟುತ್ತಿದ್ದು, ವಾಹನ ಸವಾರರು ಕೊಂಚ ಮೈಮೆರೆತರೂ ಅಪಘಾತಕ್ಕೆ ಗುರಿಯಾಗುವುದು ನಿಶ್ಚಿತ ಎಂಬಂತಿದೆ. 

ಎಲ್ಲೆಲ್ಲಿ ಠಿಕಾಣಿ: ನಗರದ ಪ್ರಮುಖ ಸ್ಥಳಗಳಾದ ಹೊಸಮನಿ ಸಿದ್ದಪ್ಪ ವೃತ್ತ, ಎಂ.ಜಿ. ರಸ್ತೆ, ಎಸ್‌ಪಿ ಕಚೇರಿ ಮುಂಭಾಗ, ಪಿ.ಬಿ. ರಸ್ತೆ, ಜಿಲ್ಲಾ ಆಸ್ಪತ್ರೆಯ ಮುಂಭಾಗ, ನಗರಸಭೆ ಮುಂಭಾಗ, ತರಕಾರಿ ಮಾರುಕಟ್ಟೆ, ಕಾಗಿನಲೆ ರಸ್ತೆ, ಹಾನಗಲ್ ರಸ್ತೆ, ಹುಕ್ಕೇರಿ ಮಠದ ಎದುರು, ಜೆ.ಎಚ್‌. ಪಟೇಲ್‌ ವೃತ್ತ, ನಗರದ ಮಿನಿ ಬಸ್‌ ತಂಗುದಾಣದ ಬಳಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ.

ಹೆದ್ದಾರಿಗಳಲ್ಲಿ ನಿಮಿಷಕ್ಕೆ 120 ರಿಂದ 150 ವಾಹನಗಳು ಸಂಚರಿಸುತ್ತವೆ. ಸಿದ್ದಪ್ಪ ವೃತ್ತದಲ್ಲಿ ಸಿಗ್ನಲ್‌ ಬಿಟ್ಟರೂ ದನಗಳು ಮಾತ್ರ ವಾಹನಗಳಿಗೆ ದಾರಿ ಬಿಡುತ್ತಿಲ್ಲ. ಬೆಳಿಗ್ಗೆ ಕರ್ತವ್ಯಕ್ಕೆ ಬಂದ ಪೊಲೀಸರಿಗೆ, ದನಗಳನ್ನು ಓಡಿಸುವುದೇ ದೊಡ್ಡ ಕೆಲಸವಾಗಿದೆ. ಗೋವುಗಳ ರಕ್ಷಣೆ ಕುರಿತು ಭಾಷಣ ಬಿಗಿಯುವ ‘ಗೋರಕ್ಷಕ’ರೂ ಈ ಗೋವುಗಳ ಬಗ್ಗೆ ಕನಿಕರ ತೋರಿಸುತ್ತಿಲ್ಲ!

ಕೆಲವು ಬಿಡಾಡಿ ದನಗಳಿಗೆ, ಕುದುರೆಗಳಿಗೆ ರಸ್ತೆಗಳೇ ಕಾಯಂ ವಾಸ ಸ್ಥಾನವಲ್ಲ. ಹಗಲೆಲ್ಲ ರಸ್ತೆಯಲ್ಲಿ ಓಡಾಡಿ ಸಂಜೆಯಾಗುತ್ತಿದ್ದಂತೆ ಮಾಲೀಕರ ಮನೆ ಸೇರುತ್ತವೆ. ಮಾಲೀಕರು ಉದ್ದೇಶಪೂರ್ವಕವಾಗಿಯೇ ಅವುಗಳನ್ನು ಹೊರಗೆ ಬಿಡುತ್ತಿದ್ದಾರೆ. ರಸ್ತೆ ಹಾಗೂ ವಿಭಜಕದ ಪಕ್ಕದಲ್ಲಿ ಮಲಗುವ ದನ–ಕರು, ಕುದುರೆಗಳು ದಿಢೀರನೇ ಎದ್ದು ಸವಾರರನ್ನು ಗೊಂದಕ್ಕೀಡು ಮಾಡುತ್ತಿವೆ. 

ವಾರದಲ್ಲಿ 3 ಕುದುರೆ ಬಲಿ: ಕುದುರೆಗಳ ಕತ್ತಲಲ್ಲಿ ಸ್ಪಷ್ಟವಾಗಿ ಕಾಣಿಸದೆ ಎಷ್ಟೋ ಮಂದಿ ಕೊನೆ ಕ್ಷಣದಲ್ಲಿ ನಿಯಂತ್ರಣ ತಪ್ಪಿ ಅನಾಹುತಕ್ಕೆ ಗುರಿಯಾಗಿರುವ ಉದಾಹರಣೆಗಳೂ ಇವೆ. ಈ ವಾರದಲ್ಲೇ ಪುಣೆ–ಬೆಂಗಳೂರು ಹೆದ್ದಾರಿಯಲ್ಲಿ ಮೂರು ಕುದುರೆಗಳು ವಾಹನ ಗುದ್ದಿ ಬಲಿಯಾಗಿವೆ. ಅವುಗಳ ಶವವನ್ನು ಸಾಗಿಸುವುದೂ ತಡವಾಗುತ್ತಿರುವ ಕಾರಣ, ಮಾಂಸ ತಿನ್ನಲು ನಾಯಿಗಳ ಹಿಂಡೂ ರಸ್ತೆಗೆ ಬಂದು ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದೆ.  

ಎಲ್ಲಿಂದ ದುಡ್ಡು ತರೋದು: ‘ಎಲ್ಲವೂ ಬಿಡಾಡಿ ದನಗಳಲ್ಲ. ಅವುಗಳಿಗೆ ಮಾಲೀಕರೂ ಇರುತ್ತಾರೆ. ಐದು ವರ್ಷಗಳ ಹಿಂದೆ ಕಾರ್ಯಾಚರಣೆ ನಡೆಸಿ ದನಗಳನ್ನು ವಶಕ್ಕೆ ಪಡೆದಾಗ ಎಲ್ಲರೂ ನಗರಸಭೆ ಕಚೇರಿಗೆ ಓಡಿ ಬಂದಿದ್ದರು. ಒಟ್ಟು ₹ 32 ಸಾವಿರ ದಂಡ ಕಟ್ಟಿಸಿಕೊಂಡು, ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದೆವು’ ಎಂದು ಪರಿಸರ ಅಧಿಕಾರಿ ಚಂದ್ರಕಾಂತ ಗಡ್ನವರ ಹೇಳಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಆಗ ಸಿಕ್ಕಿದ್ದ 9 ಬಿಡಾಡಿ ದನಗಳನ್ನು ಅಕ್ಕಿ ಆಲೂರ ಹಾಗೂ ರಾಮಚಂದ್ರಾಪುರ ಗೋಶಾಲೆಗೆ ಬಿಡಲು ಕೇಳಿದ್ದೆವು. ಒಂದು ಹಸುವಿಗೆ ₹5 ಸಾವಿರದಂತೆ ನಿರ್ವಹಣಾ ವೆಚ್ವ ಕೊಟ್ಟರೆ ನೋಡಿಕೊಳ್ಳುವುದಾಗಿ ಅವರು ಹೇಳಿದರು. ಅದು ಅಸಾಧ್ಯವಾಗಿತ್ತು. ಕೊನೆಗೆ ಪ್ರಾಣಿಗಳ ಬಗ್ಗೆ ಕಾಳಜಿವುಳ್ಳ ಎನ್‌ಜಿಒ ಮುಂದೆ ಬಂದು, ಅಷ್ಟೂ ದನಗಳನ್ನು ಬಾದಾಮಿಯ ಶಿವಯೋಗಿ ಮಂದಿರಕ್ಕೆ ಸ್ಥಳಾಂತರಿಸಿತ್ತು’ ಎಂದರು.

ಮಾರುಕಟ್ಟೆಗೂ ನುಗ್ಗುತ್ತವೆ: ಸೊಪ್ಪು, ತರಕಾರಿ ತಿನ್ನಲು ಮಾರುಕಟ್ಟೆಗೂ ನುಗ್ಗುತ್ತಿರುವ ದನಗಳು, ಓಡಿಸಲು ಹೋಗುವ ವ್ಯಾಪಾರಿಗಳ ಮೇಲೂ ಎರಗುತ್ತಿವೆ. ‘ಈ ದನಗಳನ್ನು ನಿಯಂತ್ರಿಸುವ ಸಲುವಾಗಿ ಹಿಂದೆ ವಿಶೇಷ ತಂಡ ರಚಿಸಲಾಗಿತ್ತು. ಅವುಗಳನ್ನು ಗೋಶಾಲೆಗೆ ಬಿಟ್ಟು ಬರಲು ಪ್ರತ್ಯೇಕ ವಾಹನದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ, ಏನಾಯ್ತೋ ಗೊತ್ತಿಲ್ಲ. ಆ ವಾಹನ ಒಮ್ಮೆಯೂ ರಸ್ತೆಗೆ ಇಳಿಯಲೇ ಇಲ್ಲ. ಈಗಾಲಾದರೂ ದನಗಳ ಕಾಟದಿಂದ ಮುಕ್ತಿ ಕೊಡಿಸಿ’ ಎಂದು ತರಕಾರಿ ವ್ಯಾಪಾರಿ ವೆಂಕಣ್ಣ ಸಿದ್ದಾಪುರ ಮನವಿ ಮಾಡಿದರು.

ರಸ್ತೆ ಬಿಟ್ಟು ಕದಲಲ್ಲ‌

ರಸ್ತೆಯಲ್ಲಿ ಹಿಂಡಾಗಿ ನಿಲ್ಲುವ ದನಗಳು ಎಷ್ಟೇ ಹಾರ್ನ್ ಮಾಡಿದರೂ ಕದಲುವುದಿಲ್ಲ. ಇದರಿಂದಾಗಿ ನಿತ್ಯ ದಟ್ಟಣೆಯ ಕಿರಿಕಿರಿ ಉಂಟಾಗುತ್ತಿದೆ. ಈ ಕುರಿತು ವಿದ್ಯಾನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದಲೂ ನಗರಸಭೆಗೆ ಪತ್ರಗಳನ್ನು ಬರೆಯಲಾಗಿದೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ.

ಪ್ರದೀಪ, ವಿದ್ಯಾನಗರ 

***

ಇಂದಿನಿಂದ ಕಾರ್ಯಾಚರಣೆ

‘ರಸ್ತೆಗೆ ಬಿಟ್ಟಿರುವ ನಿಮ್ಮ ಹಸು ಹಾಗೂ ಕುದುರೆಗಳನ್ನು ಕರೆದುಕೊಂಡು ಹೋಗಿ’ ಎಂದು ಶನಿವಾರದಿಂದ ಆಟೊಗಳಿಗೆ ಮೈಕ್ ಕಟ್ಟಿಕೊಂಡು ಘೋಷಣೆ ಕೂಗಿಸುತ್ತಿದ್ದೇವೆ. ಸೋಮವಾರ ನಗರದಾದ್ಯಂತ ಕಾರ್ಯಾಚರಣೆ ನಡೆಸಿ ದನ ಹಾಗೂ ಕುದುರೆಗಳನ್ನು ವಶಕ್ಕೆ ಪಡೆಯಲಿದ್ದೇವೆ‌.

ಚಂದ್ರಕಾಂತ ಗಡ್ನವರ, ಪರಿಸರ ಅಧಿಕಾರಿ 

***

ಪತ್ರ ಬರೆದರೂ ಪ್ರಯೋಜನವಿಲ್ಲ

ಎಂ.ಜಿ.ರಸ್ತೆ, ಸಿದ್ದಪ್ಪ ವೃತ್ತ ಹಾಗೂ ಕಾಗಿನೆಲೆ ಸರ್ಕಲ್‌ನಲ್ಲಿ ಬಿಡಾಡಿ ದನಗಳಿಂದಲೇ ದಟ್ಟಣೆ ಉಲ್ಬಣಗೊಂಡಿದೆ. ಈ ಸಂಬಂಧ ನಗರಸಭೆಗೆ ಪತ್ರಗಳನ್ನು ಬರೆದರೂ ಪ್ರಯೋಜನವಾಗಿಲ್ಲ. ಅವುಗಳ ಸ್ಥಳಾಂತರಕ್ಕೆ ತ್ವರಿತವಾಗಿ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ.

ಜಿ.ಪಲ್ಲವಿ, ಪಿಎಸ್‌ಐ, ಹಾವೇರಿ ಸಂಚಾರ ಠಾಣೆ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.